5ನೇ ದಿನಕ್ಕೆ ಕಾಲಿಟ್ಟ ಮಿನರ್ವ ಮಿಲ್ ಕಾರ್ಮಿಕರ ಪ್ರತಿಭಟನೆ
ಹಾಸನ: ಕಾಯಂ ನೇಮಕಾತಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ್ಯೂ ಮಿನರ್ವ ಮಿಲ್ ಕಾರ್ಮಿಕರು ಕೈಗೊಂಡಿರುವ ಅನಿರ್ದಿಷ್ಠಾವಧಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕರ ಪ್ರತಿಭಟನೆಗೆ ಕರ್ನಾಟಕ ಕಾವಲು ಪಡೆ, ಕೆಎಸ್ಆರ್ಟಿಸಿ ನೌಕರರ ಸಂಘ, ಸಿಪಿಎಂ ಸಹ ಬೆಂಬಲ ವ್ಯಕ್ತಪಡಿಸಿವೆ.
ಪ್ರತಿಭಟನಕಾರರು ನಗರದ ಹೊರವಲಯದ ಕೈಗಾರಿಕಾ ಪ್ರದೇಶದ ಕಾರ್ಖಾನೆಯಿಂದ ಪಾದಯಾತ್ರೆ ಪ್ರಾರಂಭಿಸಿ ನಗರದ ಎನ್.ಆರ್.ವೃತ್ತಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆ ತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ಗೆ ಮನವಿ ಮಾಡಿದರು.
ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಸೂಕ್ತ ವೇತನ1 ನೀಡದ ಕಾರಣ ಕಾರ್ಮಿಕರ ಶ್ರಮಕ್ಕೆ ತಕ್ಕ ಪ್ರತಿಫಲ ಲಭ್ಯವಾಗುತ್ತಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಲಾಗುತ್ತದೆ. ಕಾರ್ಖಾನೆಯಲ್ಲಿ ಕಾರ್ಮಿಕರನ್ನು ಮನಸೋ ಇಚ್ಛೆ ದುಡಿಸಿಕೊಳ್ಳುತ್ತಿದ್ದು, ಅದಕ್ಕೆ ತಕ್ಕ ವೇತನವನ್ನು ನೀಡುತ್ತಿಲ್ಲ. ಕೆಲಸ ಸಮಯ ನಿಗದಿಯಾಗಿದ್ದರು ಸಹ ಅವಧಿಗಿಂತ ಹೆಚ್ಚಿನ ಕೆಲಸವನ್ನು ಮಾಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ವೇತನ ಹೆಚ್ಚಳ, ಉದ್ಯೋಗವನ್ನು ಕಾಯಂಗೊಳಿಸುವುದು, ಕೆಲಸದ ಪಾಳಿ ಬದಲಾವಣೆ, ಕಾರ್ಮಿಕರ ಸಮಿತಿ ಬದಲಾವಣೆ, ಪ್ರಥಮ ಚಿಕಿತ್ಸಾ ಕೇಂದ್ರ, ಸುರಕ್ಷತೆ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಬೇಡಿಕೆಗಳು ಈಡೇರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟ ಹಿಡಿದಿದ್ದಾರೆ.
ಕಾರ್ಖಾನೆಯಲ್ಲಿ ಸರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದರೆ ಅದಕ್ಕೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಇಲ್ಲದಾಗಿದೆ. ಇದರಿಂದ ಕಾರ್ಮಿಕರ ಆರೋಗ್ಯಕ್ಕೆ ಕುತ್ತು ಬಂದಿದೆ. ಆದ್ದರಿಂದ ಕಾರ್ಖಾನೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಆಗ್ರಸಿದರು.
ಪ್ರತಿಭಟನೆಯಲ್ಲಿ ಕೆಎಸ್ಆರ್ಟಿಸಿಯ ರಂಗೇಗೌಡ, ಸಿಪಿಎಂ ಡೋಂಗ್ರೆ, ಕಾವಲು ಪಡೆಯ ನವೀನ್, ಕಾರ್ಮಿಕರಾದ ಭಾನುಪ್ರಕಾಶ್, ಸುನೀಲ್, ದೇವರಾಜ್, ಕೇಶವ, ರಂಗಸ್ವಾಮಿ, ಮಹೇಶ್, ಪುನೀತ್, ಪ್ರವೀಣ್, ಮಧು ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.