ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಮುಷ್ಕರ
ಹಾಸನ: ವೇತನ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ್ಯೂ ಮಿನರ್ವ ಮಿಲ್ ಕಾರ್ಮಿಕರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಮುಂದೆ ಬುಧವಾರ ಅಡುಗೆ ಮಾಡುವ ಮೂಲಕ ಕಾರ್ಮಿಕರು ಪ್ರತಿಭಟನೆ ಮುಂದವರಿಸಿದರು.
ಕಾರ್ಖಾನೆಯಲ್ಲಿ ಉತ್ತಮ ವಾತಾವರಣವಿಲ್ಲ. ಕಾರ್ಮಿಕರಿಗೆ ಸೂಕ್ತ ವೇತನ ನೀಡದ ಕಾರಣ ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಲಾಗುತ್ತದೆ. ಕಾರ್ಖಾನೆಯಲ್ಲಿ ಕಾರ್ಮಿಕರನ್ನು ಮನಸೋ ಇಚ್ಛೆ ದುಡಿಸಿಕೊಳ್ಳುತ್ತಿದ್ದು, ಅದಕ್ಕೆ ತಕ್ಕ ವೇತನವನ್ನು ನೀಡುತ್ತಿಲ್ಲ. ಕೆಲಸ ಸಮಯ ನಿಗದಿಯಾಗಿದ್ದರೂ ಅವಧಿಗಿಂತ ಹೆಚ್ಚಿನ ಕೆಲಸ ಮಾಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕಾರ್ಮಿಕರ ವೇತನ ಹೆಚ್ಚಳ, ಉದ್ಯೋಗ ಕಾಯಂಗೊಳಿಸುವುದು, ಕೆಲಸದ ಪಾಳಿ ಬದಲಾವಣೆ, ಕಾರ್ಮಿರಕರ ಸಮಿತಿ ಬದಲಾವಣೆ, ಪ್ರಥಮ ಚಿಕಿತ್ಸಾ ಕೇಂದ್ರ, ಸುರಕ್ಷತೆ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಇದೇ ಸಂಬಂಧವಾಗಿ ಈ ಹಿಂದೆಯೂ ಧರಣಿ ಮಾಡಲಾಗಿತ್ತು. ಆದರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಭಾನುಪ್ರಕಾಶ್, ಸುನೀಲ್, ದೇವರಾಜ್, ಕೇಶವ, ರಂಗಸ್ವಾಮಿ, ಮಹೇಶ್, ಪುನೀತ್, ಪ್ರವೀಣ್, ಮಧು ಸೇರಿದಂತೆ ನೂರಾರು ಜನ ಪುರುಷ ಹಾಗೂ ಮಹಿಳಾ ಕಾರ್ಮಿಕರು ಪಾಲ್ಗೊಂಡಿದ್ದರು.
ಕಾಲೇಜು ದುರಸ್ತಿಗೆ 8 ಲಕ್ಷ ಬಿಡುಗಡೆ
ಜಾವಗಲ್ : ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದುರಸ್ತಿ ಮತ್ತು ಕಾಂಪೌಂಡ್ ನಿರ್ಮಾಣಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ರು. 8 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಬಾಷ ತಿಳಿಸಿದರು.
ಹಣವನ್ನು ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಖಾತೆಗೆ ವರ್ಗಾಯಿಸಲಾಗಿದ್ದು, ಪ್ಲಾನ್ ಮತ್ತು ಎಸ್ಟಿಮೇಟ್ ತಯಾರಿಸಿ ಕಾಮಗಾರಿ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.