ಮನಸೂರೆಗೊಂಡ ಡರ್ಟ್‌ಟ್ರ್ಯಾಕ್ ರೇಸ್
ಕನ್ನಡಪ್ರಭ ವಾರ್ತೆ ಸಕಲೇಶಪುರ ಮೇ 19
ಜಯಕರ್ನಾಟಕ ಸಂಘದ ವತಿಯಿಂದ ನಡೆದ ರಾಜ್ಯಮಟ್ಟದ ಡರ್ಟ್ ಟ್ರ್ಯಾಕ್ ಬೈಕ್ ರೇಸ್
ಭಾನುವಾರದ ರಜೆ ಮೂಡ್‌ನಲ್ಲಿ ಬಂದವರ ಮನಸೂರೆಗೊಂಡಿತು.
ಪಟ್ಟಣದ ಹೊರವಲಯದ ಗದ್ದೆ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ರೇಸ್‌ನಲ್ಲಿ ನಾನಾ ಜಿಲ್ಲೆಗಳ 50ಕ್ಕೂ ಹೆಚ್ಚು ಮಂದಿ ಬೈಕ್ ಸವಾರರು ಭಾಗವಹಿಸಿದ್ದರು.
ಒಬ್ಬರನ್ನು ಹಿಂದಿಕ್ಕಿ ಮತ್ತೊಬ್ಬರು ಗೆಲ್ಲಲು ನಡೆಸಿದ ಪೈಪೋಟಿ, ರಜೆ ಹಿನ್ನೆಲೆಯಲ್ಲಿ ಬಂದಿದ್ದ ನೂರಾರು ಕ್ರೀಡಾಸಕ್ತರಿಗೆ ಹೊಸದೊಂದು ಥ್ರಿತ್ ನೀಡಿತು. ತಮ್ಮ ಶರವೇಗದ ಚಾಲನಾ ಕೌಶಲ್ಯ ಪ್ರದರ್ಶಿಸಿ ನೋಡುಗರನ್ನು ರೋಮಾಂಚಿತಗೊಳಿಸಿದರು.
ಸಕಲೇಶಪುರ ಎಂದಾಕ್ಷಣ ಅಲ್ಲಿ ಹಸಿರು ಸಿರಿಯದ್ದೇ ಕಾರುಬಾರು. ಆದರೆ ಇಂದು ಹಸಿರನ್ನೇ ಮರೆಮಾಚಿ ನಗರದ ಮಧ್ಯೆಭಾಗ ಧೂಳು ಮಯವಾಗಿತ್ತು. ಈ ನಡುವೆಯೂ ನೂರಾರು ಮಂದಿ ಶಿಳ್ಳೆ ಹೊಡೆಯುತ್ತಾ, ಕೂಗುತ್ತಾ ಹುರಿದುಂಬಿಸುತ್ತಿದ್ದರು.
ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಆತಿಥೇಯ ಸಕಲೇಶಪುರ, ಹಾಸನ, ಬೆಂಗಳೂರು, ಚಿಕ್ಕಮಗಳೂರು ಮೈಸೂರಿನ ಖ್ಯಾತನಾಮ ರೈಡರ್ಸ್‌ಗಳು ಭಾಗವಹಿಸಿದ್ದರು. ಅಂಕು-ಡೊಂಕಾದ ಮಣ್ಣಿನ ದಾರಿಯಲಿ ಧೂಳ್ ಎಬ್ಬಿಸುತ್ತ ಚಂಗನೆ ಹಾರುವ ರೀತಿ, ಬಳುಕಾಡಿ ಮಿಂಚಿ ಟ್ರ್ಯಾಕ್‌ನಿಂದ ಟ್ರ್ಯಾಕ್‌ಗೆ ಜಿಗಿಯುವ ರೀತಿ ಅಬ್ಬಾ ಎನಿಸಿತು.
ಗೆದ್ದವರು ಸಖತ್ ಖುಷಿಯಿಂದ ಬೀಗಿದರು. ಈಗಾಗಲೇ ವಿವಿಧೆಡೆ ನಡೆದಿರುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದವರು, ಜಯದ ಪಟ್ಟಿ ದೊಡ್ಡದಾಗಿದ್ದಕ್ಕೆ ಸಂಭ್ರಮಿಸಿದರು. ಅಲ್ಲದೇ ಹತ್ತಾರು ಸ್ಪರ್ಧಾಳುಗಳು ಕ್ಲಿಷ್ಟಕರವಾದ ಹಾದಿಯಲ್ಲಿ ಸಾಗಿ, ಹಣಾಹಣಿ ನಡುವೆಯೂ ಗೆಲುವು ಸಾಧಿಸಲು ಪಟ್ಟ ಶ್ರಮ ಸಾರ್ಥ್ಥಕವಾಗಿದ್ದಕ್ಕೆ ಸಂತಸ ಪಟ್ಟರು.
ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಾತನಾಡಿ, ಇಂಥ ಸ್ಪರ್ಧೆಗಳನ್ನು ಹೆಚ್ಚು ಆಯೋಜನೆ ಮಾಡುವುದರಿಂದ ಸವಾರರ ಮಾನಸಿಕ ಶಕ್ತಿ ವೃದ್ಧಿಯಾಗುವುದರ ಜೊತೆಗೆ ಮನರಂಜನೆಯೂ ಸಿಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬೈಕ್ ರ್ಯಾಲಿಯಲ್ಲಿ ಬೆಂಗಳೂರಿನ ನಿತಿನ್ ಮತ್ತು ಹಾಸನದ ಅತೀಕ್ ಕ್ರಮವಾಗಿ ಪ್ರಥಮ ಹಾಗೂ ದ್ವಿತಿಯ ಸ್ಥಾನ ಪಡೆದರು. ಜಯಕರ್ನಾಟಕ ಸಂಘದ ಸುಪ್ರದೀಪ್ತ್ ಯಜಮಾನ್, ಸುರೇಶ ಆಳ್ವ, ಸಫೀರ್, ನವೀದ್ ಇತರರು ಕಾರ್ಯಕ್ರಮ ಅಯೋಜಿಸಿದ್ದರು.