ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲೋಕಾಯುಕ್ತ ಬಲೆಗೆ ಕಿರಿಯ ಎಂಜಿನಿಯರ್

Srinivasa Murthy VN
Updated On : 21 May 2014, 2:03 am

ಹೊಳೆನರಸೀಪುರ : ಕೆಟ್ಟುನಿಂತಿದ್ದ ವಿದ್ಯುತ್ ಪರಿವರ್ತಕವನ್ನು  ಬದಲಾಯಿಸಲು ಹಣ ನೀಡುವಂತೆ ಗ್ರಾಮಸ್ಥರನ್ನು ಒತ್ತಾಯ ಮಾಡಿ 4ಸಾವಿರ ರೂ. ಗಳನ್ನು ಲಂಚವಾಗಿ ಪಡೆಯುತ್ತಿದ್ದ ಸಂದರ್ಭದಲ್ಲಿ ಹೊಳೆನರಸೀಪುರ ಸೆಸ್ಕಿ ವಿಭಾಗಕ್ಕೆ ಸೇರಿದ ಬಸವಾಪಟ್ಟಣದಲ್ಲಿನ ಶಾಖಾ ಕಚೇರಿಯ ಪ್ರಭಾರಿ ಕಿರಿಯ ಎಂಜಿನಿಯರ್ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಬಿದ್ದ ಘಟನೆ ಮಂಗಳವಾರ ಪಟ್ಟಣದ ಸೆಸ್ಕ್‌ನ ಉಗ್ರಾಣದಲ್ಲಿ ನಡೆದಿದೆ.
ಸೆಸ್ಕ್‌ನ ಪ್ರಭಾರಿ ಕಿರಿಯ ಎಂಜಿನಿಯರ್ ಕೆ.ಜೆ.ರಾಜು ಎಂಬಾತನೇ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ. ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಬೂದುನೂರು ಗ್ರಾಮದಲ್ಲಿ ಕಳೆದ 15ದಿನಗಳ ಹಿಂದೆ ವಿದ್ಯುತ್ ಪರಿವರ್ತಕವೊಂದು ಕೆಟ್ಟುಹೋಗಿತ್ತು. ಇದನ್ನು ಬದಲಾಯಿಸುವಂತೆ ಗ್ರಾಮದ ನಾಗರಾಜು ಎಂಬಾತ ಸೆಸ್ಕ್‌ನ ಲೈನ್‌ಮೆನ್‌ಗಳಿಗೆ ಕೋರಿದ್ದಾರೆ. ಆದರೆ, ಅವರು ತಮ್ಮ ಶಾಖಾ ಕಚೇರಿಯ ಪ್ರಭಾರಿ ಕಿರಿಯ ಎಂಜಿನಿಯರ್ ಅವರನ್ನು ಕಾಣುವಂತೆ ತಿಳಿಸಿದ್ದರು ಎಂದು ಹೇಳಲಾಗಿದೆ.
ಬೂದನೂರು ಗ್ರಾಮದ ನಾಗರಾಜ್, ಬಸವಾಪಟ್ಟಣದಲ್ಲಿನ ಸೆಸ್ಕ್‌ನ ಶಾಖಾ ಕಚೇರಿಯಲ್ಲಿನ ಮೇಲ್ವಿಚಾರಕ ಹಾಗೂ ಪ್ರಭಾರಿ ಕಿರಿಯ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಜೆ.ರಾಜು ಅವರನ್ನು  ಭೇಟಿ ಮಾಡಿದಾಗ, ತನ್ನ ಮೇಲಧಿಕಾರಿಗಳಿಗೆ ನೀಡಲು ಹಾಗು ವಿದ್ಯುತ್ ಪರಿವರ್ತಕವನ್ನು ಬದಲಾಯಿಸಲು 10ಸಾವಿರ ರು  ಲಂಚ ಕೇಳಿದರೆಂದು ನಾಗರಾಜು ಆರೋಪಿಸಿದ್ದಾರೆ. ವಿದ್ಯುತ್‌ಪರಿವರ್ತಕವನ್ನು ಬದಲಾಯಿಸಲು ಎಂಜಿನಿಯರ್ ರಜು ಅವರಿಗೆ ರು. 4ಸಾವಿರ  ಮುಂಗಡವಾಗಿ ನೀಡಿ, ಇನ್ನುಳಿದ 6 ಸಾವಿರ ರುಗಳನ್ನು ನಂತರ ಕೊಡುವುದಾಗಿ ಹೇಳಿದ್ದ ನಾಗರಾಜು ಅವರಿಗೆ ಸೆಸ್ಕ್‌ನ ಪ್ರಭಾರಿ ಕಿರಿಯ ಎಂಜಿನಿಯರ್ ರಾಜು, ಮಂಗಳವಾರ ಹೊಳೆನರಸೀಪುರದಲ್ಲಿನ ಸೆಸ್ಕ್ ಉಗ್ರಾಣದ ಬಳಿಗೆ ಬರುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಲೋಕಾಯುಕ್ತರು ಬೀಸಿದ ಬಲೆಗೆ ರಾಜು ಬಿದ್ದಿದ್ದಾನೆ. ಈ ನಡುವೆ ವಿಷಯ ತಿಳಿದ ಸೆಸ್ಕ್‌ನ ಅಧಿಕಾರಿಗಳು ಹಾಗೂ ಸಂಘಟನೆಗಳ ಪದಾಧಿಕಾರಿಗಳು ರಾಜು ಅವರನ್ನು ಬಿಡಿಸಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಲೋಕಾಯುಕ್ತರಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement