ಕಂತೇನಹಳ್ಳಿ ಕೆರೆ ಒತ್ತುವರಿ: ಮೂಲ ಸ್ವರೂಪಕ್ಕೆ ಧಕ್ಕೆ
ಅರಸೀಕೆರೆ: ಪಟ್ಟಣದ ಕಂತೇನಹಳ್ಳಿ ಸಮೀಪವಿರುವ ದೊಡ್ಡಕೆರೆ ಒತ್ತುವರಿಯಾಗಿದ್ದು ಕೂಡಲೇ ಕೆರೆ ಒತ್ತುವರಿ ತೆರವಿಗೆ ಮುಂದಾಗಬೇಕು ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್, ಮುಖಂಡರಾದ ಜವನಹಳ್ಳಿ ನಿಂಗಪ್ಪ ಮುಂತಾದವರು ಎಚ್ಚರಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಉಭಯ ಮುಖಂಡರು ಹೊಯ್ಸಳರ ರಾಣಿ ಉಮಾದೇವಿ ಕಟ್ಟಿಸಿದ ಕೆರೆ ಇಂದು ಭೂಗಳ್ಳರ ಪಾಲಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಹೀಗಾಗಿ ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದಿದ್ದಾರೆ, ಹೊಯ್ಸಳ ದೊರೆ 2ನೇ ವೀರಬಲ್ಲಾಳನ ಪತ್ನಿ ದೊಡ್ಡಕೆರೆ ನಿರ್ಮಾಣದಿಂದಲೇ ಪಟ್ಟಣಕ್ಕೆ ಅರಸೀಕೆರೆ ಎಂಬ ಹೆಸರು ಬಂದಿದೆ ಅಲ್ಲದೆ ಅನೇಕ ಐತಿಹಾಸಿಕ ಆಧಾರಗಳಿಂದ ಇದು ಸಾಬೀತಾಗಿದೆ. ಈ ಕೆರೆಯ ವಿಸ್ತೀರ್ಣ ಸುಮಾರು 1,710 ಮೀ ಇದ್ದು, ಅಚ್ಚುಕಟ್ಟು ಪ್ರದೇಶವು 171.57 ಹೆಕ್ಟೇರ್ ಹಾಗೂ ಜಲಾವೃತ್ತ ಪ್ರದೇಶ 179.20 ಹೆಕ್ಟೇರ್ ವ್ಯಾಪ್ತಿಯಲ್ಲಿದೆ. ಸುಮಾರು 15 ಹೆಕ್ಟೇರಿಗೂ ಹೆಚ್ಚು ಒತ್ತುವರಿ ಮಾಡಿರುವ ನುಂಗಣ್ಣರು ಸಾರ್ವಜನಿಕ ಆಸ್ತಿಯನ್ನೇ ಲಪಟಾಯಿಸಲು ಮುಂದಾಗಿದ್ದಾರೆ. ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸತೊಡಗಿದ್ದಾರೆ.
ತಾಲೂಕು ಕಚೇರಿಯಿಂದ ಒತ್ತುವರಿ ಸಂಬಂಧ ಮಾಹಿತಿ ಕೇಳಿದರೂ ಇದುವರೆಗೂ ನೀಡಿಲ್ಲ. ರಾಜ್ಯಾದ್ಯಂತ ಕೆರೆ ಒತ್ತುವರಿ ತೆರವಿಗೆ ಸರ್ಕಾರ ಮುಂದಾಗಿದೆ. ಆದರೆ, ಅರಸೀಕೆರೆ ಕೆರೆ ಒತ್ತುವರಿ ತಡೆಯುವುದು ಮಾತ್ರ ಸಾಧ್ಯವಾಗಿಲ್ಲ. ಇದರಿಂದಾಗಿ ಹೋರಾಟಕ್ಕೆ ರೂಪುರೇಷೆ ರೂಪಿಸಲಾಗಿದೆ. ತಾಲೂಕಿನ ಪ್ರಜ್ಞಾವಂತ ಯುವ ಸಮುದಾಯ, ಶೀಘ್ರವೇ ಕೈಗೆತ್ತಿಕೊಳ್ಳಲಿರುವ ಹೋರಾಟಕ್ಕೆ ಸಂಘ ಸಂಸ್ಥೆಗಳು ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.