ನಿವೇಶನ ಖಾತೆ ಮಾಡಿಕೊಡಲು ಆಗ್ರಹ
ಹಾಸನ: ಪಿತ್ರಾರ್ಜಿತವಾಗಿ ಬಂದ ನಿವೇಶನವನ್ನು ಖಾತೆ ಮಾಡಿಕೊಡುವಂತೆ ಆಗ್ರಹಿಸಿ ಪುರಸಭೆ ಮಾಜಿ ಅಧ್ಯಕ್ಷೆ ಜಯಶ್ರೀ ಗುರುರಾಜ್, ಪುರಸಭೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಪ್ರತಿಭಟನೆ ಸಂದರ್ಭ ತಮ್ಮ ಕುಟುಂಬ ಸದಸ್ಯರು ಹಾಗೂ ದಲಿತ ಸಂಘಟನೆಯ ಪ್ರಮುಖರು ಇದ್ದು ನ್ಯಾಯಕ್ಕಾಗಿ ಘೋಷಣೆ ಕೂಗಿದರು.
ಪ್ರತಿಭಟನೆ ವೇಳೆ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷೆ ಜಯಶ್ರೀ ಗುರುರಾಜ್, ಪಟ್ಟಣದ ಗೆಂಡೇಹಳ್ಳಿ ರಸ್ತೆಯಲ್ಲಿ ಪುರಸಭಾ ಖಾತೆ ನಂಬರ್ 3076-99 ರಲ್ಲಿ ಪೂರ್ವ ಪಶ್ಚಿಮ 45 ಅಡಿ, ಉತ್ತರ ದಕ್ಷಿಣ 120 ಅಡಿಗಳು ನಮ್ಮ ಮಾವನವರಾದ ಪುರಸಭೆ ಸದಸ್ಯರಾಗಿದ್ದ ಮಂಜಯ್ಯ ಅವರಿಗೆ ಸೇರಿದ್ದಾಗಿದ್ದು 1965-66ನೇ ಸಾಲಿನಲ್ಲಿನಿಂದಲೇ ಅವರ ಸ್ವಾಧೀನ ಅನುಭವದಲ್ಲಿದೆ. ಅವರು ಈಗಾಗಲೇ ನಿಧನ ಹೊಂದಿದ್ದಾರೆ.
ಅವರು ಜೀವಂತ ಇರುವಾಗಲೇ 1990 ನೇ ಇಸವಿಯಲ್ಲಿ ಅವರ ಒಪ್ಪಿಗೆ ಮೇಲೆ ನಮ್ಮ ಪತಿ ಗುರುರಾಜ್ ಹೆಸರಿಗೆ ಖಾತೆ ಬದಲಾವಣೆ ಮಾಡಿಸಲಾಗಿತ್ತು. ಈ ನಿವೇಶನದಲ್ಲಿ 13 ಅಡಿ ಅಗಲ 20 ಅಡಿ ಉದ್ದ ಅಳತೆಯ ಆರ್‌ಸಿಸಿ ಕಟ್ಟಡವನ್ನೂ ನಿರ್ಮಿಸಿ ಅಂದಿನಿಂದಲೂ ಕಂದಾಯ ಪಾವತಿ ಮಾಡಿಕೊಂಡು ಬಂದಿದ್ದೇವೆ. ಇದೀಗ ಈ ನಿವೇಶನವನ್ನ ಖಾಸಗಿ ವ್ಯಕ್ತಿಯೊಬ್ಬರು ತಮ್ಮದು ಎಂದು ಪುರಸಭೆಯಲ್ಲಿ ಖಾತೆ ಮಾಡಿಸಲು ಹೊರಟಿದ್ದಾರೆ. ಇದಕ್ಕೆ ಪುರಸಭೆಯವರು ಸಹ ಸಹಕಾರ ನೀಡುತ್ತಿದ್ದು ತಮ್ಮ ವಿರುದ್ಧವಾಗಿ ಒಳಗೊಳಗೆ ಬೇರೊಬ್ಬ ವ್ಯಕ್ತಿಗೆ ಖಾತೆ ಮಾಡಿಕೊಡುವ ಶಂಕೆಯಿದೆ. ಆ ಕಾರಣದಿಂದ ನ್ಯಾಯ ಕೋರಿ ಮತ್ತು ಖಾತೆ ಮಾಡಿಕೊಡದಂತೆ ಪ್ರತಿಭಟನೆ ನಡೆಸಿದ್ದೇವೆಂದು ತಿಳಿಸಿದರು. ನಂತರ ಪುರಸಭೆ ಉಪಾಧ್ಯಕ್ಷೆ ಸಯ್ಯದಾ ಭಾನು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಯಶ್ರೀ ಗುರುರಾಜ್ ಪುತ್ರರಾದ ಗಜೇಂದ್ರ, ಶಿವಕುಮಾರ್, ದಲಿತ ಸಂಘಟನೆಯ ಅಬ್ದುಲ್‌ಸಮದ್, ಇತರರು ಇದ್ದರು.