7 ಬಾಲಕಾರ್ಮಿಕರ ಪತ್ತೆ, ಮೊಕದ್ದಮೆ
ಹಾಸನ: ಜಿಲ್ಲೆಯ ನಾನಾ ಕಡೆಗಳಲ್ಲಿ ಮೇ7 ರಿಂದ 14ರ ವರೆಗೆ ಬಾಲಕಾರ್ಮಿಕ ನಿಷೇಧ ನಿಯಂತ್ರಣ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಸಮಾಜಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ, ನಗರ ಸಭೆ, ಕೈಗಾರಿಕಾ ವಿಸ್ತರಣಾಧಿಕಾರಿಗಳು, ಪುರಸಭೆ ಅಧಿಕಾರಿಗಳೊಂದಿಗೆ, ಅಂಗಡಿ, ವಾಣಿಜ್ಯ ಸಂಸ್ಥೆ, ಗ್ಯಾರೇಜ್, ಹೋಟೇಲ್, ಬಾರ್ ರೆಸ್ಟೋರೆಂಟ್ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದ್ದು, ಈ ಸಮಯದಲ್ಲಿ 7 ಬಾಲ ಕಾರ್ಮಿಕರನ್ನು ಕಾರ್ಮಿಕ ಇಲಾಕೆ ಪತ್ತೆ ಹಚ್ಚಿದೆ. ನಗರದ ಹಾಸನಾಂಬ ಆಟೊ ವರ್ಕ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕ ಸುಮೇರ್ ಪಾಷಾ, ಮಾರುತಿ ಮೆಡಿಕಲ್ಸ್ನಲ್ಲಿದ್ದ ನಿತಿನ್, ದೊಡ್ಡಮಂಡಿಗನಹಳ್ಳಿಯ ಹಾಸನ್ ಆಟೊ ವರ್ಕ್ಸ್ನಲ್ಲಿ ಇದ್ದ ಮಹಮ್ಮದ್ ಫರ್ದಿನ್, ಹಾಸನ ಹಳೆ ಗಾಣಿಗರ ಬೀದಿಯ ಹಫೀಜ್ ಚಿನ್ನಾಭರಣ ತಯಾರಿಕಾ ಅಂಗಡಿಯಲ್ಲಿದ್ದ ಸಾಜು, ಅರಸೀಕೆರೆ ಸಾಧಕ್ ಮೋಟಾರ್ಸ್ ನಲ್ಲಿದ್ದ ಸೈಯ್ಯದ್, ಅರಸೀಕೆರೆ ಲಕ್ಷ್ಮಿ ವೆಂಕಟೇಶ್ವರ ಎಂಜಿನಿಯರಿಂಗ್ ವರ್ಕ್ಸ್ ನಲ್ಲಿದ್ದ ಮಹಮ್ಮದ್ ಮತ್ತು ಚನ್ನರಾಯಪಟ್ಟಣದ ಭಾರತ್ ಎಂಜಿನಿಯರಿಂಗ್ ವರ್ಕ್ಸ್ನಲ್ಲಿದ್ದ ಸಲ್ಮಾನ್ ಖಾನ್ ಎಂಬ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ ಕಾರ್ಮಿಕ ಇಲಾಕೆ ಅಧಿಕಾರಿ ಕೆ.ಎನ್. ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.
ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುವುದು. ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ- 1986 ಸೆಕ್ಷನ್(3)ರ ಪ್ರಕಾರ ಅಪರಾಧವಾಗಿರುತ್ತದೆ ಹಾಗೂ ಸೆಕ್ಷನ್14 (1)ರಅನ್ವಯ ಶಿಕ್ಷಾರ್ಹವಾಗಿದೆ ಎಂದರು. ಬಾಲ ಕಾರ್ಮಿಕರನ್ನು ನೇಮಿಸಿಕೊಂಡಲ್ಲಿ ಮಾಲೀಕರು 10 ಸಾವಿರ ರು.ನಿಂದ 20 ಸಾವಿರ ರು. ರವರೆಗೆ ದಂಡ ಮತ್ತು 3 ತಿಂಗಳಿಂದ 1ವರ್ಷದವರೆಗೆ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.