ರೇಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ
ಅರಸೀಕೆರೆ: ಪಟ್ಟಣದಿಂದ ಸುಬ್ರಹ್ಮಣ್ಯನಗರ, ಮಲ್ಲೇಶ್ವರ ಬಡಾವಣೆ, ಅಂಚೆಕೊಪ್ಪಲು ಸೇರಿದಂತೆ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ರೇಲ್ವೆ ಲೆವೆಲ್ ಕ್ರಾಸಿಂಗ್ ಅಡ್ಡಿಯಾಗಿದ್ದು ಸರ್ಕಾರ ಕೂಡಲೇ ರೇಲ್ವೆ ಮೇಲ್ಸೇತುವೆ ನಿರ್ಮಿಸಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಶಾಲಾ ಕಾಲೇಜುಗಳು ಶೀಘ್ರದಲ್ಲೇ ಆರಂಭವಾಗಲಿವೆ. ಮಲ್ಲೇಶ್ವರ, ಸುಬ್ರಹ್ಮಣ್ಯ ನಗರ ಸೇರಿದಂತೆ ಈ ಭಾಗದಿಂದ ಪಟ್ಟಣಕ್ಕೆ ಆಗಮಿಸುವವರು ರೇಲ್ವೆ ಕೆಳ ಸೇತುವೆ ಮೂಲಕವೇ ಪ್ರಯಾಣಿಸಬೇಕು. ಇದು ಕೊಂಕಣ ಸುತ್ತಿ ಮೈಲಾರ ತಲುಪಿದಂತಾಗುತ್ತಿದೆ. ಅಲ್ಲದೇ ತಡರಾತ್ರಿ ಆಗಮಿಸುವ ರೇಲ್ವೆ ಪ್ರಯಾಣಿಕರು ಈ ಪ್ರದೇಶಗಳಿಗೆ ಆಟೋಗಳ ಮೂಲಕ ತೆರಳಲು ದುಬಾರಿ ಹಣ ತೆರುವಂತಾಗಿದೆ.
ರೈಲ್ವೆ ಕೆಳಸೇತುವೆಯ ಬಳಿ ವಿದ್ಯುತ್ ಸೌಲಭ್ಯವಾಗಲಿ, ಸಮರ್ಪಕ ರಸ್ತೆ ಸಂಪರ್ಕವಾಗಲಿ ಇಲ್ಲದಿರುವುದು ಅನೇಕ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ. ಪರಿಸ್ಥಿತಿ ಹೀಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ನಾಗರಿಕರ ಸಂಕಷ್ಟ ಅರಿಯುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ರೇಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
ಅಪಾಯಕ್ಕೆ ಆಹ್ವಾನ: ಲಕ್ಷ್ಮೀಪುರ ಬಡಾವಣೆಯ ಮಾರ್ಗವಾಗಿ ಕಾಳನಕೊಪ್ಪಲು ಸೇರಿದಂತೆ ವಿವಿಧ ಭಾಗಗಳಿಗೆ ಆಗಮಿಸುವವರು ರೇಲ್ವೆ ಹಳಿಗಳನ್ನು ದಾಟಿ ಹೋಗಬೇಕಿದ್ದು ಕೆಲವೊಮ್ಮೆ ಗೂಡ್ಸ್ ರೈಲುಗಳ ನಿಲುಗಡೆಯಿಂದಾಗಿ ಕೆಲವರು ಆತುರದಲ್ಲಿ ಅವುಗಳ ತಳಭಾಗದಲ್ಲಿ ನುಸುಳಿ ಹೋಗುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಅಲ್ಲದೇ ಈಗ ನಿರ್ಮಿಸಿರುವ ಸೇತುವೆ ವಸತಿ ಪ್ರದೇಶದಿಂದ ದೂರವಿದ್ದು, ನಿರ್ಜನ ಪ್ರದೇಶವಾಗಿದೆ. ಇಲ್ಲಿ ಕಳ್ಳಕಾಕರು, ಪೋಲಿ ಪುಂಡರ ಕಾಟ ಹೆಚ್ಚಾಗಿದ್ದು ಅಪಾಯಗಳು ಸಂಭವಿಸುವ ಮುನ್ನ ರೇಲ್ವೆ ಇಲಾಖೆ ಎಚ್ಚೆತ್ತು ಮೇಲ್ಸೇತುವೆ ನಿರ್ಮಿಸುವುದು ಉತ್ತಮ.