ಬಾಣಂತಿ ಸಾವು: ಸಂಬಂಧಿಕರ ಪ್ರತಿಭಟನೆ
ಹಾಸನ: ಮೂರು ದಿನಗಳಿಂದ ಪ್ರಜ್ಞೆ ಇಲ್ಲದ ಗರ್ಭಿಣಿ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾಳೆ. ಆಕ್ರೋಶಗೊಂಡ ಕುಟುಂಬದವರು ಹಾಗೂ ನಾನಾ ಸಂಘಟನೆಯವರು ಸೋಮವಾರ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.
ಹೊಳೆನರಸೀಪುರ ತಾಲೂಕಿನ ನ್ಯಾಮನಹಳ್ಳಿ ನಿವಾಸಿಯಾದ ಕೃಷ್ಣಶೆಟ್ಟಿ ಪತ್ನಿ ರೂಪಾ ಮೃತಪಟ್ಟವರು. ಚೊಚ್ಚಲ ಹೆರಿಗೆಗೆಂದು ಕಳೆದ ಗುರುವಾರ ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಈ ವೇಳೆ ವೈದ್ಯ ರಘುನಾಥ್ ಎಂಬವರು ಪರೀಕ್ಷಿಸಿ ಸಹಜ ಹೆರಿಗೆ ಆಗುತ್ತದೆ ಎಂದು ಹೇಳಿ ಸಂಜೆಯಾದರೂ ಬರಲಿಲ್ಲ. ಬಳಿಕ ಬಂದ ವೈದ್ಯರು ಸಿಜೆರಿಯನ್ ಮಾಡಬೇಕು ಎಂದು ಹೇಳಿ ಪ್ರಜ್ಞೆ ತಪ್ಪಿಸುವ ಇಂಜಕ್ಷನ್ ನೀಡಿ, ಚಿಕಿತ್ಸೆ ನೀಡಿದರು. ಆಕೆ ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಳು.
ಹೆರಿಗೆ ಆದ ಮೇಲೆ ವೈದ್ಯ ಮತ್ತೆ ನೋಡಲು ಬರಲೇ ಇಲ್ಲ. ಕಳೆದ ಮೂರು ದಿನಗಳಿಂದ ರೂಪಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಆಸ್ಪತ್ರೆಯವರ ಬೇಜವಾಬ್ದಾರಿ ವರ್ತನೆಗೆ ಜೀವ ಹೋಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ, ತಹಸೀಲ್ದಾರ್ ಮಂಜುನಾಥ್ ಹಾಗೂ ಇತರರು ಆಗಮಿಸಿದಾಗ ಪ್ರತಿಭಟನಕಾರರು ವಾಗ್ವಾದ ನಡೆಸಿದರು. ವೈದ್ಯರ ನಿರ್ಲಕ್ಷ್ಯ ಅತಿಯಾಗಿದ್ದು, ಈ ರೀತಿಯ ಅಹಿತಕರ ಘಟನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು. ಇದರಿಂದ ಕೆಲ ಸಮಯ ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂದು ಬಿಗುವಿನ ವಾತಾವರಣ ತಿಳಿಗೊಳಿಸಿದರು.