ಖೋಟಾನೋಟು ಚಲಾವಣೆ: ನಾಲ್ವರ ಬಂಧನ
ಹಾಸನ : ರಾಜ್ಯಾದ್ಯಂತ ಖೋಟಾನೋಟು ಚಲಾವಣೆ ಮಾಡುತ್ತಿದ್ದ ಬೆಂಗಳೂರಿನ ನಾಲ್ವರನ್ನು ಇಲ್ಲಿನ ಪೊಲೀಸರು ಬಂಧಿಸಿ, 90 ಸಾವಿರ ರು. ಮೌಲ್ಯದ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ನಗರದ ವಾಸಿ ಸುಧೀರ್‌ಕುಮಾರ್ ಅಲಿಯಾಸ್ ಮಣಿ 27), ಬೆಂಗಳೂರು ಹೆಗ್ಗನಹಳ್ಳಿಯ ಸತೀಶ್ ಅಲಿಯಾಸ್ ಕೋಳಿ (22), ರಮೇಶ್ ಬಿನ್ ಕೃಷ್ಣಶೆಟ್ಟಿ(28) ಮತ್ತು ಸೋಮಶೇಖರ್ ಬಿನ್ ಕೃಷ್ಣಶೆಟ್ಟಿ (28) ಎಂಬವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ರವಿ ಡಿ. ಚನ್ನಣ್ಣನವರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಕಲೇಶಪುರದ ಆನೆಮಹಲ್‌ನ ಸಾದಿಕ್ ಎಂಬುವರು ಅಂಗಡಿ ವ್ಯಾಪಾರ ಮಾಡುತ್ತಿದ್ದಾಗ ಈ ನಾಲ್ವರು ಆರೋಪಿಗಳು ಸಕಲೇಶಪುರ ಕಡೆಯಿಂದ ಬೈಕ್‌ನಲ್ಲಿ ಬಂದು ಒಂದು ಪ್ಯಾಕ್ ಸಿಗರೇಟ್ ತೆಗೆದುಕೊಂಡು 500 ರು. ನೋಟ್ ನೀಡಿದ್ದಾರೆ. ಸಾದಿಕ್ ಆ ನೋಟನ್ನು ಪಡೆದು ಉಳಿದ ಚಿಲ್ಲರೆ ವಾಪಸ್ಸು ನೀಡಿದ್ದಾರೆ. ಹಣ ಪಡೆದ ಆರೋಪಿಗಳು ಬೈಕ್‌ನಲ್ಲಿ ದೋಣಿಗಲ್ ಕಡೆಗೆ ಹೋಗಿದ್ದಾರೆ.
ನಂತರ ನೋಟಿನ ಬಗ್ಗೆ ಅನುಮಾನಗೊಂಡ ಸಾದಿಕ್, ಸಕಲೇಶಪುರ ಪಟ್ಟಣ ಠಾಣೆಗೆ ಬಂದು ದೂರು ನೀಡಿದ್ದಾರೆ. ಅದರನ್ವಯ ಪಿಎಸ್‌ಐ ಜೀವನ್ ಸೇರಿದಂತೆ ಇತರೆ ಸಿಬ್ಬಂದಿ ದೋಣಿಗಲ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಅವರ ಬಳಿ 90 ಸಾವಿರ ಮೌಲ್ಯದ 500 ರು. ಮುಖ ಬೆಲೆಯ ಖೋಟಾ ನೋಟುಗಳು ಹಾಗೂ 6 ಸಾವಿರ ಮೌಲ್ಯದ 100 ರು.ಮುಖ ಬೆಲೆಯ ಅಸಲಿ ನೋಟುಗಳು ಹಾಗೂ 3 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಪಶ್ಚಿಮ ಬಂಗಾಲದಿಂದ
ಪ್ರಕರಣದ ರೂವಾರಿಯಾದ ಸುಧೀರ್ ಕುಮಾರ್ ಚೆನ್ನರಾಯಪಟ್ಟಣ, ರಾಮನಗರ ಮತ್ತು ಬೆಂಗಳೂರು ನಗರದಲ್ಲಿ ಖೋಟಾನೋಟು ಚಲಾವಣೆ ಮತ್ತು ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಈ ಸಮಯದಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದವರು ಪರಿಚಯವಾಗಿದ್ದರು. ಪಶ್ಚಿಮಬಂಗಾಳದಿಂದ ಖೋಟಾನೋಟು ಬರುತ್ತಿತ್ತು ಎಂದು ಆರೋಪಿ ತಿಳಿಸಿದ್ದಾನೆ ಎಂದು ಎಸ್ಪಿ ಹೇಳಿದರು.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣೆಯ ಜೀವನ್ ಮತ್ತು ಸಿಬ್ಬಂದಿಯನ್ನು ಎಸ್ಪಿ ಅಭಿನಂದಿಸಿದ್ದಾರೆ.