ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒಗ್ಗಟ್ಟಿನ ಮಂತ್ರ ಜಪಿಸುವ ಕಾಂಗ್ರೆಸ್ ನಾಯಕರು

Srinivasa Murthy VN
Updated On : 16 Mar 2014, 12:26 pm

ಹೊಳೆನರಸೀಪುರ: ಕಾಂಗ್ರೆಸ್ನಿಂದ ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಭಾರತ ನಿರ್ಮಾಣ ರ್ಯಾಲಿ ಹಾಗೂ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಮಂತ್ರವನ್ನು ಜಪಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಅವರೊಂದಿಗೆ ಕಾಂಗ್ರೆಸ್ ನಾಯಕರಾದ ಎಸ್.ಎಂ. ಆನಂದ್, ಬಿ. ಶಿವರಾಂ,  ಸಿ.ಎಸ್. ಪುಟ್ಟೇಗೌಡ, ಎಚ್.ಕೆ. ಜವರೇಗೌಡ ಅವರು  ಸಾಥ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ, ಕಾಂಗ್ರೆಸ್   ಹಿರಿಯ ಮುಖಂಡರಾದ ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರ ಹೇಳಿಕೆ ವೈಯಕ್ತಿಕ ಹಾಗೂ ಸ್ವಾರ್ಥದ ಹೇಳಿಕೆಯಾಗಿದ್ದು, ಕೆಲವೇ ದಿನಗಳಲ್ಲಿ ಅದರ ಅರ್ಥ ಏನೆಂಬುದು ರಾಜ್ಯದ ಜನರಿಗೇ ತಿಳಿಯಲಿದೆ ಎಂದು ಹೇಳಿದರು.
ಆರೋಪ: ಕಾಂಗ್ರೆಸ್ ನಾಯಕರಾದ ಎಸ್.ಎಂ. ಆನಂದ್ ಅವರಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರಿಗೆ ಎಸ್.ಎಂ. ಆನಂದ್ ಅವರಿಗಿಂತಲೂ ಹೆಚ್ಚಿನ ನೋವಾಗಿರುವಂತೆ ಆನಂದ್ ಅವರ ಬಗ್ಗೆ ಕರುಣೆಯ ಮಾತುಗಳನ್ನಾಡುತ್ತಾ, ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ನಲ್ಲಿ ಬಿತ್ತಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಒಗ್ಗಟ್ಟಿನಿಂದ ಎದುರಿಸುತ್ತೇವೆ: ಈ ಹಿಂದಿನ ಹತ್ತು ವರ್ಷಗಳಿಂದಲೂ ಜಿಲ್ಲೆಯ ಕಾಂಗ್ರೆಸ್ನಲ್ಲಿ ಇಲ್ಲದ ಒಗ್ಗಟ್ಟು, ಹಾಗೂ ಒಳಜಗಳಗಳು ಇದೀಗ ಮಾಯವಾಗಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ನಿಮ್ಮ ಈ ಒಗ್ಗಟ್ಟಿನ ಹಾಗೂ ಬಾಂಧವ್ಯದ ವ್ಯಾಲಿಡಿಟಿ ಎಷ್ಟು ದಿನ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿನ ಅನುಭವ ಹಾಗೂ ಪ್ರಜ್ಞೆಯ ಕೊರತೆ, ದೂರದೃಷ್ಟಿತ್ವದ ಕೊರತೆಯಿಂದಾಗಿ ಇಷ್ಟು ದಿನ ಹೀಗಾಗಿತ್ತು. ಆದರೆ, ಎಲ್ಲವನ್ನೂ ಮರೆತು ಪಕ್ಷ ಹಾಗೂ ಜನರ ಹಿತದೃಷ್ಟಿಯಿಂದ ಎಲ್ಲರೂ ಒಮ್ಮನಸ್ಸು ಹಾಗೂ ಒಗ್ಗಟ್ಟಿನಿಂದ ಒಂದಾಗಿ ಈ ಚುನಾವಣೆ ಎದುರಿಸುತ್ತೇವೆ ಎಂದರು.
ದಕ್ಷತೆ ಇದೆ: ಕಾಂಗ್ರೆಸ್ನಲ್ಲಿ ಹುಮ್ಮನಸ್ಸಿನ ಕೊರತೆಯನ್ನು ಒಪ್ಪಿಕೊಂಡ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಕಾಂಗ್ರೆಸ್ನಲ್ಲಿ ಆರಂಭಿಕವಾಗಿ ಇರುವ ಹುಮ್ಮಸ್ಸು ಆತ್ಮವಿಶ್ವಾಸ ಕೊನೆಗಳಿಗೆಯವರೆಗೆ ಇಲ್ಲದೇ ಹೋಗುವುದೇ ನಮ್ಮ ಲೋಪವಾಗಿದ್ದು, ಅಲ್ಲದೇ ಎಲ್ಲಾ ಬೂತ್ಗಳಲ್ಲಿಯೂ ಸಮರ್ಥ ಏಜೆಂಟರನ್ನು ಕೂರಿಸುವಲ್ಲಿ ಅನುಭವಿಸಿರುವ ಹಿನ್ನಡೆಯನ್ನೂ ಈ ಬಾರಿಯ ಚುನಾವಣೆಯಲ್ಲಿ ಪಕ್ಷ ತಿದ್ದಿಕೊಂಡು ದಕ್ಷತೆಯಿಂದ ಚುನಾವಣೆಯನ್ನು ಎದುರಿಸುವುದಾಗಿ ತಿಳಿಸಿದರು.
ಶಾಸಕ ಎ. ಮಂಜು ಮಾತನಾಡಿ, ಜನರ ಹೋರಾಟ-ಸಂಘಟನೆ ಹಾಗೂ ವಿಶ್ವಾಸದ ಮುಂದೆ ಯಾವುದೇ ಹುದ್ದೆ-ಹಣ ಮತ್ತು ಶಕ್ತಿ ಏನೂ ನಡೆಯಲ್ಲ, ಜನರ ತೀರ್ಪಿನ ಮುಂದೆ ಏನೂ ಸಾಗದು ಎಂದರಲ್ಲದೇ, ಜೆಡಿಎಸ್ ನಾಯಕರ ಒಡೆದು ಆಳುವ ನೀತಿನ್ನು ಈ ಬಾರಿ ಕ್ಷೇತ್ರದ ಮತದಾರರು ಕೊನೆಗಾಣಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಎಸ್.ಎಂ. ಆನಂದ್, ಎಚ್.ಕೆ .ಜವರೇಗೌಡ, ಸಿ.ಎಸ್. ಪುಟ್ಟೇಗೌಡ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement