ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುಸ್ತಕ ಮುಟ್ಟುಗೋಲಿಗೆ ಆಗ್ರಹ

Srinivasa Murthy VN
Updated On : 21 May 2014, 12:03 pm

ಹಾಸನ: ಲೇಖಕ ಕೆ.ಎಸ್.ನಾರಾಯಣಾಚಾರ್ಯ ಬರೆದಿರುವ ವಾಲ್ಮೀಕಿ ಯಾರು ಎಂಬ ವಿವಾದಿತ ಪುಸ್ತಕವು ಶಾಂತಿಯುತ ಸಮಾಜದಲ್ಲಿ ವಿಷಬೀಜ ಬಿತ್ತುವಂತಹ, ಶೋಷಿತ ಸಮುದಾಯಗಳ ಭಾವನೆಗಳಿಗೆ ಕುಂದು ಉಂಟು ಮಾಡುವ ಕಾರಣ ಈ ಪುಸ್ತಕವನ್ನು ತಕ್ಷಣ ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಲೇಖಕರನ್ನು ಬಂಧಿಸಬೇಕು. ಅಲ್ಲದೆ ಪರಿಶಿಷ್ಟ ಪಂಗಡಕ್ಕೆ ಶೇ.7.5 ರಷ್ಟು ಮೀಸಲು ಹೆಚ್ಚಿಸಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸೋಮವಾರ ವಾಲ್ಮೀಕಿ ಸಮಾಜದವರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಬಿ.ಎಚ್.ರಸ್ತೆಯ ಮೂಲಕ ತಾಲೂಕು ಕಚೇರಿವರೆಗೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಲೇಖಕ ಕೆ.ಎಸ್.ನಾರಾಯಣಾಚಾರ್ಯರ ವಿರುದ್ದ ಘೋಷಣೆಗಳನ್ನು ಕೂಗುತ್ತ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.  ನಂತರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ವಾಲ್ಮೀಕಿ ಸೇನೆ ರಾಜ್ಯಾಧ್ಯಕ್ಷ ಪ್ರತಾಪ್ ಮದಕರಿ ಮಾತನಾಡಿ,  ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ.7.5 ರಷ್ಟು ಹೆಚ್ಚಿಸಬೇಕೆಂದು ಆಗ್ರಹಿಸಿದರು.  
ನಂತರ ತಹಸೀಲ್ದಾರ್ ನಟರಾಜ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಟಿ.ಜಿ.ಬಸವರಾಜು, ಜಿಲ್ಲಾಧ್ಯಕ್ಷ ಎಸ್.ಎಸ್.ನಂದೀಶ್, ಕಾರ್ಯದರ್ಶಿ ಕೆ.ಎನ್.ಗಿರೀಶ್, ಮುಖಂಡರಾದ ಶೇಖರಪ್ಪ, ಮಲ್ಲೇಶ್, ಯರಿಗೇನಹಳ್ಳಿ ತಿಮ್ಮಯ್ಯ, ಹಿರೇಸಾದರಹಳ್ಳಿ ಜಯಣ್ಣ, ಧನಪಾಲ್, ರಂಗನಾಯಕ, ಕೆ.ಎಸ್.ರವಿಕುಮಾರ್ ಮತ್ತಿತರರು ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement