ದೇವೇಗೌಡರ ಕೊಡುಗೆ ಏನು?
ಅರಸೀಕೆರೆ: ತಮ್ಮ ಮಕ್ಕಳು ಸೊಸೆಯಂದಿರಿಗೆ ಅಧಿಕಾರ ಹಂಚುವ ಕಾರ್ಯದಲ್ಲಿ ಮುಳುಗಿರುವ ಮಾಜಿ ಪ್ರಧಾನಿ ತಮ್ಮ ಅಧಿಕಾರದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಮಾಡಿದ ಕೆಲಸ ಕಾರ್ಯಗಳನ್ನು ಏನೆಂಬುದನ್ನು ಜನತೆ ಮುಂದೆ ಬಹಿರಂಗ ಪಡಿಸಬೇಕಾಗಿದೆ ಎಂದು ಅರಕಲಗೂಡು ಕ್ಷೇತ್ರದ ಶಾಸಕ ಹಾಗೂ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಹೇಳಿದರು.
ಪಟ್ಟಣದ ಶ್ರೀ ಬಸವರಾಜೇಂದ್ರ ಸಮುದಾಯ ಭವನದಲ್ಲಿ ಕಾಂಗ್ರೆಸ್ನ ಭಾರತ ನಿರ್ಮಾಣ ಯಾತ್ರೆ ಅಂಗವಾಗಿ ಶನಿವಾರ ಮಧ್ಯಾಹ್ನ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸ್ವಯಂ ಘೋಷಿತ ಮಣ್ಣಿನ ಮಕ್ಕಳಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಆದರೆ ಜಿಲ್ಲೆಯ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಯಾದರೂ ಏನು ಎಂಬುದನ್ನು ಈ ಲೋಕಸಭಾ ಚುನಾವಣೆಯಲ್ಲಿ ಸಾರ್ವಜನಿಕ ವೇದಿಕೆ ಮೇಲೆ ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಮಾತನಾಡಿ, ಭ್ರಷ್ಟಾಚಾರಕ್ಕೊಳಗಾಗಿದ್ದು ಇದಕ್ಕೆ ಕಡಿವಾಣ ಹಾಕಲು ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಂ. ಆನಂದ್, ಮಾಜಿ ಶಾಸಕ ಕೆ.ಪಿ. ಪ್ರಭು ಕುಮಾರ್, ರಾಜ್ಯ ಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಸಿ.ಎಸ್. ಪುಟ್ಟೇಗೌಡ, ಕೆಪಿಸಿಸಿ ಕಾರ್ಯದರ್ಶಿ ಅಶ್ವಿನ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಗೀಜಿಹಳ್ಳಿ ಗುರುಸಿದ್ದಪ್ಪ, ಕೆಪಿಸಿಸಿ ಸದಸ್ಯ ಪಟೇಲ್ ಶಿವಪ್ಪ, ಎಚ್.ಜಿ. ರೇವಣ್ಣ, ಕಡಾಕಡಿ ಪೀರ್ಸಾಬ್, ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಬಿ.ಎನ್. ರವಿ ಮಾತನಾಡಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಎಚ್.ಕೆ. ಮಹೇಶ್, ಜಾವಗಲ್ ಮಂಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಂತರ್ ಗೌಡ, ಎಸ್.ಆರ್. ಪುಟ್ಟಸಿದ್ದೇಗೌಡ, ಕಬ್ಬಳ್ಳಿ ರಂಗೇಗೌಡ ಶೇಷೇಗೌಡ, ದಂದೂರು ರವಿ, ಅಬ್ದುಲ್ ಜಮೀಲ್, ವಿಜಯ್ ಕುಮಾರ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕೋಡಿಹಳ್ಳಿ ರಘು, ಜಿ.ಟಿ.ಎಸ್. ಗೌಸ್ ಖಾನ್, ಉಮಾಶಂಕರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಯಡಿಯೂರಪ್ಪ ಬಗ್ಗೆ ಪ್ರಶಂಸೆ
ಕಾರ್ಯಕ್ರಮದಲ್ಲಿ ಎ. ಮಂಜು ಮಾತನಾಡುವ ಸಂದರ್ಭದಲ್ಲಿ, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಕುಟುಂಬವನ್ನು ತೆಗಳುವಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹೊಗಳಿದ್ದು ವಿಶೇಷವಾಗಿತ್ತು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೆಲವೇ ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಶಿವಮೊಗ್ಗ ನಗರವನ್ನು ಮತ್ತು ಜಿಲ್ಲೆಯನ್ನು ಹೇಗೆ ಅಭಿವೃದ್ಧಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಮತ್ತು ಅವರ ಮಕ್ಕಳು ಹೋಗಿ ನೋಡಬೇಕಾಗಿದೆ ಎಂದ ಅವರು, ಇಚ್ಛಾಶಕ್ತಿಯಿಲ್ಲದ ವ್ಯಕ್ತಿಗಳು ಯಾರೇ ಅಧಿಕಾರಕ್ಕೆ ಬಂದರೂ ಅವರ ಬೆಂಬಲಿತ ಕೆಲವು ಜನರು ಮತ್ತು ಗುತ್ತಿಗೆದಾರರು ಮಾತ್ರ ಸಮಗ್ರ ಅಭಿವೃದ್ಧಿ ಹೊಂದುತ್ತಾರೆ ಎಂದು ಛೇಡಿಸಿದರು.
'ಕೈ' ವಿರುದ್ಧ ಮಾಜಿ ಶಾಸಕ ಧ್ವನಿ
ಭಾರತ ನಿರ್ಮಾಣ ಕಾರ್ಯಕ್ರಮದಲ್ಲಿ, ಕಾಂಗ್ರೆಸ್ನವರೇ ಆದ ಮಾಜಿ ಶಾಸಕ ಪ್ರಭು ಕುಮಾರ್ ಅವರು ತಮ್ಮ ಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರವನ್ನು ಸಮಾಜದ ಪ್ರತಿಯೊಂದು ಜಾತಿಗೂ ಹಂಚುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಹಾಗೂ ಇದೇ ಕಾರಣಕ್ಕಾಗಿ ಪಕ್ಷದಿಂದ ಜನ ದೂರ ಸರಿಯುವಂತಾಗಿದೆ ಎಂಬುದು ಮಾಜಿ ಪ್ರಭು ಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡ ಅವರು, ನಾನು ಯಾವುದೇ ಗ್ರಾಮಕ್ಕೆ ಭೇಟಿ ನೀಡಿದರೂ ನಿಮ್ಮ ಪಕ್ಷದಲ್ಲಿ ಯಾವ ಯಾವ ಜನಾಂಗದವರಿಗೆ ಅಧಿಕಾರ ನೀಡಿದ್ದೀರಿ. ನಮ್ಮ ಜನಾಂಗದವರಿಗೆ ಯಾವ ಪ್ರಾತಿನಿಧ್ಯ ನೀಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದು ಎಲ್ಲಾ ಜಾತಿ ಜನಾಂಗಗಳಿಗೆ ಪ್ರಾತಿನಿಧ್ಯ ನೀಡಿ ಅಧಿಕಾರ ವಿಕೇಂದಿಕರಣ ಮಾಡಿದ್ದರೆ ಕಾಂಗ್ರೆಸ್ಗೆ ಇಂದಿನ ಅಧೋಗತಿಯ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಗುಡುಗಿದರು.