ರೈತರಲ್ಲಿ ಆತಂಕ ತಂದ ಭೂ ಸ್ವಾಧೀನ
-ದಯಾಶಂಕರ ಮೈಲಿ
ಕ.ಪ್ರ.ವಾರ್ತೆ ಹಾಸನ ಮೇ 10
ಇಲ್ಲಿನ ರೈತರು ತಮ್ಮದಲ್ಲದ ತಪ್ಪಿಗೆ ಬದುಕನ್ನು ಕಳೆದುಕೊಳ್ಳಬೇಕಾದ ದುಸ್ಥಿತಿ ಎರಗಿದೆ. ಸುಮಾರು 32 ವರ್ಷಗಳಿಂದ ಉಳುಮೆ ಮಾಡಿ ಬದುಕಿನ ಬಂಡಿ ಸಾಗಿಸಲು ಕಾರಣವಾಗಿದ್ದ ಜಮೀನನ್ನು ಕಳೆದುಕೊಳ್ಳುವ ಆತಂಕ ಎದುರಿಸಬೇಕಾಗಿದೆ.
ಹಾಸನ ತಾಲೂಕು ಸಾಲಗಾಮೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಯಲಗುಂದ, ಚೌಡೇನಹಳ್ಳಿ, ರಾಮದೇವರಪುರ, ಕೆಲವತ್ತಿ, ಸುಂಡಹಳ್ಳಿ, ಹರುವನಹಳ್ಳಿ ಗ್ರಾಮಗಳಲ್ಲಿ ವಾಸಿಸುವ 504 ಕುಟುಂಬಗಳು ಭೂಮಿ ಕಳೆದುಕೊಳ್ಳುವ ಭಯ, ಆತಂಕ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ, ರಾಜ್ಯ ಸರ್ಕಾರ ಇತ್ತೀಚೆಗೆ ನಾಟಿ ಹಸುಗಳ ಮೇವಿಗಾಗಿ ಬಿಟ್ಟಿದ್ದ ಅಮೃತ ಮಹಲ್ ಪ್ರದೇಶವನ್ನು ವಶಪಡಿಸಿಕೊಂಡು ಅದನ್ನು ಗೋ ಸಂರಕ್ಷಣಾ ಕೇಂದ್ರಗಳನ್ನು ಮಾಡುವ ಆದೇಶ ಹೊರಡಿಸಿರುವುದು.
ಆದರೆ, ಅಮೃತ ಮಹಲ್ ಪ್ರದೇಶಕ್ಕೆ ಸೇರಿದ 504 ಎಕರೆ ಭೂಮಿಯನ್ನು ಮೇಲ್ಕಂಡ ಗ್ರಾಮಗಳ 504 ರೈತರಿಗೆ ತಲಾ ಒಂದು ಎಕರೆಯಂತೆ ನೀಡಲಾಗಿತ್ತು. ಅದಕ್ಕೆ 2002-03ರಲ್ಲಿ ಸಾಗುವಳಿ ಪತ್ರ ನೀಡಲಾಗಿತ್ತು. ಅಲ್ಲದೇ 2006ರಲ್ಲಿ ಹಾಸನ ತಾಲೂಕಿನ ತಹಸೀಲ್ದಾರ್ ಆಗಿದ್ದ ಟಿ. ಲಕ್ಕೇಗೌಡ ಅವರು, 76 ಎಕರೆಗೆ ಪಹಣಿಯನ್ನೂ ಸಹ ನೀಡಿ ಸಕ್ರಮಗೊಳಿಸಿದ್ದಾರೆ. ಇದರ ಆಧಾರದ ಮೇಲೆ ರೈತರು, ಸರ್ಕಾರದಿಂದ ದೊರೆಯುವ ಸಾಲ ಮತ್ತಿತರ ಸವಲತ್ತು ಪಡೆದುಕೊಂಡಿದ್ದಾರೆ.
ಈಗ ಭೂಮಾಪನ ಇಲಾಖೆ, ಅಮೃತ ಮಹಲ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ರೈತರ ಜಮೀನಿನ ಸುತ್ತಲು ಕಲ್ಲನ್ನು ನೆಟ್ಟು ಅಳತೆ ಕಾರ್ಯ ಆರಂಭಿಸಿದೆ. ಇದು ರೈತರಲ್ಲಿ ಬದುಕು ಕಳೆದುಕೊಳ್ಳುವ ಆತಂಕ ಸೃಷ್ಟಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಮಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ.
ಸಮಸ್ಯೆಯ ಮೂಲ ಏನು?
ಮೈಸೂರು ಮಹಾರಾಜರು ನಾಟಿ ತಳಿಗಳಾದ ಹಳ್ಳಿಕಾರು ದನ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಡೆಯ ಜಾನುವಾರುಗಳಿಗೆ ಬೇಸಿಗೆಯಲ್ಲಿ ಅಮೃತ್ ಮಹಲ್ ಹೆಸರಿನಲ್ಲಿ ಭೂಮಿಯನ್ನು ಬಿಟ್ಟಿದ್ದರು. ಗೋಮಾಳ ರೀತಿಯಲ್ಲಿದ್ದ ಈ ಭೂಮಿ, ತದನಂತರದ ದಿನಗಳಲ್ಲಿ ಪಾಳು ಬಿದ್ದ ಕಾರಣ ಉಳುಮೆ ಆರಂಭಿಸಲಾಯಿತು. ಸರ್ಕಾರಗಳು ಸಾಗುವಳಿ ಪತ್ರ ನೀಡಿ ಇದನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದವು.
ಈ ಪ್ರದೇಶದ 540 ಎಕರೆ ಭೂಮಿ ಬರುವುದು ಸಾಲಗಾಮೆ ಹೋಬಳಿಯಲ್ಲಿ ಬರುವ ತಿರುಮಲ ದೇವರ ಗುಡ್ಡ (ಟಿಟಿ ಗುಡ್ಡ) ಸರ್ವೆ ನಂಬರ್ 2ರಲ್ಲಿ. ಆದರೆ, ಪಹಣಿ ಮತ್ತು ಖಾತೆ ಆಗಿರುವ ಮೀಸಲು ಅರಣ್ಯ ಇರುವುದು ಸರ್ವೆ ನಂ. 3ರಲ್ಲಿ. ಈ ಯಡವಟ್ಟಿನಿಂದ ಅರಣ್ಯ ಇಲಾಖೆ, ಭೂಮಾಪನ ಇಲಾಖೆಗಳು ಸರ್ವೆ ಕಾರ್ಯ ಆರಂಭಿಸಿ, ಭೂಮಿ ವಶಪಡಿಸಿಕೊಳ್ಳಲು ಮುಂದಾಗಿವೆ ಎಂದು ಹೇಳಲಾಗುತ್ತಿದೆ.
ಹೋರಾಟಕ್ಕೆ ಸಿದ್ಧ: ರೈತರು ನೆಟ್ಟಿರುವ ಕಲ್ಲನ್ನು ಕಿತ್ತು ಹಾಕುವ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಏನೇ ಇರಲಿ, ಇದು 504 ರೈತ ಕುಟುಂಬಗಳ ಬದುಕಿನ ಪ್ರಶ್ನೆ. ಆದ್ದರಿಂದ ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿಗಳು, ಕೂಡಲೇ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.
ನಕಾಶೆಯಲ್ಲಿ 504 ಎಕರೆ ಭೂಮಿ ಅಮೃತ್ ಮಹಲ್ಗೆ ಸೇರಿದ ಭೂಮಿ ಎಂದೇ ಇದೆ. ಆದರೆ, ಇದೇ ಭೂಮಿಯಲ್ಲಿ ಉಳುಮೆ ಮಾಡಲು 1982ರಲ್ಲಿ ನಮಗೆ ಅವಕಾಶ ನೀಡಲಾಯಿತು. ನಂತರ ಸಾಗುವಳಿ ಪತ್ರ ನೀಡಲಾಯಿತು. ನಂತರ ಅನೇಕ ಮಂದಿಗೆ ಪಹಣಿ ನೀಡಲಾಯಿತು. ಇದರ ಆಧಾರದ ಮೇಲೆ ಲೋನ್ ಕಾರ್ಡ್ ಮತ್ತಿತರ ಸರ್ಕಾರಿ ಸೌಲಭ್ಯಗಳನ್ನೂ ರೈತರು ಪಡೆದಿದ್ದಾರೆ. ಆದರೆ ಈಗ ಅರಣ್ಯ ಇಲಾಖೆಯಲ್ಲಿ ಇದ್ದರೂಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವ ಅರಣ್ಯ ಪ್ರದೇಶ ಸರ್ವೆ ಕಾರ್ಯ ನಡೆಸುವ ಘಟಕ 504 ಎಕರೆ ಅಮೃತ್ ಮಹಲ್ ಹಗಲಲ್ಲದೇ ಮೀಸಲು ಅರಣ್ಯಕ್ಕೂ ಸೇರಿದ್ದು, ಆದ್ದರಿಂದ ಸರ್ವೆ ಮಾಡಲಾಗುತ್ತಿದೆ. ಇದನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳುತ್ತಿದ್ದಾರೆ. ಭೂಮಿಯೇ ನಮಗೆ ಗತಿ. ಹೀಗಾದರೆ, ಹೇಗೆ ?
-ಪ್ರಕಾಶ್, ಚೌಡೇನಹಳ್ಳಿ ರೈತ