ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸ್ತ್ರೀಯರ ಸಮಸ್ಯೆ ನಿವಾರಣೆಗೆ ನಾಯಕತ್ವ ಬೇಕು'

Srinivasa Murthy VN
Updated On : 16 Mar 2014, 12:28 pm

ಹಾಸನ: ಮಹಿಳೆಯರ ನಾಯಕತ್ವ ದೇಶದಲ್ಲಿ ಬಂದರೆ ಅವರ ಸಮಸ್ಯೆ ನಿವಾರಣೆ ಆಗಬಹುದು ಎಂದು ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ ಮೂರ್ತಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ ಕಾಲೇಜು, ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಅನ್ವೇಷಣಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾತಿನಿಧ್ಯವಿಲ್ಲ: ಏ. 17ರಂದು ಲೋಕಸಭಾ ಚುನಾವಣೆ ನಡೆಯಲಿದ್ದು, ಇರುವ ಮೂರು ಪ್ರಮುಖ ಪಕ್ಷಗಳಿಂದ ಯಾವ ಪಕ್ಷಗಳಲ್ಲಿ ಮಹಿಳೆಗೆ ಎಷ್ಟೆಷ್ಟು ಟಿಕೆಟ್ ನೀಡಲಾಗಿದೆ ಎಂದು ಪ್ರಶ್ನಿಸಿದರು. ಪಾರ್ಲಿಮೆಂಟ್ನಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮಸೂದೆ ಬಂದು ಅನೇಕ ವರ್ಷಗಳಾಗಿವೆ. ಸಮರ್ಪಕ ಮೀಸಲಾತಿ ಕೊಡದೆ ಹೆಣ್ಣು ಮಕ್ಕಳಿಗೆ ಪ್ರಾತಿನಿಧ್ಯ ಸಿಗಲಾರದು ಎಂದು ಆತಂಕ ವ್ಯಕ್ತಪಡಿಸಿದರು.
ಗಮನಹರಿಸಬೇಕು: ಮಹಿಳೆಯರು ರಾಜಕಾರಣಕ್ಕೆ ಬರುವುದು ಕಠಿಣ ಎಂದ ಅವರು, ಮಹಿಳೆಯರ ನಾಯಕತ್ವ ಬಂದರೆ ಹೆಣ್ಣು ಮಕ್ಕಳ ಸಮಸ್ಯೆ ನಿವಾರಣೆ ಆಗುತ್ತದೆ. ಇಂತಹ ವಿಷಯಗಳ ಬಗ್ಗೆ ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಗಳ ಮುಚ್ಚುವಿಕೆ: ಜಾಗತೀಕರಣದಂತಹ ಯುಗದಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಖಾಸಗಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಬೆಳೆಸುತ್ತಿದ್ದಾರೆ. ವಿದ್ಯಾಭ್ಯಾಸದ ನಂತರ ಸರ್ಕಾರಿ ಉದ್ಯೋಗವನ್ನೇ ಆರಿಸಕೊಳ್ಳಲಾಗುತ್ತಿದೆ. ಹಳ್ಳಿಗಾಡಿನ ಸರ್ಕಾರಿ ಶಾಲೆಗಳೆಲ್ಲಾ ಒಂದೊಂದಾಗಿ ಮುಚ್ಚುತ್ತಾ ಬರಲಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.
ಒಳ್ಳೆಯ ವಾತಾವರಣ ಬೇಕು: ಇಂಥ ಪ್ರವೃತ್ತಿ ಹೋಗಲಾಡಿಸಲು ವಿದ್ಯಾರ್ಥಿಗಳು ಗಂಭೀರ ಅಧ್ಯಯನ ಮಾಡುವ ಅಗತ್ಯವಿದೆ. ಪ್ರಸ್ತುತ, ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ವಾತಾವರಣ ಕಂಡುಬರುತ್ತಿದ್ದು, ಅದೇ ರೀತಿ ಗ್ರಾಮೀಣ ಮಟ್ಟದಲ್ಲೂ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.
ರೈತರ ಸಮಸ್ಯೆಗೆ ಸ್ಪಂದಿಸಿ: ರೈತ ಬೆಳೆದ ಬೆಳೆಗೆ ಬೆಲೆ ಸಿಗದೆ ಎಲ್ಲವನ್ನೂ ತಿಪ್ಪೆಗೆ ಎಸೆಯುತ್ತಿದ್ದಾನೆ. ವಿದ್ಯಾರ್ಥಿಗಳು ಕೇವಲ ಉದ್ಯೋಗದ ದೃಷ್ಟಿ ಇಟ್ಟುಕೊಳ್ಳದೆ ಸಮಾಜದಲ್ಲಿ ರೈತನ ಸಮಸ್ಯೆ ಬಗ್ಗೆಯೂ ಯೋಚಿಸಿ ಪರಿಹಾರ ನೀಡಲು ಯತ್ನಿಸಬೇಕು ಎಂದು ಕರೆ ನೀಡಿದರು.
ಸನ್ಮಾನ: ಕಾರ್ಯಕ್ರಮದಲ್ಲಿ 2012-13ರ ಶೈಕ್ಷಣಿಕ ವರ್ಷದಲ್ಲಿ ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ 10 ರ್ಯಾಂಕ್ ಒಳಗೆ 8 ರ್ಯಾಂಕ್ ಪಡೆದು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಮೈಸೂರು ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಅಧ್ಯಕ್ಷರಾದ ಡಾ. ಗುರುರಾಜ ಬೆಡೆಕರ್, ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರು ಪ್ರೊ. ಡಿ.ಜಿ. ಕೃಷ್ಣೇಗೌಡ, ಕಾಲೇಜಿನ ಪ್ರಾಂಶುಪಾಲ ಡಾ. ಐ.ಎಮ್. ಮೋಹನ್ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವಿ. ಸುನೀತ, ಡಿ. ವನೀತಾ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement