ಬಗರ್ಹುಕುಂ ಸಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಹಾಸನ ಮೇ 19
ಅಮೃತ ಮಹಲ್ ಕಾವಲು ಬಗರ್ಹುಕುಂ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಸಾಲಗಾಮೆ ಹೋಬಳಿಯ ನಾನಾ ಗ್ರಾಮಸ್ಥರು ಕರ್ನಾಟಕ ಪ್ರಾಂತ ರೈತ ಸಂಘ, ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ತಾಲೂಕಿನ ಸಾಲಗಾಮೆ ಹೋಬಳಿಯ ಚೌಡೇನಹಳ್ಳಿ, ಯಲಗುಂದ, ರಾಮದೇವರಪುರ ಮತ್ತು ಕೆಲವತ್ತಿ ಗ್ರಾಮದ ಸುಮಾರು 500 ಕ್ಕು ಹೆಚ್ಚು ರೈತರು 504 ಎಕರೆ ಭೂಮಿಯನ್ನು ಕಳೆದ 30 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಇದಕ್ಕೆ ಸರ್ಕಾರದಿಂದ ಗ್ರಾಂಡ್ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದ್ದಾರೆ. ಆದರೆ ಕಳೆದ ವಾರ ಅರಣ್ಯ ಇಲಾಖೆಯಿಂದ ಈ ಪ್ರದೇಶದಲ್ಲಿ ಸರ್ವೆ ನಡೆಸಿ ಗುರುತಿನ ಕಲ್ಲುಗಳನ್ನು ನೆಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂರು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಮುಂದಾಗಿ ಕಲ್ಲು ನೆಟ್ಟಿದ್ದಾರೆ. ತಾಲೂಕಿನ ಯಲಗುಂದ, ಚೌಡೇನಹಳ್ಳಿ, ರಾಮದೇವರಪುರ, ಕೆಲವತ್ತಿ, ಸುಂಡಹಳ್ಳಿ, ಹರುವನಹಳ್ಳಿ ಗ್ರಾಮಗಳಲ್ಲಿ ವಾಸಿಸುವ 504 ಕುಟುಂಬಗಳಿಗೆ ಅಮೃತ ಮಹಲ್ ಪ್ರದೇಶಕ್ಕೆ ಸೇರಿದ 504 ಎಕರೆ ಭೂಮಿಯನ್ನು ನೀಡಲಾಗಿತ್ತು. ಅದಕ್ಕೆ 2002-03 ರಲ್ಲಿ ಸಾಗುವಳಿ ಪತ್ರವನ್ನು ನೀಡಲಾಗಿತ್ತು. ಅಲ್ಲದೇ 2006 ರಲ್ಲಿ ಹಾಸನ ತಾಲೂಕಿನ ತಹಸೀಲ್ದಾರ್ ಆಗಿದ್ದ ಟಿ.ಲಕ್ಕೇಗೌಡ ಎಂಬುವವರು 76 ಎಕರೆಗೆ ಪಹಣಿಯನ್ನೂ ಸಹ ನೀಡಿ ಸಕ್ರಮಗೊಳಿಸಿದ್ದಾರೆ. ಇದರ ಆಧಾರದ ಮೇಲೆ ರೈತರು, ಸರ್ಕಾರದಿಂದ ದೊರೆಯುವ ಸಾಲ ಮತ್ತಿತರ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ.
ಇಷ್ಟೆಲ್ಲಾ ಇರುವಾಗ ಪ್ರಸ್ತುತ ಭೂಮಾಪನ ಇಲಾಖೆ ಮೂಲಕ ಅರಣ್ಯ ಇಲಾಖೆಯವರು ಅಮೃತ ಮಹಲ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ನಾಟಿ ಹಸುಗಳ ಮೇವಿಗಾಗಿ ಬಿಟ್ಟಿದ್ದ ಅಮೃತ ಮಹಲ್ ಪ್ರದೇಶವನ್ನು ವಶಪಡಿಸಿಕೊಂಡು ಅಲ್ಲಿ ಗೋ ಸಂರಕ್ಷಣಾ ಕೇಂದ್ರ ಮಾಡುವ ಆದೇಶ ಹೊರಡಿಸಿರುವುದು ಇದಕ್ಕೆ ಕಾರಣ. ಸರ್ಕಾರ ಕೂಡಲೇ ರೈತರು ಮೂರು ದಶಕಗಳಿಂದ ಸಾಗುವಳಿ ಮಾಡಿರುವ ಭೂಮಿಯನ್ನು ರೈತರಿಗೆ ಉಳಿಸಿಕೊಡಬೇಕು ಇಲ್ಲವಾದರೆ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ನವೀನ್ ಕುಮಾರ್, ತಾಲೂಕು ಅಧ್ಯಕ್ಷ ನಂಜೇಗೌಡ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಗ್ರಾಮಸ್ಥರಾದ ಬವಸರಾಜು, ಪ್ರಕಾಶ್, ಹಲಗೆ ಗೌಡ, ಪರಮೇಶ್, ಜಯಣ್ಣ, ಅರವಿಂದ್ ಹಾಗೂ ಇತರರು ಇದ್ದರು.