ಅಲ್ಪಸಂಖ್ಯಾತರಿಗೆ ಸಾಲ, ಸಹಾಯಧನ ಸೌಲಭ್ಯ
ಕನ್ನಡಪ್ರಭ ವಾರ್ತೆ ಸಕಲೇಶಪುರ ಮೇ 20
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ 2014-15ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ಈ ಕೆಳಕಂಡ ನಾನಾ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಹಾಗೂ ಸಹಾಯಧನಗಳ ಸೌಲಭ್ಯಗಳನ್ನು ನೀಡಲಾಗುವುದು
ಸ್ವಾವಲಂಬನಾ ಮಾರ್ಜಿನ್ ಹಣ ಸಾಲದ ಯೋಜನೆ: ಈ ಯೋಜನೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ವ್ಯಾಪಾರ, ಕೈಗಾರಿಕೆ, ಕೃಷಿ ಮತ್ತು ಸೇವಾವಲಯದಲ್ಲಿ ಬರುವ ನಾನಾ ಚಟುವಟಿಕೆಗಳನ್ನು ಕೈಗೊಳ್ಳಲು ಕನಿಷ್ಠ 10,000- ಗಳಿಂದ ಗರಿಷ್ಟ ರು. 5,00,000 ವರೆಗೆ ರಾಷ್ಟ್ರೀಕೃತ ಬ್ಯಾಂಕ್ ಸಹಯೋಗದೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಇದರಡಿ ಕನಿಷ್ಠ ವಾರ್ಜಿನ್ ಹಣ 6,000ಗಳಿಂದ ಗರಿಷ್ಠ ರು. 1,00,000ಗಳವರೆಗೆ ಸಾಲ ಹಾಗೂ ಸಹಾಯಧನ ಕನಿಷ್ಠ 5,000ಗಳಿಂದ ಗರಿಷ್ಠ 25,000 ರವರೆಗೆ ನೀಡಲಾಗುವುದು ಸಾಲಕ್ಕೆ ಶೇ. 6ರ ಬಡ್ಡಿ ದರ ನಿಗದಿಪಡಿಸಿದೆ. ಈ ಯೋಜನೆಯಡಿ ಜಿಲ್ಲೆಗೆ 72 ಭೌತಿಕ ಗುರಿ ಹಾಗೂ ಆರ್ಥಿಕ ರು. 16.80 ಲಕ್ಷಗಳ ಗುರಿ ನಿಗದಿಪಡಿಸಲಾಗಿದೆ.
ಅರಿವು ಯೋಜನೆ (ವಿದ್ಯಾಭ್ಯಾಸ ಸಾಲ) : ಈ ಯೋಜನೆಯಡಿಯಲ್ಲಿ ತಾಂತ್ರಿಕ ಹಾಗೂ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಬಡ ಅಲ್ಪಸಂಖ್ಯಾ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯವನ್ನು ವಾರ್ಷಿಕ ಶೇ.2 ಬಡ್ಡಿ ದರದಲ್ಲಿ ಒದಗಿಸಲಾಗುವುದು. ನಿಗಮದಿಂದ ಎಂ.ಬಿ.ಬಿ.ಎಸ್, ಬಿ.ಇ, ಡಿ.ಎಡ್, ಐಟಿಐ, ಡಿಪ್ಲೊಮಾ, ಬಿಎಸ್‌ಸಿ-ನರ್ಸಿಂಗ್, ಎಂ.ಬಿ.ಎ, ಎಂ.ಸಿ.ಎ, ಬಿ.ಎಡ್, ಎಂ.ಎ, ಎಂ.ಟೆಕ್, ಎಂ.ಡಿ, ಪಿಎಚ್.ಡಿ, ಎಂ.ಕಾಂ, ಎಂಎಸ್ಸಿ, ಎಂಫಾರ್ಮಾ, ಬಿಫಾರ್ಮ, ಎಲ್.ಎಲ್.ಬಿ, ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ 10,000 - ಗಳಿಂದ ವ್ಯಾಸಾಂಗಕ್ಕೆ ಅನುಗುಣವಾಗಿ 1,00,000- ಗಳ ವರೆಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ 258 ಆರ್ಥಿಕ 77.40 ಲಕ್ಷಗಳಾಗಿರುತ್ತದೆ.
ಶ್ರಮಶಕ್ತಿ ಸಾಲ ಹಾಗೂ ಸಹಾಯಧನ ಯೋಜನೆ : ಈ ಯೋಜನೆಯಡಿ ಸಾಂಪ್ರದಾಯಿಕ ವೃತ್ತಿ ಕುಲಕಸುಬುದಾರರಿಗೆ ಅಂದರೆ ಕುಂಬಾರಿಕೆ, ಕ್ಷೌರಿಕ, ಪೊರಕೆ ಕಡ್ಡಿ ತಯಾರಿಕೆ ಟಿನ್ ವಸ್ತುಗಳ ತಯಾರಿಕೆ, ಟೈಲರಿಂಗ್, ಅಗರಬತ್ತಿ ತಯಾರಿಕೆ, ಹೀಗೆ ರಾಜ್ಯ ಸರ್ಕಾರವು ಸುಮಾರು 45 ನಾನಾ ವೃತ್ತಿ ಕುಲಕಸುಬುಗಳನ್ನು ಗುರುತಿಸಿರುವ ಎಲ್ಲ ಕುಲಕಸುಬುಗಳಿಗೆ ನಿಗಮದಿಂದ 10,000-ಗಳಿಂದ ಗರಿಷ್ಠ 25,000 ಗಳಿಗೆ ಸಾಲ ಹಾಗೂ ಸಹಾಯಧನ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ಶೇ. 25 ರಷ್ಟು ಹಣವನ್ನು ಬ್ಯಾಕ್ ಎಂಡ್ ಸಬ್ಸಿಡಿಯಾಗಿ ನೀಡಲಾಗುತ್ತಿದೆ ಹಾಗೂ ಈ ಯೋಜನೆಯಡಿ ಶೇ. 4 ರ ಬಡ್ಡಿ ದರ ವಿಧಿಸಲಾಗುತ್ತಿದೆ. ಈ ಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ 172 ಆರ್ಥಿಕ ಗುರಿ 34.40 ಲಕ್ಷಗಳಾಗಿರುತ್ತದೆ.
ಮನೆ ಕಟ್ಟಡ ಬಡ್ಡಿ ಸಹಾಯಧನ ಯೋಜನೆ: ಈ ಯೋಜನೆಯಡಿ ಮುಸ್ಲಿಂ, ಜೈನ್ಸ್, ಬೌದ್ದ, ಸಿಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರು ಮನೆ ನಿರ್ಮಾಣ ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳು ಅಥವಾ ಇತರೆ ಅಂಗೀಕೃತ ಹಣಕಾಸು ಸಂಸ್ಥೆಗಳಿಂದ ಫಲಾಪೇಕ್ಷಿಗಳು ಗರಿಷ್ಠ ಐದು ಲಕ್ಷ ರೂಪಾಯಿಗಳವರೆಗೆ, ಈಗಾಗಲೇ ಸಾಲ ಪಡೆದು ಸಾಲಕ್ಕೆ ಪಾವತಿಸಿದ ಬಡ್ಡಿಯನ್ನು ಗರಿಷ್ಠ 1 ಲಕ್ಷ ಗಳವರೆಗೆ ರಿಯಾಯಿತಿ ಸಹಾಯಧನವಾಗಿ ಪರಿಗಣಿಸಿ, ಬ್ಯಾಂಕ್‌ಗೆ ಸಹಾಯಧನ ಬಿಡುಗಡೆಗೊಳಿಸಲಾಗುವುದು.
ಈ ಯೋಜನೆಯಡಿ ಏ.1ರ ನಂತರ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಇತರೆ ಅಂಗೀಕೃತ ಹಣಕಾಸು ಸಂಸ್ಥೆಯಿಂದ ಈಗಾಗಲೇ ಗೃಹಸಾಲ ಪಡೆದಿರುವ ಫಲಾಪೇಕ್ಷಿಗಳು ಮಾತ್ರ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ ಹಾಸನ ಜಿಲ್ಲೆಗೆ ನಿಗಧಿ ಪಡಿಸಿರುವ ಭೌತಿಕ ಗುರಿ 39, ಆರ್ಥಿಕ 39 ಲಕ್ಷ ರು.
ನೇರಸಾಲ ಯೋಜನೆ: ಈ ಯೋಜನೆಯಡಿ ರಾಷ್ಟ್ರೀಯ ಅಲ್ಪಸಂಖ್ಯಾತರ ಹಾಗೂ ಹಣಕಾಸು ಅಭಿವೃದ್ದಿ ನಿಗಮ, ನವದೆಹಲಿ ಇವರ ಸಹಯೋಗದೊಂದಿಗೆ ರು. 50,000ಣ ಗಳಿಂದ, ಗರಿಷ್ಠ ರು. 10,00,000 ದವರೆಗೆ ನಾನಾ ಆರ್ಥಿಕ ಚಟುವಟಿಕೆ ಕೈಗೊಳ್ಳಲು ನೇರವಾಗಿ ಹಣಕಾಸಿನ ನೆರವು ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ಶೇ.7 ರ ಬಡ್ಡಿ ದರ ವಿಧಿಸಲಾಗುವುದು ಹಾಗೂ ಈ ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು ತಮ್ಮ ಖಾತರಿದಾರರಾಗಿ ಸರ್ಕಾರಿ ನೌಕರರ ವೇತನ ದೃಡೀಕರಣ ಪತ್ರ ಹಾಗೂ ಸ್ಥಿರಾಸ್ತಿಯನ್ನು ನಿಗಮಕ್ಕೆ ಅಡಮಾನ ಮಾಡಿ ಈ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ 92 ಆರ್ಥಿಕ ಗುರಿ ರೂ. 46.00 ಲಕ್ಷಗಳಾಗಿರುತ್ತದೆ.
ಗಂಗಾ ಕಲ್ಯಾಣ ನೀರಾವರಿ ಯೋಜನೆ
ಈ ಯೋಜನೆಯಡಿಯಲ್ಲಿ ಸಣ್ಣ ರೈತರಿಗೆ ವೈಯಕ್ತಿಕ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 1 ರಿಂದ 05 ಎಕರೆ ಒಳಗಿರುವ ಖುಷ್ಕಿ ಜಮೀನುಗಳಿಗೆ ಕೊಳವೆ ಬಾವಿಗಳನ್ನು ಕೊರೆಯಿಸಿ ಕೊಡುವ ಮುಖೇನ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ಯೋಜನೆಯ ಘಟಕ ವೆಚ್ಚ 2.00 ಲಕ್ಷಗಳಾಗಿರುತ್ತವೆ ಈ ಮೊತ್ತದಲ್ಲಿ ರೂ. 1.50 ಲಕ್ಷ ಸಹಾಯಧನ, 50,000 ಸಾಲವಾಗಿರುತ್ತವೆ. ಈ ಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ 33, ಆರ್ಥಿಕ ಗುರಿ 49.50 ಲಕ್ಷಗಳನ್ನು ನಿಗದಿಪಡಿಸಿದೆ. ಅರ್ಜಿದಾರರ ವಾರ್ಷಿಕ ಆದಾಯ ರು. 22,000 ದೊಳಗಿರಬೇಕು.
ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಯೋಜನೆ
ಈ ಯೋಜನೆಯಡಿ ಕ್ರಿಶ್ಚಿಯನ್‌ರ ಅಭಿವೃದ್ದಿಗಾಗಿ ಅರಿವು ಸಾಲ ಯೋಜನೆಯಡಿ ಮೇಲಿನ ಎಲ್ಲ ನಿಬಂಧನೆಗಳಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಗೆ ಜಿಲ್ಲೆಗೆ ಪ್ರಸಕ್ತ ಭೌತಿಕ ಗುರಿ 50 ಆರ್ಥಿಕ ಗುರಿ 15.60 ಲಕ್ಷಗಳಾಗಿರುತ್ತದೆ.
ಮೈಕ್ರೋಲೋನ್ ಯೋಜನೆ
ಈ ಯೋಜನೆಯಡಿಯಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಟಿತ ಗುಂಪುಗಳಿಗೆ ಅವರು ವಾಸಿಸುವ ಅರೆನಗರ ಹಾಗೂ ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಸಂಘಗಳಿಗೆ ಹಾಗೂ ಪುರುಷ ಸ್ವಸಹಾಯ ಗುಂಪುಗಳಿಗೆ ನಾನಾ ಸಣ್ಣ ವ್ಯಾಪಾರಗಳಾದ ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣು, ಹೂವು, ಕಡ್ಲೆಕಾಯಿ, ಬೀಡಿ ಕಟ್ಟುವುದು, ಅಗರಬತ್ತಿ ತಯಾರಿಕೆ, ಟೀಸ್ಟಾಲ್‌ಗೂ ಇತರೆ ಸಣ್ಣ ವ್ಯಾಪಾರ ಕೈಗೊಳ್ಳಲು ರೂ.10,000- ಗಳನ್ನು ಪ್ರತಿ ಸದಸ್ಯರಿಗೆ ಸ್ವಸಹಾಯ ಸಂಘದ ಮುಖೇನ ಸಾಲ ನೀಡಲಾಗುವುದು. ಈ ಯೋಜನೆಯಡಿ ರೂ.5,000- ಗಳು ಸಾಲ ಹಾಗೂ ರು. 5,000 ಸಹಾಯಧನವಾಗಿರುತ್ತದೆ. ಈ ಯೋಜನೆಗೆ ಶೇ. 5ರ ಬಡ್ಡಿ ದರ ವಿಧಿಸಲಾಗುವುದು. ಈ ಯೋಜನೆಯಡಿ ಜಿಲ್ಲೆಗೆ ಭೌತಿಕ ಗುರಿ 372 ಆರ್ಥಿಕ ಗುರಿ ರೂ. 37.20 ಲಕ್ಷಗಳಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ
ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ) ಗಣಪತಿ ದೇವಸ್ಥಾನದ ಸರ್ಕಲ್ ಹತ್ತಿರ, ಹೊಯ್ಸಳನಗರ, ಪೊಲೀಸ್ ಕಾಲೊನಿ, ಹಾಸನ. ಇಲ್ಲಿ ಅರ್ಜಿಪಡೆಯಬಹುದಾಗಿದೆ. ಅರ್ಜಿ ಪಡೆಯಲು ಜೂ. 20 ಕಡೆಯ ದಿವಸವಾಗಿರುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಜೂನ್ 30 ಕಡೆಯ ದಿನ ವಾಗಿರುತ್ತದೆ. ದೂ: 08172-233333.