ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೂನ್‌ನಲ್ಲಿ ಹೊಳೆನರಸೀಪುರ ತಾಲೂಕು ಸಾಹಿತ್ಯ ಸಮ್ಮೇಳನ

Srinivasa Murthy VN
Updated On : 29 May 2014, 11:46 am

ಕ.ಪ್ರ. ವಾರ್ತೆ ಟಿ ಹೊಳೆನರಸೀಪುರ ಟಿ ಮೇ 29
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆನಿಸಿದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ತಾಲೂಕು ಘಟಕದ ವತಿಯಿಂದ ಜೂನ್ ತಿಂಗಳ ಅಂತ್ಯದೊಳಗೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವುದು ಸೇರಿದಂತೆ, ಪಟ್ಟಣದಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಇಲ್ಲಿ ನಡೆದ ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಅವರ ಅಧ್ಯಕ್ಷತೆ ಹಾಗೂ ಸಾಹಿತ್ಯ ಭವನ ಕಟ್ಟಡ ಸಮಿತಿಯ ಅಧ್ಯಕ್ಷ ಜಿ.ಪಂ ಸದಸ್ಯ ಎಚ್.ಎನ್.ದೇವೇಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಾಹಿತ್ಯ ಭವನ ನಿರ್ಮಾಣ ಹಾಗೂ ತಾಲೂಕು ಸಮ್ಮೇಳನವನ್ನು ಒಟ್ಟಿಗೆ ನಡೆಸುವುದು ಸೂಕ್ತ ಎಂಬುದಾಗಿ ಸಭೆಯಲ್ಲಿ ಹಾಜರಿದ್ದ ಎಲ್ಲರ ಒಕ್ಕೊರಲಿನ ನಿರ್ಣಯದಂತೆ ಜೂನ್ ಅಂತ್ಯದೊಳಗೆ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿ ಸಮ್ಮೇಳನ ಹಾಗೂ ಶಂಕುಸ್ಥಾಪನೆಗೆ ಇನ್ನೊಂದು ವಾರದೊಳಗೆ ದಿನಾಂಕ ನಿಗದಿಗೊಳಿಸಲು ತೀರ್ಮಾನಿಸಲಾಯಿತು.
ಸಾಹಿತ್ಯ ಭವನ ಕಟ್ಟಡ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ ಸದಸ್ಯರೂ ಆದ ಎಚ್.ಎನ್.ದೇವೇಗೌಡ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಸಾಹಿತ್ಯ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಹಲವು ಸಾಹಿತ್ಯಾಸಕ್ತರು ಉದಾರ ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಎಲ್ಲರ ಸಹಕಾರ ಹಾಗೂ ಮಾರ್ಗದರ್ಶನ ಪಡೆದು ಭವನ ನಿರ್ಮಾಣಕ್ಕೆ ಮುಂದಾಗುವುದಾಗಿ ತಿಳಿಸಿದರು. ಅಲ್ಲದೇ ಈಗಾಗಲೇ ಸಾಹಿತ್ಯ ಭವನ ನಿರ್ಮಾಣಕ್ಕಾಗಿ ರು. 3.25ಲಕ್ಷ ಸಂಗ್ರಹವಾಗಿದ್ದು, ಭವನದ ನಿರ್ಮಾಣಕ್ಕಾಗಿ ಸುಮಾರು 40 ರಿಂದ 50 ಲಕ್ಷರು. ವೆಚ್ಚವಾಗುವ ನಿರೀಕ್ಷೆಯಿದ್ದು ಇದಕ್ಕಾಗಿ ಒಂದು ಸಮಿತಿ ರಚಿಸಿ ನಂತರದಲ್ಲಿ ದೇಣಿಗೆ ಸಂಗ್ರಹಿಸಿ ಸಾಹಿತ್ಯ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ಸಾಹಿತ್ಯ ಭವನದ ಶಂಕುಸ್ಥಾಪನೆ ಹಾಗೂ ತಾಲೂಕು ಸಮ್ಮೇಳನವನ್ನು ಒಟ್ಟಿಗೆ ನಡೆಸಲು ತೀರ್ಮಾನಿಸಲಾಗಿದ್ದು, ಈ ಕುರಿತಂತೆ ಸಮ್ಮೇಳನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸ್ಥಳೀಯ ಶಾಸಕರಾದ ಎಚ್.ಡಿ.ರೇವಣ್ಣ ಅವರನ್ನು ಆಹ್ವಾನಿಸಲು ತೀರ್ಮಾನಿಸಿ ಅವರ ದಿನಾಂಕವನ್ನು ನಿಗದಿಗೊಳಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಸಾಹಿತ್ಯ ಭವನ ನಿರ್ಮಾಣಕ್ಕೆ ಸ್ಥಳೀಯ ಪರಿಷತ್ತು ಮುಂದಾಗಿರುವ ಕಾರಣದಿಂದ ಈ ಬಾರಿಯ ಸಮ್ಮೇಳವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿ ಈ ಸಂದರ್ಭದಲ್ಲಿ ಸಂಗ್ರಹವಾಗುವ ಕನ್ನಡಾಭಿಮಾನಿಗಳ ಉದಾರ ದೇಣಿಗೆಯನ್ನು ಸಾಹಿತ್ಯ ಭವನ ನಿರ್ಮಾಣಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು.
ಸಾಹಿತ್ಯ ಸಮ್ಮೇಳನದ ಆಚರಣೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ, ಸಮ್ಮೇಳನದಲ್ಲಿನ ಗೋಷ್ಠಿಗಳ ಆಯೋಜನೆ, ಅತಿಥಿಗಳ ಆಹ್ವಾನದ ಕುರಿತಂತೆ ಮುಂದಿನ ಸಭೆಯಲ್ಲಿ ಅಂತಿಮ ಗೊಳಿಸಲು ಸಭೆ ಅನುಮೋದಿಸಿತು.
ಸಮ್ಮೇಳನದ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವ ಕುರಿತಂತೆ ಸಭೆಯಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾದವಾದರೂ, ಸಮ್ಮೇಳನದ ಸವಿನೆನಪಿಗಾಗಿ ತಾಲೂಕಿನ ಸಂಸ್ಕೃತಿ ಬಿಂಬಿಸುವ ಚಿಕ್ಕದಾದ ಮತ್ತು ಚೊಕ್ಕದಾದ ಸ್ಮರಣ ಸಂಚಿಕೆ ಹೊರತರುವ ಕುರಿತಂತೆಯೂ ಸಭೆಯು ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು
ಸಭೆಯಲ್ಲಿ ಕಸಾಪ ಮಾಜಿ ಅಧ್ಯಕ್ಷರಾದ ಗುಂಜೇವು ಅಣ್ಣಾಜಪ್ಪ, ಬಾ.ರಾ.ಸುಬ್ಬರಾಯ, ಎಚ್.ಡಿ.ಗುರುಪ್ರಸಾದ್, ರೋಟರಿ ಸಂಸ್ಥೆಯ ಅಧ್ಯಕ್ಷ ರೊ.ಆರ್.ಬಿ.ಪುಟ್ಟೇಗೌಡ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಎಸ್.ರಾಧಾಕೃಷ್ಣ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಸಿ.ಕುಮಾರಸ್ವಾಮಿ, ತಾಲೂಕು ಕಸಾಪ ಉಪಾಧ್ಯಕ್ಷ ಎಂ.ಎನ್.ಜೈಪ್ರಕಾಶ್, ಉಪನ್ಯಾಸಕ ಡಿ.ಕೆ.ಕುಮಾರಯ್ಯ, ಎಚ್.ಎಸ್.ಪ್ರಭುಶಂಕರ್, ಮಂಜುನಾಥಗುಪ್ತ, ವೈ.ವಿ.ಚಂದ್ರಶೇಖರ್, ಜವರೇಗೌಡ, ನರಸಿಂಹಶೆಟ್ಟಿ, ಕೆ.ಶಿವಕುಮಾರಾಚಾರಿ, ಮೈಸ್ ಕಂಪ್ಯೂಟರ್ ವ್ಯವಸ್ಥಾಪಕ ತಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement