ವೈದ್ಯ ಪ್ರದೀಪ್ ಸಸ್ಪೆಂಡ್ ರದ್ದುಪಡಿಸಲು ಆಗ್ರಹ
ಅರಸೀಕೆರೆ: ವೈದ್ಯ ಪ್ರದೀಪ್ ಕುಮಾರ್ ಅವರ ಅಮಾನತನ್ನು ಸರ್ಕಾರ ರದ್ದುಗೊಳಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಕೆಂಪೇಗೌಡ ವೇದಿಕೆ ಕಾರ್ಯಕರ್ತರು ಸೋಮವಾರ ಪಟ್ಟಣದ ಸರ್ಕಾರಿ ಜೆ.ಸಿ.ಆಸ್ಪತ್ರೆ ಮುಂಭಾಗದಲ್ಲಿ ಧರಣಿ ನಡೆಸಿದರು.
ಪಟ್ಟಣದ ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ಕಳೆದ 3 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ತಜ್ಞ ವೈದ್ಯ ಡಾ.ಪ್ರದೀಪ್ ಕುಮಾರ್ ಅನೇಕ ಬಡ ವರ್ಗದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಉತ್ತಮ ವೈದ್ಯರಾಗಿ ಹೆಚ್ಚಿನ ಜನಪ್ರಿಯತೆ ಹೊಂದಿದ್ದರು. ಇದನ್ನು ಸಹಿಸದ ಅನೇಕರು ಸಲ್ಲದ ದೂರುಗಳನ್ನು ಸರ್ಕಾರಕ್ಕೆ ಬರೆಯುವ ಮೂಲಕ ಅವರನ್ನು ಸೇವೆಯಿಂದ ಅಮಾನತ್ ಮಾಡಲು ಕಾರಣರಾಗಿದ್ದಾರೆ ಎಂದು ಅಕ್ಷೇಪಿಸಿ ಪಟ್ಟಣದ ಪಿ.ಪಿ.ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಜೆ.ಸಿ.ಆಸ್ಪತ್ರೆ ಮುಂಭಾಗದಲ್ಲಿ ಧರಣಿ ನಡೆಸಿದರು.
ಇದೇ ಸಂದರ್ಭದಲ್ಲಿ ಕೆಂಪೇಗೌಡ ವೇದಿಕೆ ಅಧ್ಯಕ್ಷ ಧಿರೇಂದ್ರ ಮಾತನಾಡಿ, ಆಸ್ಪತ್ರೆಯಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಮತ್ತು ದಾದಿಯರ ಕೊರತೆಯಿದ್ದು, ತುರ್ತು ಸಂದರ್ಭಗಳಲ್ಲಿ ಅಗತ್ಯ ಸೇವೆ ದೊರೆಯದ ಪರಿಸ್ಥಿಯಿದ್ದು, ತಕ್ಷಣ ಇಂಥ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಗೌರವಾಧ್ಯಕ್ಷ ಕೆ.ವಿ.ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ, ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ಅಹಮದ್ ಖಾನ್, ನಗರ ಅಧ್ಯಕ್ಷ ವಿನೋದ್ ಕುಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾ ಸೇರಿದಂತೆ ಅನೇಕ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.