ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಾದೇಶಿಕ ಭಾಷೆಯ ಆಧಾರದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಲಿ

Srinivasa Murthy VN
Updated On : 21 May 2014, 12:03 pm

ಕನ್ನಡಪ್ರಭ ವಾರ್ತೆ ಹಾಸನ ಮೇ 20
ಕೇಂದ್ರ ಮತ್ತು ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯ ಆಧಾರದ ಮೇಲೆ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಶಿಕ್ಷಣದಲ್ಲಿ 1ರಿಂದ 4ನೇ ತರಗತಿ ವರೆಗೆ ಪ್ರಾದೇಶಿಕ ಭಾಷೆ ಬಳಸುವಂತೆ ಕಾನೂನು ತರಬೇಕಾಗದಂತಹ ಅವಶ್ಯಕತೆ ಇದೆ. ಇದಕ್ಕಾಗಿ ರಾಜ್ಯದಿಂದ ಆಯ್ಕೆಯಾಗಿರುವ ನೂತನ 28 ಸಂಸದರು ಇದರ ಬಗ್ಗೆ ಹೆಚ್ಚು ಗಮನಹರಿಸಬೇಕು. ರಾಜ್ಯದ ಮುಖ್ಯಮಂತ್ರಿಗಳು ಸಹ ಪ್ರಾದೇಶಿಕ ಭಾಷೀಕರ ಸಭೆ ಕರೆದು ಈ ಕುರಿತು ಚರ್ಚೆ ನಡೆಸಬೇಕು ಎಂದು ಹೇಳಿದರು.
ನ್ಯಾಯಾಲಯದಲ್ಲಿ ಇತ್ತೀಚೆಗೆ ಪ್ರಾಥಮಿಕ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆ ಕಡ್ಡಾಯವಲ್ಲ ಎಂದು ತೀರ್ಪು ನೀಡಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಇದರಿಂದ ಪ್ರಾದೇಶಿಕ ಭಾಷೆಯ ಮೇಲಿನ ಹಿಡಿತ ಕಡಿಮೆಯಾಗಲಿದ್ದು, ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಾಬಲ್ಯ ಹೆಚ್ಚಾಗುವ ಮೂಲಕ ಅವರ ಹಾದಿ ಸುಗಮವಾಗಲಿದೆ. ಇದರಿಂದ ಕನ್ನಡ ಭಾಷೆಗೆ ಹಿನ್ನೆಡೆಯಾದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ರಾಜ್ಯಗಳ ವಿಂಗಡಣೆಯು ಭಾಷೆಗಳ ಆಧಾರದ ಮೇಲೆ ಆಗಿದ್ದು, ಸಂವಿಧಾನಾತ್ಮಕ ಮಾನ್ಯತೆಯೂ  ನೀಡಿದೆ. ದೇಶದ 23 ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ಹಾಗಾಗಿ ಮಾತೃ ಭಾಷೆ ಬಳಕೆ ಕಡ್ಡಾಯಗೊಳಿಸಬೇಕಾದ ಅಗತ್ಯತೆ ಇದೆ ಎಂದರು.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ತಜ್ಞರೊಂದಿಗೆ ಚರ್ಚಿಸಿ ನ್ಯಾಯಾಲಯಕ್ಕೆ ಪುನರ್ ಪಿರಿಶೀಲನಾ ಅರ್ಜಿ ಹಾಕುವುದಾಗಿ ಹೇಳಿದ್ದಾರೆ. ಆದರೆ, ಇದರಿಂದ ಫಲ ಸಿಗುತ್ತೋ ಇಲ್ಲವೋ ಎಂಬ ನಂಬಿಕೆ ಇಲ್ಲದಿದ್ದರೂ ಅರ್ಜಿ ಹಾಕಬೇಕು ಎಂದು ಹೇಳಿದರು.  ತಮ್ಮ 6 ವರ್ಷದ ಅವಧಿಯಲ್ಲಿ  ಪ್ರಾಧಿಕಾರದ ವತಿಯಿಂದ 2011ರಲ್ಲಿ ರಾಜ್ಯ ಸರ್ಕಾರಕ್ಕೆ ನಾನಾ ಬೇಡಿಕೆಗಳನ್ನು ಸಲ್ಲಿಸಲಾಯಿತು ಅದರಲ್ಲಿ ಕೆಲವು ಈಡೇರಿಕೆಯಾಗಿದೆ. ಉಳಿದ ಬೇಡಿಕೆಗಳನ್ನೂ ಒಳಗೊಂಡಂತೆ ಒಟ್ಟಾರೆಯಾಗಿ ಈ ಬಾರಿ 33 ಬೇಡಿಕೆಗಳನ್ನು ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ನನಗೆ ಅಧಿಕಾರ ಇರಲಿ ಇಲ್ಲದಿರಲಿ ಬೇಡಿಕೆಗಳನ್ನು ಈಡೇರಿಸುವವರೆಗೂ ನನ್ನ ಹೋರಾಟವನ್ನು ನಡೆಸುವುದಾಗಿ ಹೇಳಿದರು.

2 ಸಾವಿರ ಅಕ್ರಮ ಇಂಗ್ಲಿಷ್ ಶಾಲೆಗಳು
ರಾಜ್ಯದ ಬಹುತೇಕ ಶಾಲೆಗಳು ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆಗಳನ್ನು ನಡೆಸುತ್ತಿವೆ. ಸರಿ ಸುಮಾರು 2 ಸಾವಿರ ಶಾಲೆಗಳು ಈ ರೀತಿ ಅಕ್ರಮವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುತ್ತಿವೆ. ಇದರ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಾನೂನು ಚೌಕಟ್ಟಿನಲ್ಲಿ ಇದನ್ನು ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕಾದಂತಹ ಅನಿವಾರ್ಯತೆ ಇದೆ ಎಂದರು.

ಅವಕಾಶ ಸಿಕ್ಕರೆ ಮುಂದುವರಿಯುವೆ
ಪ್ರಾಧಿಕಾರದ ತಮ್ಮ ಅಧಿಕಾರಾವಧಿ ಇನ್ನು ಒಂದು ತಿಂಗಳಲ್ಲಿ ಮುಗಿಯಲಿದೆ. ಸರ್ಕಾರ ಮತ್ತೆ ನನ್ನನ್ನು ಮುಂದುವರೆಸಿದರೆ ನಾನು ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ನಾಡು, ನುಡಿ ಮತ್ತು ಗಡಿಗಾಗಿ ಯಾವ ರೀತಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧನಿದ್ದೇನೆ. ಕನ್ನಡ ಪರ ಕೆಲಸ ಕಾರ್ಯಗಳಿಗೆ ಸರ್ಕಾರ ಸಾಕಷ್ಟು ಸ್ಪಂದಿಸುತ್ತಿದೆ. ಮುಖ್ಯಮಂತ್ರಿಗಳು ಸಹ ಕನ್ನಡದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ.
-ಮುಖ್ಯಮಂತ್ರಿ ಚಂದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement