ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಾಡಹಗಲೇ ಮಹಿಳೆ ಕೊಲೆ

Srinivasa Murthy VN
Updated On : 28 May 2014, 11:44 am

ಆಲೂರು:  ತಾಲೂಕಿನ ಮಾವನೂರು ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಹಾಡಹಗಲೇ ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ಗ್ರಾಮದ ಬಸವಲಿಂಗಪ್ಪ ಎಂಬವರ ಪತ್ನಿ ಮಲ್ಲಮ್ಮ(65) ಕೊಲೆಯಾದವರು. ಮಧ್ಯಾಹ್ನ ಮನೆಯಲ್ಲಿ ಮಲ್ಲಮ್ಮ ಒಬ್ಬರೆ ಇದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಬೆಣ್ಣೆ ಕಡಿಯುವ ಹಗ್ಗದಲ್ಲಿ ಆಕೆಯ ಕೈ ಮತ್ತು ಕಾಲನ್ನು ಕಟ್ಟಿ ಹಾಕಿ ಸೋಫಾ ಮೇಲೆ ಹಾಕಿದ್ದ ಬಟ್ಟೆಯಿಂದ ಆಕೆಯ ಮುಖವನ್ನು ಬಿಗಿಯಾಗಿ ನುಲುಚಿ ಉಸಿರು ಕಟ್ಟಿಸಿ ಹತ್ಯೆಗೈದು ಲಕ್ಷಾಂತರ ರು. ಮೌಲ್ಯದ ಚಿನ್ನದ ಸರ, ಓಲೆ, ಉಂಗುರ ಹಾಗೂ ಮೊಬೈಲ್ ಅನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಈಕೆಯ ಪತಿ ಮಧ್ಯಾಹ್ನ ಊಟ ಮುಗಿಸಿ, ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಒಬ್ಬೊಂಟ್ಟಿಯಾಗಿದ್ದ ಮಲ್ಲಮ್ಮ ರಾತ್ರಿ ಅಡುಗೆ ಮಾಡಲು ತರಕಾರಿಯನ್ನು ಹಚ್ಚುತ್ತಿದ್ದಾಗ ಒಳನುಗ್ಗಿದ ಮೂವರು ಹಂತಕರ ತಂಡ ಈಕೆಯನ್ನು ಹತ್ಯೆ ಮಾಡಿ ದ್ದಾರೆ. ಕೊಲೆಯಾಗುವುದಕ್ಕೂ ಸ್ವಲ್ಪ ಹೊತ್ತಿನ ಮುಂಚೆ ಆರೋಪಿಗಳು ಮನೆಯ ಸುತ್ತಮುತ್ತ ನಾಲ್ಕೈದು ಬಾರಿ ಅಡ್ಡಾಡುತ್ತಿದ್ದನ್ನು ಗಮನಿಸಿ ಮಲ್ಲಮ್ಮ ಹಾಗೂ ಹಿಂದಿನ ಮನೆಯ ಇಬ್ಬರು ಹುಡುಗಿಯರು ಇವರನ್ನು ಪ್ರಶ್ನಿಸಿ ಗದರಿಸಿದ್ದಾರೆ.
ಆಗ ಆ ವ್ಯಕ್ತಿಗಳು ಇಲ್ಲಿನಿಂದ ಅಗಸರಹಟ್ಟ ಗ್ರಾಮಕ್ಕೆ ಹೋಗಬೇಕು. ದಾರಿ ಗೊತ್ತಾಗುತ್ತಿಲ್ಲ. ಮೊಬೈಲ್ ಕರೆ ಮಾಡಿದ್ದು, ಗ್ರಾಮದಿಂದ ಬಂದು ಕರೆದುಕೊಂಡು ಹೋಗಲಿದ್ದಾರೆ ಎಂದು ತಿಳಿಸಿದ್ದರು. ಇದಾದ ಸ್ವಲ್ಪ ಸಮಯದಲ್ಲಿ ಮಳೆ ಪ್ರಾರಂಭವಾಗಿದ್ದು, ಹಿಂದಿನ ಮನೆಯ ಹುಡುಗಿಯರು ಮನೆಯೊಳಕ್ಕೆ ಹೋಗಿದ್ದಾರೆ. ಕೊಲೆಯಾದ ಮಹಿಳೆಯು ಸಹ ಮನೆಯೊಳಗೆ ಹೋಗಿ ಬಾಗಿಲು ಹಾಕದೆ ತರಕಾರಿ ಹಚ್ಚುತ್ತ ಕುಳಿತಿದ್ದರು. ಈ ಸಂದರ್ಭವನ್ನು ಉಪ ಯೋಗಿಸಿಕೊಂಡ ಕೊಲೆಗಾರರು ಏಕಾ ಏಕಿ ಮನೆಗೆ ನುಗ್ಗಿ ಕೊಲೆ ಮಾಡಿ ಚಿನ್ನಾಭರಣ ದೋಚಿ, ಹೊರಗಿನಿಂದ ಬಾಗಿಲ ಚಿಲಕ ಹಾಕಿ ಪರಾರಿಯಾಗಿದ್ದಾರೆ.
ಮಳೆ ನಿಂತ ನಂತರ ಹಿಂದಿನ ಮನೆಯ ಹುಡುಗಿಯರು ಟಿವಿ ನೋಡಲು ಮಲ್ಲಮ್ಮನವರ ಮನೆಗೆ ಬಂದಾಗ ಕೊಲೆಯಾಗಿರುವ ವಿಷಯ ತಿಳಿದು ಬಂದಿದೆ.

ಸಾರ್ವಜನಿಕರ ಆಕ್ರೋಶ
ಆಲೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಗಲು ದರೋಡೆ, ಮನೆಗಳತನ ಕೊಲೆಯಂತಹ ಘಟನೆಗಳು ವಿಪರೀತವಾಗಿದ್ದು, ಆಲೂರು ಪೊಲೀಸರು ಯಾವುದೇ ಪ್ರಕರಣ ಭೇದಿಸದೆ ನಿಶ್ಕ್ರಿಯರಾಗಿದ್ದಾರೆ. ಪಟ್ಟಣದಲ್ಲಿ ಪೊಲೀಸರು ಇದ್ದಾರೋ ಇಲ್ಲವೋ ಎಂಬ ಚಿಂತನೆ ನಾಗರಿಕರಲ್ಲಿ ಕಾಡುತ್ತಿದ್ದು, ಈವರೆಗೂ ಯಾವೊಂದು ಪ್ರಕರಣವನ್ನೂ ಭೇದಿಸಿಲ್ಲ. ಯಾವಾಗಲೂ ಮರಳು ಲಾರಿಗಳನ್ನು ತಡೆಯುವುದು ಸೇರಿದಂತೆ ಬೇರೆ ತರಹದ ಕೆಲಸಗಳಲ್ಲೇ ಕಾರ್ಯ ಮಗ್ನರಾಗಿದ್ದು, ಆಲೂರಿಗೆ ಈವರೆಗೂ ನಿಯೋಜಿಸಿರುವ ಪೊಲೀಸ್ ಅಧಿಕಾರಿಗಳು ಕ್ರಿಯಾಶೀಲರಾಗಿರದೆ ಕೇವಲ ಇಲ್ಲಿಗೆ ಬರುವಂತಹ ಪೊಲೀಸರನ್ನು ಬೇರೆಡೆಗೆ ಬಂದೋಬಸ್ತ್  ಕೆಲಸಕ್ಕೆ ನಿಯೋಜಿಸುತ್ತಿದ್ದು, ಈಗ ಹಾಲಿ ಇದ್ದ ಇನ್ಸ್‌ಪೆಕ್ಟರ್ ಸ್ಥಳೀಯರೆಂಬ ಕಾರಣಕ್ಕೆ ಚುನಾವಣೆಯ ಸಂದರ್ಭದಲ್ಲಿ ಬೇರೆಡೆಗೆ ಹಾಕಿದ್ದರು. ಆದರೆ ಆಲೂರು ಠಾಣೆಯಲ್ಲಿ ಈಗ ಯಾರು ಇನ್ಸ್‌ಪೆಕ್ಟರ್ ಇಲ್ಲ. ಶೀಘ್ರ ದಕ್ಷ ಇನ್ಸ್‌ಪೆಕ್ಟರನ್ನು  ನಿಯೋಜಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement