ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

Srinivasa Murthy VN
Updated On : 16 Mar 2014, 12:28 pm

ಹೊಳೆನರಸೀಪುರ: ಭಕ್ತಿವರ್ಧನ ಕ್ಷೇತ್ರವೆಂದು ಪುರಾಣ ಪ್ರಸಿದ್ಧಿ ಪಡೆದಿರುವ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವವು ಮಾ. 16ರ ಭಾನುವಾರ ಜರುಗಲಿದ್ದು, ಈ ಕುರಿತಂತೆ ಎಲ್ಲ ಸಿದ್ದತೆಗಳೂ ಮುಗಿದಿದ್ದು, ಮಹಾರಥೋತ್ಸವಕ್ಕೆ ಅಂತಿಮವಾಗಿ ಬ್ರಹ್ಮರಥವನ್ನು ಶುಚಿಗೊಳಿಸಿ ಸಿದ್ಧಗೊಳಿಸಲಾಯಿತು.
ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಜರುಗಲಿರುವ ಬ್ರಹ್ಮರಥೋತ್ಸವದ ಪ್ರಯುಕ್ತವಾಗಿ ಮಾ. 3ರಿಂದ ನಾನಾ ಪೂಜಾ ಕಾರ್ಯಗಳಲ್ಲದೇ, ಹಲವು ವಿಶೇಷ ಉತ್ಸವಗಳು ದೇವಾಲಯದಲ್ಲಿ ಭಕ್ತಾಧಿಗಳ ಸಹಕಾರದೊಂದಿಗೆ ನೆರವೇರಿದವು. ಮಾ. 16ರ ಬೆಳಿಗ್ಗೆ 7ರಿಂದ 8.10ರ ಒಳಗೆ ಮೀನ ಲಗ್ನದಲ್ಲಿ ಶ್ರೀಯವರ ಬ್ರಹ್ಮೋತ್ಸವವು ವೈಖಾನಸ ಆಗಮೋಕ್ತವಾಗಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಹಿರಿಯ ವಕೀಲ ಎ. ತಾಂಡವೇಶ್ವರ ತಿಳಿಸಿದ್ದಾರೆ.
ಭಕ್ತಿವರ್ಧನ ಪ್ರತಿಷ್ಠಾನದ ನೃಸಿಂಹೋತ್ಸವ ಭಕ್ತಿಮೇಳದ ಉದ್ಘಾಟನೆಯನ್ನು 17ರಂದು ಅರಕಲಗೂಡು ತಾಲೂಕಿನ ಅರೆಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಮಾ. ನೆರವೇರಿಸಲಿದ್ದಾರೆ. ನಂತರ ನಡೆಯುವ ನೃತ್ಯ ವೈಭವ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಾದಂ ಬಳಗದಿಂದ ಭಾರತೀಯ ವಿವಿಧ ನೃತ್ಯ ಪ್ರಕಾರಗಳ ಪ್ರದರ್ಶನವಿದೆ. ಮಾ.18ರಂದು ಚೆನ್ನೈನ ಖ್ಯಾತ ಯುವ ಗಾಯಕರಾದ ವಿ. ಅಭಿಷೇಕ್ ರಘುರಾಂ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾ. 19ರಂದು ನಾಡಿನ ಸುಪ್ರಸಿದ್ಧ ಗಾಯಕರಾದ ಡಿ.ಎನ್. ಶ್ರೀವತ್ಸ, ವಿ. ಮಹೇಶಸ್ವಾಮಿ, ಸಂಗೀತ ರವೀಂದ್ರನಾಥ್, ಸಂಜನಾ ಅವರುಗಳ ಗಾಯನ ಸುಧೆಯು ವಿ.ಅನೂರು ಅನಂತಕೃಷ್ಣಶರ್ಮ ಅವರ ನೇತೃತ್ವದಲ್ಲಿ ನೆರವೇರಲಿದೆ.
ಮಾ. 20ರಂದು ಹಿರೇಮಗಳೂರು ಕಣ್ಣನ್ ತಂಡದಿಂದ ಸಂಸಾರ, ಸಂಸ್ಕಾರ ಎಂಬ ವಿಷಯದ ಕುರಿತಂತೆ ಚಿಂತನ-ಮಂಥನ ಕಾರ್ಯಕ್ರಮವಿದೆ. ಕಡೆಯ ದಿನ ಮಾ.21 ರಂದು ಭಕ್ತಿಮೇಳದ ಸಮಾರೋಪ ನಡೆಯಲಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಶಿವಪ್ರಿಯ ನೃತ್ಯ ಬಳಗದ ವತಿಯಿಂದ ಡಾ. ಸಂಜಯ್ ಶಾಂತಾರಂ ಅವರ ನಿರ್ದೇಶನದಲ್ಲಿ ವಿಶೇಷ ನೃತ್ಯರೂಪಕ ಶ್ರೀ ಪ್ರಹ್ಲಾದ ಚರಿತಂ ನೃತ್ಯೋಲ್ಲಾಸ ಕಾರ್ಯಕ್ರಮ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement