ಇ-ಟೆಂಡರ್ ಖಂಡಿಸಿ ಎಪಿಎಂಸಿ ಬಂದ್
ಅರಸೀಕೆರೆ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಎಲ್ಲಾ ವರ್ತಕರು ಇ- ಟೆಂಡರ್ ಪದ್ಧತಿ ವಿರೋಧಿಸಿ ಶುಕ್ರವಾರವೂ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಕಳೆದ 2 ವಾರಗಳಿಂದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ವ್ಯಾಪಾರ ವಹಿವಾಟುಗಳಿಗೆ ಸಂಪೂರ್ಣ ವಿರಾಮ ನೀಡಿರುವುದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಸಂಬಂಧಕ್ಕೆ ಪೆಟ್ಟು: ರಾಜ್ಯ ಸರ್ಕಾರ ಈಗಾಗಲೇ ಜಾರಿಗೆ ತಂದಿರುವ 2013 ಕೃಷಿ ಮಾರಾಟ ನೀತಿಯಿಂದ ವರ್ತಕರು ಹಾಗೂ ರೈತರ ನಡುವೆ ಸೌಹಾರ್ಧಯುತ ಸಂಬಂಧಕ್ಕೆ ಕೊಡಲಿ ಪೆಟ್ಟು ನೀಡಿದಂತಾಗಿದೆ.
ಅಲ್ಲದೆ ರೈತರ ಹಿತಾಸಕ್ತಿಗೆ ಸಂಪೂರ್ಣ ಮಾರಕವಾಗಿದ್ದು, ಈ ನೂತನ ಕಾಯ್ದೆಯಿಂದ ರೈತರಿಗೆ ಮತ್ತು ವರ್ತಕರಿಗೆ ಯಾವುದೇ ರೀತಿಯ ಅನುಕೂಲ ಆಗುವುದಿಲ್ಲ ಬದಲಿಗೆ ಖಾಸಗಿ ಕಂಪನಿಗಳಿಗೆ ಹೆಚ್ಚಿನ ವರದಾನವಾಗಿದ್ದು, ಈ ಅವೈಜ್ಞಾನಿಕ ನೀತಿಯನ್ನು ಸರ್ಕಾರ ತಕ್ಷಣ ಕೈಬೀಡಬೇಕು ಎಂದು ಪ್ರತಿಭಟನಾನಿರತ ವರ್ತಕರು ಆಗ್ರಹಿಸಿದರು.
ತೀವ್ರ ಆಕ್ರೋಶ: ಹಳೆಯ ಟೆಂಡರ್ ಪದ್ಧತಿಯು ರೈತರು ಮತ್ತು ವರ್ತಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸುವ ವ್ಯವಸ್ಥೆಯಾಗಿದ್ದು, ವ್ಯಾಪಾರ, ವ್ಯವಹಾರ, ವಹಿವಾಟುಗಳು ಅನೇಕ ವರ್ಷಗಳಿಂದ ಉತ್ತಮವಾಗಿ ನಡೆಯುತ್ತಿತ್ತು. ಆದರೆ ಈಗಿನ ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಎಲೆಕ್ಟ್ರಾನಿಕ್ ಮಾಧ್ಯಮದ ಇ- ಟೆಂಡರ್ ಪದ್ಧತಿ ರೈತರಿಗೆ ಹೆಚ್ಚಿನ ಅನಾನುಕೂಲ ಸೃಷ್ಟಿಸುವ ಜೊತೆಗೆ ರೈತರ ಕೈಗೆ ಹಣ ಸಿಗದ ಪರಿಸ್ಥಿತಿ ನಿರ್ಮಿಸುತ್ತದೆ. ಅಂತಹ ರೈತ ವಿರೋಧಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಸರ್ಕಾರದ ಜಾರಿಗೆ ತರಬಾರದು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವರ್ತಕರ ಸಂಘದ ಅಧ್ಯಕ್ಷ ಜಿ.ವಿ.ಟಿ. ಬಸವರಾಜು, ಕಾರ್ಯದರ್ಶಿ ಎ.ಆರ್. ರಾಜು, ಟಿ.ಎಸ್. ರುದ್ರಯ್ಯ, ಜಿ.ವಿ. ಬಸವರಾಜು, ಮಹಾವೀರ್, ಕೆ. ರಮೇಶ್, ಎಸ್.ಬಿ.ಟಿ. ವೆಂಕಟೇಶ್ ಬಾಬು, ಸತೀಶ್, ಅಶೋಕ್ ಬೊಹ್ರಾ, ಪ್ರಮೋತೇಶ್, ಜಗದೀಶ್, ಸುನಿಲ್, ವಿರುಪಾಕ್ಷಪ್ಪ, ಕಾಂತರಾಜ್, ನಾಗರಾಜ್ ಇದ್ದರು.