ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೊಂದು ಕಾರಿನೊಳಗೆ ಇಟ್ಟು ವ್ಯಕ್ತಿಯ ದಹನ

Srinivasa Murthy VN
Updated On : 19 May 2014, 11:53 am

ಅರಸೀಕೆರೆ: ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ನಂತರ ಕಾರಿನಲ್ಲಿರಿಸಿ ಬೆಂಕಿ ಹಚ್ಚಿ ಸುಡುವ ಪ್ರಯತ್ನ ತಾಲೂಕಿನ ಹಾರನಹಳ್ಳಿ ಸಮೀಪ ಬೆಲವತ್ತಹಳ್ಳಿ ಅರಣ್ಯ ಪ್ರದೇಶದಲ್ಲಿ ಸೋಮವಾರ ಮುಂಜಾನೆ ನಡೆದಿರುವುದು ಬೆಳಕಿಗೆ ಬಂದಿದೆ. ತಾಲೂಕಿನ ಅರಣ್ಯ ಇಲಾಖೆ ವನಪಾಲಕ ಎ.ಆರ್.ಸ್ವಾಮಿ ಎಂಬುವವರು ಸೋಮವಾರ ಬೆಳಿಗ್ಗೆ ಎಂದಿನಂತೆ ಬೀಟ್ ತೆರಳಿದ್ದ ವೇಳೆ ಬೆಲವತ್ತಹಳ್ಳಿ ಅರಣ್ಯ ಪ್ರದೇಶದ ಶ್ರೀಕಲ್ಲೇಶ್ವರಸ್ವಾಮಿ ದೇವಾಲದ ಸಮೀಪದಲ್ಲಿ ಕಾರೊಂದು ಬೆಂಕಿ ಹತ್ತಿ ಉರಿಯುತ್ತಿದ್ದ ದೃಶ್ಯ ಕಂಡುಬಂದಿದೆ. ನಂತರ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ ವೇಳೆಯಲ್ಲಿ ಉರಿಯುತ್ತಿದ್ದ ಕಾರಿನಲ್ಲಿ ವ್ಯಕ್ತಿಯ ಮೃತ ದೇಹ ಕಂಡು ಆತಂಕಗೊಂಡ ಈ ವನಪಾಲಕ ತಕ್ಷಣವೇ ಅರಸೀಕೆರೆ ಗ್ರಾಮಾಂತರ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಪರಿಶೀಲನೆ ಕಾರ್ಯ ಕೈಗೊಂಡಿದ್ದಾರೆ. ವನಪಾಲಕ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾರಿನ ನಂಬರ್ ಪ್ಲೇಟ್‌ನಲ್ಲಿ ಹಾಸನದ ನೋಂದಣಿ ಸಂಖ್ಯೆ ಇರುವುದು ತಿಳಿದುಬಂದಿದೆ.

ಸಾಮೂಹಿಕ ಉಪನಯನ
ಹಾಸನ: ತಾಲೂಕು ವಿಶ್ವಕರ್ಮ ಸಮಾಜ ಹಾಗೂ ವಿಶ್ವಕರ್ಮ ಯುವಕ ಸಂಘ, ಗಾಯತ್ರಿ ಮಹಿಳಾ ಮಂಡಳಿಗಳ ಆಶ್ರಯದಲ್ಲಿ ಶ್ರೀ ಪೋತಲೂರು ವೀರಬ್ರಹ್ಮೇಂದ್ರ ಸ್ವಾಮೀಜಿಯವರ ಆರಾಧನಾ ಮಹೋತ್ಸವದ ಅಂಗವಾಗಿ ಸಾಮೂಹಿಕ ಉಪನಯನ ನಡೆಯಿತು. ಸ್ವಾಮಿ ಅವರಿಗೆ ಅಭಿಷೇಕ, ಅಲಂಕಾರ ಮತ್ತು ಮಂಗಳಾರತಿ ನಂತರ ವಿಶ್ವಕರ್ಮ ಸಭಾಂಗಣದಲ್ಲಿ ಕಾಳಿಕಾಂಬ ದೇವಾಲಯ ಅರ್ಚಕ ಪುರೋಹಿತ ಪ್ರವೀಣ್ ಅವರ ನೇತೃತ್ವದಲ್ಲಿ 26 ವಟುಗಳಿಗೆ ಬ್ರಹ್ಮೋಪದೇಶ ನೀಡಲಾಯಿತು ಎಂದು ತಾಲೂಕು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಜಿ.ಎನ್. ಡಂಕಣಾಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ.ಪ್ರಾ. ಅಧ್ಯಕ್ಷರ ಕಾರ್ಯಕ್ರಮ ಇಂದು
ಹಾಸನ: ಕನ್ನಡ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ  ಡಾ. ಮುಖ್ಯಮಂತ್ರಿ ಚಂದ್ರು ಅವರು ಮೇ 20 ರಂದು ಜಿಲ್ಲೆಗೆ  ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11.30 ಕ್ಕೆ  ಹಾಸನ ನಗರಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಅರಸೀಕೆರೆಯಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನದ ಪ್ರಗತಿ ಬಗ್ಗೆ ಮಾಹಿತಿ ಪಡೆಯಲಿದ್ದು ಮಧ್ಯಾಹ್ನ 1 ಗಂಟೆಗೆ  ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮರುಮಾರಮ್ಮ ಜಾತ್ರಾ ಮಹೋತ್ಸವ
ಹಾಸನ: ತಾಲೂಕಿನ ತೇಜೂರು ಗ್ರಾಮದಲ್ಲಿ  ಮೇ 21ರಂದು ಆದಿಶಕ್ತಿ ಮರು ಮಾರಮ್ಮ ಮತ್ತು ಶ್ರೀ ಓಂಟಿಕತ್ತಯ್ಯನವರ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಅರ್ಚಕ ಕುಮಾರಸ್ವಾಮಿ ತಿಳಿಸಿದ್ದಾರೆ.

ಕೊಳವೆಬಾವಿಗಾಗಿ ಗ್ರಾಮಸ್ಥರ ಆಗ್ರಹ
ಹಳೇಬೀಡು: ಸಮೀಪದ ಕಟ್ಟೇಸೋಮನಹಳ್ಳಿ ಗ್ರಾಮದಲ್ಲಿ ಎರಡು ವರ್ಷದಿಂದ ಕುಡಿಯುವ ನೀರಿಗೆ ಕೊರೆದಿರುವ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಕೊಳವೆಬಾವಿ ರೀಬೋರ್ ಮಾಡಿದರೂ ನೀರು ಬಂದಿಲ್ಲ. ಬೋರ್ ಗಾಡಿ ವಾಪಸ್ ತೆಗೆದುಕೊಂಡು ಹೋಗದಂತೆ ಗ್ರಾಮದ ನಾನಾ ಸ್ತ್ರೀಶಕ್ತಿ ಸಂಘದ ಮಹಿಳೆಯರು ಹಾಗೂ ಗ್ರಾಮಸ್ಥರು ಪ್ರತಿಭಟಿಸಿದರು. ಕಟ್ಟೇಸೋಮನಹಳ್ಳಿ ಗ್ರಾಮದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕೊಳವೆ ಬಾವಿಗಳು ನಿಂತು ಹೋಗಿವೆ. ಇರುನ ಒಂದು ಕೆರೆಯಲ್ಲಿ ಒಂದು ತೊಟ್ಟು ನೀರಿಲ್ಲದೆ ಜನ, ಜಾನುವಾರು ಕುಡಿಯುವ ನೀರಿಗೆ ಎರಡು ವರ್ಷದಿಂದ ಪರದಾಡುವಂತಾಗಿದೆ ಎಂದು ದೂರಿದರು. ಶಾಸಕರಿಗೆ ಹಲವಾರು ಬಾರಿ ಕುಡಿಯುವ ನೀರಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ. ಹಳೇ ಬಾವಿಯನ್ನೇ ರೀಬೋರ್ ಮಾಡಲು ಶಾಸಕರು ತಿಳಿಸಿದ್ದರು. ಗುತ್ತಿಗೆದಾರ ಹಳೇಬಾವಿಯನ್ನೇ 100 ಅಡಿಗಳವರೆಗೆ ರೀಬೋರ್ ಮಾಡಿದರೂ ನೀರು ಬಂದಿಲ್ಲ ಎಂದರು. ವಾಪಸ್ ಹೋಗಲು ಯತ್ನಿಸಿದ ಗಾಡಿಯನ್ನು ತಡೆದ ಗ್ರಾಮಸ್ಥರು ಗ್ರಾಮದಲ್ಲಿ ಶಾಸಕರು ಕುಡಿಯುವ ನೀರಿಗೆ ಮತ್ತೊಂದು ಬೋರ್‌ವೆಲ್ ಕೊರೆಸುವವರೆಗೂ ಬಿಡುವುದಿಲ್ಲವೆಂದು ತಡೆದು ಪ್ರತಿಭಟಿಸಿದರು. ಗ್ರಾಮದ ಪ್ರಮುಖರಾದ ಜಗದೀಶ್ ಕೆ. ಪಿ. ಶಾಂತಮಲ್ಲಪ್ಪ, ಗುರುಶಾಂತ ಜಯಲಕ್ಷ್ಮಿ, ಶೋಭಾ, ಕಮಲಮ್ಮ ಇದ್ದರು.

ಸರ್ಕಾರದ ಯೋಜನೆಗಳ ದುರುಪಯೋಗ: ಆರೋಪ
ಹಾಸನ: ಸಕಲೇಶಪುರ ತಾಲೂಕಿನಲ್ಲಿ ರಾಜ್ಯ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪದೆ ದುರುಪಯೋಗವಾಗುತ್ತಿದ್ದು, ಅದೇ ರೀತಿ ಮುಂದುವರೆದರೆ ಹೋರಾಟ ಕೈಗೊಳ್ಳುವುದಾಗಿ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಘಟಕದ ರಾಜ್ಯ ಕಾರ್ಯದರ್ಶಿ ಡಿ.ಸಿ.ಸಣ್ಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ಸಕಲೇಶಪುರದಲ್ಲಿ ಬಡ ಕುಟುಂಬಗಳಿಗೆ ತಲುಪದೆ ದುರುಪಯೋಗವಾಗುತ್ತಿದೆ. ಹಲವಾರು ಪ್ರಕರಣಗಳು ಬಯಲಾಗಿದ್ದು, ಅಧಿಕಾರಿಗಳು ಅದಕ್ಕೆ ಅವಕಾಶ ನೀಡಬಾರದು ಎಂದರು.
ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ತಾರತಮ್ಯ ಮಾಡಿದರೆ ಹಾಗೂ ಭ್ರಷ್ಟಾಚಾರ ಎಸಗಿದರೆ ಈ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು. ತಾಲೂಕಿನ ಕಾಂಗ್ರೆಸ್ ಮುಖಂಡರೆಲ್ಲ ಒಟ್ಟಾಗಿ ಕೆಲಸ ಮಾಡಿದ್ದು, ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಾಲೂಕಿನಲ್ಲಿ ಹೆಚ್ಚಿನ ಮತಗಳು ಬಂದಿವೆ. ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಮೂಲಕ ಪಕ್ಷ ಸಂಘಟಿಸಲಾಗುವುದು. ಯಾವುದೇ ಭಿನ್ನಮತ ಇಲ್ಲದೆ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯುವುದಾಗಿ ಹೇಳಿದರು. ಜಿಲ್ಲೆಯಲ್ಲಿ 4 ಲಕ್ಷ ದಲಿತ ಮತದಾರರಿದ್ದು, ಜಿಲ್ಲೆಯ ದಲಿತರೊಬ್ಬರಿಗೆ ನಿಗಮ ಮಂಡಳಿಯಲ್ಲಿ ಮುಖ್ಯಮಂತ್ರಿಗಳು ಅವಕಾಶ ಮಾಡಿಕೊಡಬೇಕು. ಈ ಸಂಬಂಧ ಒತ್ತಡ ಹೇರಲು ಸದ್ಯದಲ್ಲೆ ಮುಖ್ಯಮಂತ್ರಿ ಬಳಿಗೆ ನಿಯೋಗದೊಂದಿಗೆ ತೆರಳುವುದಾಗಿ ತಿಳಿಸಿದರು. ಕಾಂಗ್ರೆಸ್ ಮುಖಂಡ ಕುಮಾರಯ್ಯ, ಮದನ್ ಗೌಡ, ಕೌಸಲ್ಯ, ನಿರ್ಮಲಾ, ಸುಂದರಮ್ಮ ಇದ್ದರು.

ಆಂಜನೇಯಸ್ವಾಮಿ ರಥೋತ್ಸವ
ರಾಮನಾಥಪುರ: ಇಲ್ಲಿಗೆ ಸಮೀಪದ ಕೇರಳಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀನಿವಾಸ ಆಂಜನೇಯಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಇತ್ತೀಚೆಗೆ ನಡೆಯಿತು. ಮೇ 14ರಿಂದ ದೇವರ ಉತ್ಸವ ಹಾಗೂ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಅನೇಕ ಪೂಜಾಕಾರ್ಯನಡೆಯಿತು. ದೇವರ ಉತ್ಸವ ಮೂರ್ತಿಯನ್ನು ಹೊರತಂದು ಅಲಂಕೃತಗೊಳಿಸಿ ರಥದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.  ಉತ್ಸವದಲ್ಲಿ ಭಕ್ತರು ರಥ ಎಳೆದು ದೇವರಿಗೆ ನಮನ ಸಲ್ಲಿಸಿದರು. ನಂತರ ಹರ್ಷೋದ್ಘಾರದೊಂದಿಗೆ ಭಕ್ತರು ತೇರು ಮುಂದೆ ಸಾಗಿದಂತೆ ಹಣ್ಣು-ದವನ ಎಸೆದು ಭಕ್ತಿ ಸಮರ್ಪಿಸಿದರು. ಶುಕ್ರವಾರ ದೇವಸ್ಥಾನದಲ್ಲಿ ನಾನಾ ಪೂಜ ಕಾರ್ಯಗಳು ಕೈಗೊಂಡ ಬಳಿಕ ಕಳೆದ ಮೂರು ದಿನಗಳಿಂದ ಶಾಸ್ತ್ರೋಕ್ತವಾಗಿ ರಥೋತ್ಸವಕ್ಕೆ ವಿದ್ಯುಕ್ತವಾಗಿ ತೆರೆಬಿತ್ತು.

ಕಾದಂಬರಿ ಓದುವಿಕೆ ಕ್ಷೀಣ: ವಿಷಾದ
ಹಾಸನ: ಇತ್ತೀಚಿನ ದಿನಗಳಲ್ಲಿ ಕಾದಂಬರಿಗಳ ಅಧ್ಯಯನ ಕಡಿಮೆಯಾಗಿದೆ ಎಂದು ಉಪನ್ಯಾಸಕ ರವೀಂದ್ರ ವಿಷಾದಿಸಿದರು. ಚನ್ನರಾಯಪಟ್ಟಣದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನಪದ ರಂಗಮಾಧ್ಯಮ, ಆದಿಚುಂಚನಗಿರಿ ಸ್ನಾತಕೋತ್ತರ ವಿಭಾಗ ಹಾಗೂ ಬಿಇಡಿ ಕಾಲೇಜುಗಳ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನವೋದಯ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ ಎಂಬ ವಿಷಯದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಕಾದಂಬರಿಗಳು ಮಧ್ಯಮ ವರ್ಗದ ಮಹಾಕಾವ್ಯ. ಹೆಸರು ಮಾಡುವ ಒಂದೇ ಉದ್ದೇಶದಿಂದ ಇಂತಹ ಕೃತಿಗಳ ರಚನೆಯಾಗಬಾರದು. ಅದು ಜೀವನಕ್ಕೆ ಮಾರ್ಗದರ್ಶನವಾಗಿರಬೇಕು. ಇಂತಹ ಕೃತಿಗಳ ಬಗ್ಗೆ ಸಂಶೋಧನೆ ಆಗಬೇಕು. ಬರವಣಿಗೆಯ ಜತೆಗೆ ಸಾಮಾಜಿಕ ಚಿಂತನೆಯೂ ಕಾದಂಬರಿಕಾರರಲ್ಲಿ ಮೂಡಬೇಕೆಂದರು.ಶಿವರಾಮ ಕಾರಂತರ ಮರಳಿ ಮಣ್ಣಿಗೆ ಸೇರಿದಂತೆ ಹಲವು ಕೃತಿಗಳು ವಾಸ್ತವಿಕತೆಗೆ ಹತ್ತಿರವಾಗಿವೆ. ವಿಶೇಷ ಆದರ್ಶಗಳನ್ನು ಅದರಲ್ಲಿ ಕಾಣಬಹುದಾಗಿದ್ದು, ಆತ್ಮಗೌರವ, ಪ್ರಾಮಾಣಿಕತೆ ಹಾಗೂ ಶ್ರಮದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿವೆ. ಇವರ ಕಾದಂಬರಿಗಳಲ್ಲಿ ಸ್ವಾತಂತ್ರ್ಯ ಚಳವಳಿಯ ಪ್ರಭಾವವನ್ನೂ ಕಾಣಬಹುದಾಗಿದೆ. ಪುರುಷ ಸಂಪ್ರದಾಯದ ಬೇರುಗಳೂ ಕಾಣಸಿಗುತ್ತವೆ. ಸೌಹಾರ್ದತೆಯ ಜೀವನ ನಮ್ಮದಾಗಬೇಕು ಎಂಬ ಸಂದೇಶವನ್ನು ಸಾರುತ್ತವೆ ಎಂದು ಹೇಳಿದರು. ನಿವೃತ್ತ ಪ್ರಾಂಶುಪಾಲ  ಪ್ರೊ.ಎನ್. ತಮ್ಮಣ್ಣಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಕಾವ್ಯಗಳಲ್ಲಿ ಸಾಮಾಜಿಕ ಚಿಂತನೆ ಕುರಿತಂತೆ ಡಾ.ಮ. ರಾಮಕೃಷ್ಣ ವಿಚಾರ ಮಂಡಿಸಿದರು. ವಿದ್ಯಾರ್ಥಿಗಳು ತಮ್ಮ ಅನುಮಾನಗಳಿಗೆ ವೇದಿಕೆಯಲ್ಲೇ ಪರಿಹಾರ ಕಂಡುಕೊಂಡರು. ಡಾ.ಚಂದ್ರು ಕಾಳೇನಹಳ್ಳಿ, ನಾರಾಯಣ್, ಡಾ. ಚಂದ್ರಶೇಖರ್, ಲೋಕೇಶ್ ಇದ್ದರು.

ಇತರರೊಂದಿಗೆ ಬೆರೆಯುವ ಗುಣ ಬೆಳೆಸಿಕೊಳ್ಳಿ
ಮೈಸೂರು: ಎಲ್ಲರೊಂದಿಗೆ ಬೆರೆಯುವ ಗುಣಗಳನ್ನು ಮೈಗೂಡಿಸಿಕೊಂಡರೆ ಆದಿವಾಸಿಗಳು ಸಹ ಎಲ್ಲರಂತೆಯೇ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಎಂದು ಕಸ್ತೂರಿ ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಕಾಲೇಜು ವಸತಿ ನಿಲಯದಲ್ಲಿ ಬುಡಕಟ್ಟು ಕೃಷಿಕರ ಸಂಘ, ಕಸ್ತೂರಿ ಜನನಿ ಸಂಸ್ಥೆ ಮತ್ತು ಕವನ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿಕ್ಷಣ ನಮ್ಮ ಜನ್ಮಸಿದ್ದ ಹಕ್ಕು, ಅದನ್ನು ಪಡೆಯಲು ಸತತ ಪ್ರಯತ್ನವಿರಬೇಕು. ಆಗ ಮಾತ್ರ ತಮ್ಮ ಮಕ್ಕಳು ವಿದ್ಯಾವಂತರಾಗಲು ಸಾಧ್ಯ. ಮೊದಲು ವಿದ್ಯೆ ನಂತರ ಇತರೆ ಕೆಲಸಗಳು ಎಂದು ಪ್ರತಿ ಆದಿವಾಸಿಗಳು ಪ್ರತಿಜ್ಞೆ ಮಾಡಬೇಕು. ಪ್ರತಿ ಮಕ್ಕಳು ಶಿಕ್ಷಣ ಪಡೆಯಲು ಉತ್ಸಾಹದಿಂದ ಭಾಗವಹಿಸುವಂತಹ ಶಿಕ್ಷಣ ಯೋಜನೆಗಳನ್ನು ಸರ್ಕಾರಗಳು ರೂಪಿಸಬೇಕು. ಕೇವಲ ಪುಸ್ತಕದ ಮೂಲಕ ಮಾಡುವ ಪಾಠ ಪ್ರವಚನಗಳು ಆದಿವಾಸಿ ಮಕ್ಕಳಿಗೆ ಗ್ರಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕ್ರಿಯಾಶೀಲತೆಯಿಂದ ಆಟ-ಪಾಠಗಳಿಂದ ಕೂಡಿದ ಪಾಠ ಪ್ರವಚನಗಳಲ್ಲಿ ಮಕ್ಕಳು ತೊಡಗುತ್ತಾರೆ. ಇದರಿಂದಾಗಿ ಮಕ್ಕಳಲ್ಲಿ ವಿದ್ಯೆಯೆ ಬಗ್ಗೆ ಆಸಕ್ತಿ ಬರುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement