ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಂತೇನಹಳ್ಳಿಯಲ್ಲಿ ಶನೈಶ್ವರಸ್ವಾಮಿ ಜಯಂತಿ

Srinivasa Murthy VN
Updated On : 29 May 2014, 11:47 am

ಮಹಾಗಣಪತಿ, ನವಗ್ರಹ, ಚಂಡಿಕಾ ಹೋಮ
ಅರಸೀಕೆರೆ: ಇಂದಿನ ಆಧುನಿಕ ಯುಗದಲ್ಲೂ ಜನರು ಭಯ, ಭಕ್ತಿಯಿಂದ ಪಾಪದ ಕಾರ್ಯಗಳಿಂದ ದೂರವಿದ್ದು ಸನ್ಮಾರ್ಗದತ್ತ ನಡೆಯಲು ಬಯಸುತ್ತಿದ್ದಾರೆ ಎಂದರೆ ಅದು ದೇವರ ಭಯದಿಂದ. ಅದರಲ್ಲೂ ಶನೀಶ್ವರನ ಭಯದಿಂದ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ  ನುಡಿದರು.
ಪಟ್ಟಣದ ಕಂತೇನಹಳ್ಳಿಯಲ್ಲಿರುವ ಶ್ರೀ ಶನೈಶ್ವರ ಸ್ವಾಮಿ ಶ್ರೀ ಕ್ಷೇತ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಶ್ರೀ ಶನೈಶ್ವರ ಜಯಂತಿ ಹಾಗೂ ಮಹಾಗಣಪತಿ, ನವಗ್ರಹ, ಶ್ರೀ ಸುದರ್ಶನ ಹಾಗೂ ಮಹಾ ಚಂಡಿಕಾ ಹೋಮದ ಪೂರ್ಣಾಹುತಿಯ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವದಿಸಿ ಮಾತನಾಡಿದರು. ಪಟ್ಟಣದ ಶ್ರೀ ಶನೈಶ್ವರ ಸ್ವಾಮಿಯ ಶ್ರೀ ಕ್ಷೇತ್ರವನ್ನು  ಸತೀಶ್ ಶರ್ಮಾಜಿ, ಮುರುಳಿ ಮಂದಾರ್ತಿ, ಧಾರ್ಮಿಕ ಹಾಗೂ ಅಧ್ಯಾತ್ಮಿಕ ಕೇಂದ್ರವಾಗಿ ಬೆಳೆಸಿದ್ದಾರೆ. ಈ ಕ್ಷೇತ್ರದಲ್ಲಿ ಸಹಸ್ರಾರು ಭಕ್ತರು ಬಂದು ಶಾಂತಿ, ನೆಮ್ಮದಿ ಪಡೆಯುತ್ತಿರುವುದು ಮೆಚ್ಚುಗೆಯ ವಿಷಯ ಎಂದರು. ಸತೀಶ್‌ಶರ್ಮಾಜಿ ಮಾತನಾಡಿ, ಕ್ಷೇತ್ರಕ್ಕೆ ನಂಬಿ ಬರುವ ಭಕ್ತರನ್ನು ಸ್ವಾಮಿಯು ಎಂದು ಕೈಬಿಟ್ಟಿಲ್ಲ ಈ ಎರಡೂ ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು  ಹೆಚ್ಚಿನ ನೆರವು ನೀಡಿದ್ದಾರೆ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳ ಪ್ರಧಾನ ಆಚಾರ್ಯತ್ವವನ್ನು ಸೋಮಸುಂದರ್ ಮತ್ತು ವಿದ್ಯಾಶಂಕರ್ ಮತ್ತು ತಂಡದವರು ವಹಿಸಿದ್ದರು. ಪತ್ರಕರ್ತ ಬಿ.ಎಸ್.ಸೇತುರಾಂ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವೇ.ಬ್ರ.ಶ್ರೀ ಮುರುಳಿ ಮಂದಾರ್ತಿ ವಂದಿಸಿದರು. ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಭಕ್ತಿಯ ಪರಾಕಾಷ್ಟೆ ಮೆರೆದರು.

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗೆ ಪ್ರವೇಶ
ಹಾಸನ: ಚನ್ನರಾಯಪಟ್ಟಣ ತಾಲೂಕು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೆಟ್ರಿಕ್‌ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ- ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
5ನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಅಥವಾ ಇತರೆ ವಿದ್ಯಾರ್ಥಿಗಳು ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ  ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿಯನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯದ ವಾರ್ಡನ್‌ಗೆ ಜೂನ್ 10 ರೊಳಗೆ ಸಲ್ಲಿಸುವಂತೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು  ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement