ಗೌಡರ ಗೆಲವು ಅಭಿವೃದ್ಧಿಗೆ ಸಂದ ಜಯ: ಕುಮಾರಸ್ವಾಮಿ
ಸಕಲೇಶಪುರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಭರ್ಜರಿ ಗೆಲವು ಅಭಿವೃದ್ಧಿಗೆ ಸಂದ ಜಯ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ.
ಪಟ್ಟಣದಲ್ಲಿ ಭಾನುವಾರ ವಿಜಯೋತ್ಸವ ಆಚರಣೆ ವೇಳೆ ಮಾತನಾಡಿದ ಅವರು, ಜಿಲ್ಲೆಯ ಪ್ರಜ್ಞಾವಂತ ಜನತೆ ದೇವೆಗೌಡರ ಅಭಿವೃದ್ಧಿಯನ್ನು ಮೆಚ್ಚಿ 5 ನೇ ಬಾರಿಗೆ ಲೋಕಸಭೆಗೆ ಆರಿಸಿ ಕಳುಹಿಸಿದ್ದು. ದೇವೇಗೌಡರನ್ನು ಸೋಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೂಡಿದ ತಂತ್ರಗಳನ್ನೆಲ್ಲ ಬುಡಮೇಲು ಮಾಡಿದ್ದರೆ ದೇಶದಲ್ಲಿ ಬೀಸಿದ ಮೋದಿ ಹವ ದೇವೆಗೌಡರ ಎದುರು ನಡೆಯಲಿಲ್ಲ ಎಂದರು.
ಇದೇ ವೇಳೆ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ದೇವೇಗೌಡರ ಹುಟ್ಟುಹಬ್ಬಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಸುಲೋಚನಾ ರಾಮಕೃಷ್ಣ, ತಾಪಂ ಅದ್ಯಕ್ಷೆ ಮಂಜುಳಾ, ಸದಸ್ಯರಾದ ಮಂಜುನಾಥ್, ಗೀತಾ, ಪುರಸಭೆ ಸದಸ್ಯರಾದ ನಿರ್ವಾಣಯ್ಯ, ತಾಜುನ್ನಿಸ್, ಲಲಿತಮ್ಮ, ಸಂತೋಷ್, ಉಮೇಶ್ ಪಕ್ಷದ ಮುಖಂಡರಾದ ಸಚ್ಚಿನ್ ಪ್ರಸಾದ್, ಇಬ್ರಾಹಿಂ ಇದ್ದರು.
'ಸಂಸ್ಕೃತಿ ರಕ್ಷಣೆಯಲ್ಲಿ ಯುವ ಜನರ ಪಾತ್ರ ಅಪಾರ'
ಹಳೇಬೀಡು: ಸ್ವಾತಂತ್ರ್ಯ ಪೂರ್ವದಲ್ಲಿ ಪುರಾತನ ವಸ್ತುಗಳ ಸಂಗ್ರಹಣೆ ಕೇವಲ ಜಮೀನ್ದಾರರ ಹಾಗೂ ವಂಶಪಾರಂಪರ್ಯವಾಗಿತ್ತು. ಇದನ್ನು ಸ್ವಾತಂತ್ರ್ಯ ಬಂದ ನಂತರ ಸಾರ್ವತ್ರಿಕಗೊಳಿಸಿ ಪುರಾತನ ವಸ್ತು ಸಂಗ್ರಹಾಲಯ ತೆರೆಯಲಾಯಿತು ಎಂದು ಹಳೇಬೀಡು ವಸ್ತು ಸಂಗ್ರಹಾಲಯ ಅಧಿಕಾರಿ ಆರೋವಜ್ಜಿ ತಿಳಿಸಿದರು.
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಎದುರು ಭಾಗದಲ್ಲಿರುವ ಪುರಾತನ ವಸ್ತು ಸಂಗ್ರಹಾಲಯದ ಆವರಣದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯದ ದಿನಾಚರಣೆಯಲ್ಲಿ ಮಾತನಾಡಿದರು. ನಮ್ಮ ಪುರಾತನ ಸಂಸ್ಕೃತಿ ಬಿಂಬಿಸುವ ಸ್ಮಾರಕ, ದೇವಾಲಯಗಳ ರಕ್ಷಣೆಗೆ ಇಂದಿನ ಯುವ ಪೀಳಿಗೆ ವಿಶೇಷ ಆಸಕ್ತಿ ವಹಿಸಬೇಕು. ಮುಂದಿನ ತಲೆಮಾರುಗಳಿಗೆ ನಮ್ಮ ಸಂಸ್ಕೃತಿ ಬೇರು ಹಬ್ಬಬೇಕು. ವಿದ್ಯಾರ್ಥಿಗಳು ಪಾಶ್ಚಿಮಾತ್ಯ ವ್ಯಾಮೋಹ ತೊರೆಯಬೇಕು. ಪ್ರಪಂಚದಲ್ಲೇ ವಿವಿಧತೆಯಲ್ಲಿ ಏಕತೆ ಇರುವ ರಾಷ್ಟ್ರ ಭಾರತ ಎಂದರು. ಹೊಯ್ಸಳೇಶ್ವರ ದೇವಾಲಯ ಟ್ರಸ್ಟ್ ಕಾರ್ಯದರ್ಶಿ ಅನಂತರಾಮು ಮಾತನಾಡಿದರು. ಹಳೇಬೀಡು ಗ್ರಾಪಂ ಮಾಜಿ ಉಪಾಧ್ಯಕ್ಷ ಜಿಯಾವುಲ್ಲಾ ಉದ್ಘಾಟಿಸಿದರು. ನಾನಾ ಕ್ರೀಡೆಯಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಪಂ ಪಿಡಿಒ ರುದ್ರೇಗೌಡ ಬಹುಮಾನ ವಿತರಿಸಿದರು. ಗ್ರಾಪಂ ಪಿಡಿಒ ರುದ್ರೇಗೌಡ ಇದ್ದರು.