ಒಳಚರಂಡಿ ಕಾಮಗಾರಿ ಮಾಡದೇ ರಸ್ತೆ ಡಾಂಬರೀಕರಣ
ಹೊಳೆನರಸೀಪುರ: ಎಲ್ಲ ಕಾಮಗಾರಿಗಳು ಮುಗಿದ ಮೇಲೆ ರಸ್ತೆಗೆ ಡಾಂಬರೀಕರಣ ಮಾಡುವುದು ಬೇರೆಲ್ಲಾ ಸ್ಥಳೀಯ ಸಂಸ್ಥೆಗಳ ವೈಶಿಷ್ಟ್ಯವಾದರೆ, ಒಳಚರಂಡಿ ಕಾಮಗಾರಿಯನ್ನೇ ಮಾಡದೆ ಮೊದಲು ಡಾಂಬರು ಹಾಕಿ ನಂತರ ರಸ್ತೆ ಅಗೆಯುವುದು ಇಲ್ಲಿನ ಪುರಸಭೆಯ ಸ್ಪೆಷಾಲಿಟಿಯಾಗಿದೆ.
ಇದಕ್ಕೆ ಉದಾಹರಣೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ರಸ್ತೆಯೊಂದಕ್ಕೆ ಡಾಂಬರು ಹಾಕಿದ ನಂತರ ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದೆ.
ಇಲ್ಲಿನ ಪುರಸಭೆಯ ಕಾರ್ಯವೈಖರಿಯೇ ಹಾಗೆ, ಎಲ್ಲಾ ಉಲ್ಟ ಕಾಮಗಾರಿಗಳು. ಬಡಾವಣೆಯ ಒಳಚರಂಡಿ ಕಾಮಗಾರಿಗಳನ್ನೆಲ್ಲಾ ಪೂರೈಸಿದ ಮೇಲೆ ರಸ್ತೆಗೆ ಡಾಂಬರು ಹಾಕುವುದನ್ನು ಬಿಟ್ಟು, ಎಲ್ಲಕ್ಕೂ ಮೊದಲೇ ರಸ್ತೆಗೆ ಡಾಂಬರು ಹಾಕಿದ ಎರಡು ತಿಂಗಳೊಳಗೇ ಒಳಚರಂಡಿ ದುರಸ್ಥಿಗಾಗಿ ಉತ್ತಮ ಸ್ಥಿತಿಯಲ್ಲಿನ ಡಾಂಬರು ರಸ್ತೆಯನ್ನೆಲ್ಲಾ ಬಗೆದು ಹಾಕುವುದು ಇಲ್ಲಿನ ಪುರಸಭೆಯ ಸ್ಪೆಷಾಲಿಟಿಗಳಲ್ಲೊಂದು ಎಂದು ಇಲ್ಲಿನ ನಾಗರಿಕರು ದೂರಿದ್ದಾರೆ.
ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ಗ್ರೀನ್‌ವುಡ್ ಶಾಲೆಗೆ ಹೋಗುವ ರಸ್ತೆಯಲ್ಲಿನ ಅಕ್ಕ ಪಕ್ಕದ ನಿವಾಸಗಳಿಗೆ ಒಳಚರಂಡಿ ಸಂಪರ್ಕವನ್ನು ಸರಾಗಗೊಳಿಸದೇ, ಇತ್ತೀಚೆಗಷ್ಟೇ ರಸ್ತೆಗೆ ಡಾಂಬರು ಹಾಕಲಾಗಿದೆ. ಆದರೆ, ಡಾಂಬರು ಹಾಕಿದ ನಂತರ ಒಳಚರಂಡಿ ಕಟ್ಟಿಕೊಂಡಿದೆ ಎಂಬ ಕಾರಣ ನೀಡಿ ಸುಸ್ಥಿತಿಯಲ್ಲಿದ್ದ ಡಾಂಬರು ರಸ್ತೆಯನ್ನೆಲ್ಲಾ ಅಗೆದು ಹಾಕಲಾಗಿದೆ.
ಮನೆಗಳ ಒಳಚರಂಡಿ ಸಂಪರ್ಕವನ್ನು ಪೂರ್ಣಗೊಳಿಸಿಕೊಳ್ಳುವಂತೆ ಮಾಡಿ, ನಂತರದಲ್ಲಿ ರಸ್ತೆಗೆ ಡಾಂಬರು ಹಾಕಿದ್ದಲ್ಲಿ ಈ ರೀತಿಯ ಅವ್ಯವಸ್ಥೆ ಬರುತ್ತಿರಲಿಲ್ಲ ಎನ್ನಲಾಗಿದೆ.
ಆದರೆ, ಇಲ್ಲಿನ ಪುರಸಭೆಯಲ್ಲಿನ ಯಾರಿಗೂ ದೂರದೃಷ್ಟಿತ್ವದ ಕಾಳಜಿ ಇಲ್ಲದ ಕಾರಣದಿಂದಾಗಿ ಈ ರೀತಿಯ ಅನಾವಶ್ಯಕ ಕಾಮಗಾರಿಗಳು ಮೇಲಿಂದ ಮೇಲೆ ಜರುಗುತ್ತಲೇ ಇರುವ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಇದರಿಂದಾಗಿ ಪುರಸಭೆಯ ಹಣ, ಸಾರ್ವಜನಿಕರಿಗೆ ಅಡಚಣೆ, ತೆರಿಗೆ ಹಣ ಪೋಲಾಗುವುದನ್ನು ತಪ್ಪಿಸುವ ಯಾವುದೇ ಕಾರ್ಯವನ್ನೂ ಇಲ್ಲಿನ ಪುರಸಭೆ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ.