ಮತ ಜಾಗೃತಿಗೆ ಸ್ವೀಪ್ ಅಭಿಯಾನ
ಹಾಸನ: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಳೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಈ ಪ್ರದೇಶಗಳಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮ ನಡೆಯುತ್ತಿದೆ. 10 ಸಾವಿರ ಮತದಾರರ ಸಮೀಕ್ಷೆಯನ್ನು ಸ್ವೀಪ್ ಸಮಿತಿ ನಡೆಸಿದೆ.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವ ನಾನಾ ತಾಲ್ಲೂಕುಗಳ ಆಯ್ದ 100 ಮತಗಟ್ಟೆಗಳಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾರರ ಮನೋಭಾವ, ಮತದಾನದ ಬಗ್ಗೆ ಅವರಿಗಿರುವ ಅರಿವು ಮತ್ತು ಅನಿಸಿಕೆಗಳನ್ನು ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಎನ್ಎಸ್ಎಸ್ ಇದರಲ್ಲಿ ಪಾಲ್ಗೊಡಿದ್ದಾರೆ. ತಾಲೂಕು ವೈದ್ಯಾಧಿಕಾರಿಗಳು ಮತ್ತು ಶಿಶು ಅಭಿವೃದ್ಧಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ.
ಆಯ್ದ ಪ್ರದೇಶಗಳಲ್ಲಿ ಸಮೀಕ್ಷೆ:ಅರಕಲಗೂಡು ತಾಲೂಕಿನ ಕೋಟೆ ಬೀದಿಯ ಉತ್ತರ ಭಾಗ, ಕೊಣನೂರು ದಕ್ಷಿಣ ಭಾಗ, ತಾತನಹಳ್ಳಿ ಉತ್ತರ, ಹಾಸನದ ತೇಜೂರು, ಮಡೆನೂರು, ಚಿಟ್ಟೇನಹಳ್ಳಿ, ಕುಂಬಾರಬೀದಿ, ಬಳೆಗಾರರ ಬೀದಿ, ಜಾಮೇನಹಳ್ಳಿ, ಕೋಳಗುಂದ, ಗಂಡೆಹಳ್ಳಿ, ಚೀಕನಹಳ್ಳಿ, ಉದಯಗಿರಿ, ಹೌಸಿಂಗ್ ಬೋರ್ಡ್, ಬೇಲೂರಿನ ಶಂಕರ ದೇವನಪೇಟೆ, ಹನುಮಂತ ನಗರ, ರಾಯರ ಬೀದಿ, ಲಕ್ಷ್ಮೀಪುರ, ಸನ್ಯಾಸಿಹಳ್ಳಿ, ನಾಗಸಂದ್ರ, ಶ್ರವಣಬೆಳಗೊಳ ಕ್ಷೇತ್ರದಲ್ಲಿ ಹಾಗೂ ಹಾಸನದ ವಿವೇಕನಗರ, ಹೇಮಾವತಿ ಕಾಲೋನಿ, ಎ.ಕೆ. ಕಾಲೋನಿ, ಜನತಾ ಹೌಸ್ ಕಾಲೋನಿ, ಗಾಯತ್ರಿ ಬಡಾವಣೆ ಸೇರಿದಂತೆ ಇತರೆಗಳಲ್ಲಿ ಕಡಿಮೆ ಮತದಾನವಾಗಿದ್ದು, ಇಲ್ಲಿ ಸಮೀಕ್ಷೆ ನಡೆಸಲಾಗಿದೆ.
ಪ್ರಮುಖ ಕಾರಣಗಳು: ಮತದಾನ ಮಾಡದಿರಲು, ಹಾಸನದಿಂದ ಬೇರೆಡೆಗೆ ವರ್ಗಾವಣೆಗೊಂಡಿರುವುದು, ಮತ್ತೆ ಕೆಲವರಿಗೆ ಬೇರೆಡೆಯಿಂದ ಹಾಸನಕ್ಕೆ ವರ್ಗಾವಣೆಗೊಂಡಿರುವುದು ಪ್ರಮುಖ ಕಾರಣಗಳು ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಇದಲ್ಲದೇ, ಆರೋಗ್ಯದ ಸಮಸ್ಯೆ, ದೂರದ ಮತದಾನದ ಕೇಂದ್ರ, ಚುನಾವಣೆಯಲ್ಲಿ ಆಸಕ್ತಿ ಇಲ್ಲದ ಮನಸ್ಥಿತಿಗಳೂ ಮತದಾನ ಮಾಡದಿರುವುದಕ್ಕೆ ಕಾರಣವಾಗಿವೆ.
ಈ ಹಿನ್ನೆಲೆಯಲ್ಲಿ, ಮತದಾನದ ಪ್ರಮಾಣ ಕಡಿಮೆ ಆಗಿರುವಂತಹ ಪ್ರದೇಶದಲ್ಲಿ ಮನೆ ಮನೆ ತೆರಳಿ ಅರಿವು ಮೂಡಿಸುವ ಸಲುವಾಗಿ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಆಟೋ ಪ್ರಚಾರದ ಮೂಲಕ ಮತದಾರರಿಗೆ ಅರಿವು ನೀಡುವ ಕಾರ್ಯಕ್ರಮವನ್ನು ಸಮಿತಿ ಆಯೋಜಿಸಿದೆ.
ಹಾಸನ ನಗರ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮುಖ್ಯವಾಗಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಮತದಾನದ ಪ್ರದೇಶಗಳಲ್ಲಿ ಈ ಧ್ವನಿವರ್ಧಕಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗುತ್ತಿದೆ. ಮನೆ ಮನೆಗೆ ತೆರಳಿ ಸಮೀಕ್ಷೆಯನ್ನು ನಡೆಸಿ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಹೆಸರು ಸೇರ್ಪಡೆಗೆ ಇಂದೇ ಕಡೇ ದಿನ
ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಅರ್ಹ ಮತದಾರರ ಹೆಸರನ್ನು ಸೇರಿಸಲು ಮಾ. 16 ಕೊನೆ ದಿನವಾಗಿದೆ. ಜಿಲ್ಲೆಯ 1980 ಮತಗಟ್ಟೆಗಳಲ್ಲಿ ಆಯೋಗದ ನಿರ್ದೇಶನದಂತೆ ಅಭಿಯಾನ ನಡೆಸಲಾಗುತ್ತಿದೆ. ಮತದಾರರು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ಸೇರ್ಪಡೆಗೆ ನಮೂನೆ-6, ಬಡಿತಕ್ಕದ್ದಕ್ಕೆ-7, ತಿದ್ದುಪಡಿಗೆ-8 ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿನ ಸ್ಥಳ ಬದಲಾವಣೆ ಸಂದರ್ಭದಲ್ಲಿ 8ಎ ನಮೂನೆಗಳನ್ನು ಸೂಕ್ತವಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮತಗಟ್ಟೆ ಅಧಿಕಾರಿ (ಬಿಎಲ್ಓ)ಗಳಿಗ ನೀಡಬೇಕು.
ವಿದ್ಯಾರ್ಥಿಗಳಿಗೆ ಪ್ರತಿಜ್ಞೆ
ಪದವಿ ಕಾಲೇಜುಗಳಿಗೆ ಎನ್ಎಸ್ಎಸ್ ವಿದ್ಯಾರ್ಥಿಗಳು ತೆರಳಿ ಬನ್ನಿ ಮತದಾನದ ಪ್ರತಿಜ್ಞೆ ಮಾಡೋಣ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ.
ಕಲಾತಂಡಗಳಿಂದ ಅರಿವು
ಮತದಾನದ ಪ್ರಮಾಣ ಕಡಿಮೆಯಾಗಿರುವಂತಹ ಬೂತ್ಗಳಿಗೆ ತೆರಳಿ ಅಲ್ಲಿ ಮತದಾನದ ಬಗ್ಗೆ ಅರಿವನ್ನು ಮೂಡಲಾಗುತ್ತದೆ. ಮನೆ ಮನೆಗೆ ತೆರಳಿ ಕರಪತ್ರಗಳ ಮೂಲಕ ಮತದಾರರಲ್ಲಿ ಜಾಗೃತಗೊಳಿಸಲಾಗುತ್ತಿದೆ.