ಪತಿ ಕೊಲೆ: ಪತ್ನಿ ಸೆರೆ, ಪ್ರಿಯಕರ ನಾಪತ್ತೆ
ಕನ್ನಡಪ್ರಭ ವಾರ್ತೆ ಹಾಸನ ಮೇ 29
ವಾಸ್ತವವಾಗಿ ಇಂತಹ ಅನೀತಿಯಿಂದ ಕೂಡಿದ ಯಾರಿಗೂ ಮಾದರಿಯಾಗದ ಘಟನೆ ನಡೆಯಬಾರದಿತ್ತು. ತನ್ನನ್ನು ಅಪಾರ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದ ಪತಿಯನ್ನು ಪ್ರಿಯಕರನೊಡನೆ ಸೇರಿ ಪತ್ನಿ ಕೊಂದಿದ್ದಾಳೆ. ಕೊಂದ ಆರೋಪಿ ಪ್ರಿಯಕರನಿಗೂ ಕೊಲೆಯಾದವನೇ ಬದುಕು ಕೊಟ್ಟಿದ್ದ. ಆದರೂ ಮಿತ್ರ ದ್ರೋಹ ಎಸಗಿದ.
ಹೀಗೆ ಪತಿಯನ್ನು ಕೊಲೈಗೈದ ಶೃತಿ (31)ಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಾರಿಯಾಗಿರುವ ಆರೋಪಿ ಗಿರೀಶ್ ಮತ್ತು ಕೊಲೆಗೆ ಸಹಕರಿಸಿದ ಆತನ ಪತ್ನಿ ರಮಾದೇವಿಯನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಘಟನೆ ವಿವರ
ಎಸ್ಪಿ ರವಿ ದ್ಯಾಮಪ್ಪ ಚನ್ನಣ್ಣನವರ ಗುರುವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಬಗ್ಗೆ ವಿವರಿಸಿದರು.
ಹಾಸನ ನಗರದ ಹೇಮಾವತಿ ಬಡಾವಣೆಯಲ್ಲಿರುವ ಆಲೂಗಡ್ಡೆ ವ್ಯಾಪಾರಿ ಚಂದ್ರೇಗೌಡ ಮೇ 18 ರಂದು ಕೊಲೆಯಾಗಿದ್ದರು. ಪೊಲೀಸರು ತನಿಖೆ ನಡೆಸಿದಾಗ ಚಂದ್ರೇಗೌಡರನ್ನು ಆತನ ಪತ್ನಿ ಶೃತಿ, ಪ್ರಿಯಕರ ಗಿರೀಶ್ ಎಂಬಾತನೊಂದಿಗೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂತು.
ರಾಗಿ ಮುದ್ದೆಯಲ್ಲಿ ನಿದ್ರೆ ಮಾತ್ರೆ
ಮೇ 18 ರಂದು ರಾತ್ರಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಹಾಕಿ ಶೃತಿ ಊಟ ಬಡಿಸಿದ್ದಳು. ಇದನ್ನು ಸೇವಿಸಿದ ಚಂದ್ರೇಗೌಡ ರಾತ್ರಿ 2ರಲ್ಲಿ ಗಾಢ ನಿದ್ರೆಗೆ ಜಾರಿದ. ನಂತರ ಪ್ರಿಯಕರ ಗಿರೀಶ್ ಜೊತೆಗೂಡಿ ಚಂದ್ರೇಗೌಡರ ಬಾಯಿಗೆ ಪ್ಲಾಸ್ಟರ್ ಅಂಟಿಸಿ, ಕೈ, ಕಾಲುಗಳನ್ನು ಕಟ್ಟಿ ಕುತ್ತಿಗೆಯನ್ನು ಮೂಟೆದಾರದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದರು. ನಂತರ ಸಾಕ್ಷಿಗಳು ಸಿಗಬಾರದೆಂದು ಪತ್ನಿ ಶೃತಿ, ಗಂಡನ ಮೊಬೈಲ್ ಅನ್ನು ಶೌಚಾಲಯಕ್ಕೆ ಹಾಕಿದರು. ನಂತರ ಚಂದ್ರೇಗೌಡ ಶವವನ್ನು ಆತನ ಎರಿಟಿಗ ಕಾರಿನಲ್ಲಿ ಅರಸೀಕೆರೆ- ಹಾಸನ ರಸ್ತೆಯಲ್ಲಿ ಇರುವ ಬೆಲವೆತ್ತ ಅರಣ್ಯ ಪ್ರದೇಶದ ಶ್ರೀ ದೊಡ್ಡ ಕಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಹೋಗುವಾಗ ಸಿಗುವ ಕಾಲುವೆ ಸಮೀಪ ಕಾರು ಸಮೇತ ಶವವನ್ನು ಸುಟ್ಟು ಹಾಕಿ, ಆರೋಪಿಗಳು ಹಿಂತಿರುಗಿದ್ದರು.
ಕಾರು ಸುಟ್ಟಿರುವ ಬಗ್ಗೆ ಅರಣ್ಯ ರಕ್ಷಕ ಎ.ಆರ್. ಸ್ವಾಮಿ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಆರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೊಲೆ ಮಾಡಿದ ನಂತರ ಆರೋಪಿ ಗಿರೀಶ್, ಚಂದ್ರೇಗೌಡರ ಮನೆಯಲ್ಲಿ ಇದ್ದ 250 ಗ್ರಾಂ ಚಿನ್ನ, ಲಕ್ಷಾಂತರ ರು. ಹಣವನ್ನು ತೆಗೆದುಕೊಂಡು ಹೋಗಿದ್ದು, ಕೊಲೆಗೂ ನನಗೂ ಏನೂ ಸಂಬಂಧವೇ ಇಲ್ಲ ಎಂಬಂತೆ ಇದ್ದ ಶೃತಿಯನ್ನು ಮನೆಯಲ್ಲಿ ಬಂಧಿಸಲಾಯಿತು.
ಶ್ಲಾಘನೆ
ಈ ಪ್ರಕರಣವನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರಸೀಕೆರೆ ಡಿವೈಎಸ್ಪಿ ಐ.ಜಿ. ಮಂಜುನಾಥ್, ಇನ್ ಸ್ಪೆಕ್ಟರ್‌ಗಳಾದ ಆರ್. ವಿ. ಗಂಗಾಧರಪ್ಪ, ನಂದಕುಮಾರ್, ಜಿಲ್ಲಾ ಅಪರಾಧ ತನಿಖಾ ದಳದ ಇನ್‌ಸ್ಪೆಕ್ಟರ್ ಶಶಿಧರ್, ಸಬ್ ಇನ್‌ಸ್ಪೆಕ್ಟರ್‌ಸುನೀಲ್, ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಸಬ್ ಇನ್‌ಸ್ಪೆಕ್ಟರ್ ಸುರೇಶ್ ಮತ್ತು ಸಿಬ್ಬಂದಿಯ ಕಾರ್ಯ ದಕ್ಷತೆ ಬಗ್ಗೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಜೈನಹಳ್ಳಿ ರಶ್ಮಿ ಶಂಕರೇಗೌಡ ಇದ್ದರು.
ಗಿರೀಶನಿಗೆ ಬದುಕು ಕಟ್ಟಿಕೊಟ್ಟಿದ್ದ ಚಂದ್ರೇಗೌಡ
ಕೊಲೆಯಾದ ಚಂದ್ರೇಗೌಡ ಮತ್ತು ಗಿರೀಶ್ ಇಬ್ಬರು ಹಾಸನ ತಾಲೂಕು ಅಗಲವಳ್ಳಿ ಗ್ರಾಮದವರಾಗಿದ್ದು, ಸ್ನೇಹಿತರಾಗಿದ್ದರು. ಉದ್ಯೋಗವಿಲ್ಲದೇ ಅಲೆಮಾರಿಯಾಗಿದ್ದ ಗಿರೀಶ್‌ನನ್ನು ತನ್ನ ಆಲೂಗಡ್ಡೆ ವ್ಯಾಪಾರದಲ್ಲಿ ಪಾರ್ಟನರ್ ಮಾಡಿಕೊಂಡಿದ್ದಲ್ಲದೇ, ತನ್ನ ರಿಯಾಲ್ ಎಸ್ಟೇಟ್ ವ್ಯವಹಾರದಲ್ಲೂ ಭಾಗಿ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಗಿರೀಶ್, ಚಂದ್ರೇಗೌಡನ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಚಂದ್ರೇಗೌಡನ ಪತ್ನಿಯೊಡನೆ ಅನೈತಿಕ ಸಂಬಂಧ ಬೆಳೆಸಿದ್ದ. ಈ ಬಗ್ಗೆ ಸಂಶಯ ಬಂದು ಚಂದ್ರೇಗೌಡ, ಪತ್ನಿಗೆ ಬುದ್ದಿಮಾತು ಹೇಳಿದ್ದ. ಇದರಿಂದ ಬೇಸತ್ತು ಶೃತಿ, ಗಿರೀಶನೊಡನೆ ಸೇರಿಕೊಂಡು ಕೊಲೆಗೆ ಸಂಚು ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಕೊಲೆಯಾದ ವಾರದ ಹಿಂದಷ್ಟೇ ಪ್ರವಾಸ ತೆರಳಿದ್ದರು
ಕೊಲೆಯಾದ ವಾರದ ಹಿಂದೆಯಷ್ಟೇ ಚಂದ್ರೇಗೌಡ ಮತ್ತು ಗಿರೀಶ್ ಒಟ್ಟಿಗೆ ಧರ್ಮಸ್ಥಳ, ಕೊಲ್ಲೂರು ಮತ್ತಿತರ ಧಾರ್ಮಿಕ ಸ್ಥಳಗಳಿಗೆ ಹೋಗಿ ಬಂದಿದ್ದರು. ಚಂದ್ರೇಗೌಡ ತನ್ನ ವ್ಯವಹಾರ ಮತ್ತಿತರ ವಿಷಯಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಿ, ಸುಖ, ದುಃಖಗಳನ್ನು ಗಿರೀಶ್‌ನೊಂದಿಗೆ ಚಂದ್ರೇಗೌಡ ಹಂಚಿಕೊಳ್ಳುತ್ತಿದ್ದರು. ಇದನ್ನು ಮರೆತ ಆರೋಪಿ ಗಿರೀಶ್, ಮಿತ್ರ ದ್ರೋಹ ಎಸಗಿದರೇ, ಶೃತಿ ಪತ್ನಿ ದ್ರೋಹ ಎಸಗಿದ್ದಾಳೆ ಎಂದು ಎಸ್ಪಿ ಹೇಳಿದರು.
5 ವರ್ಷದ ಪುತ್ರಿ ಇದ್ದಾಳೆ
ಕೊಲೆಯಾದ ಚಂದ್ರೇಗೌಡರಿಗೆ ಅಕ್ಷತಾ ಎಂಬ 5 ವರ್ಷ ವಯಸ್ಸಿನ ಪುತ್ರಿ ಇದ್ದರೇ, ಆರೋಪಿ ಗಿರೀಶ್ ಎಂಬಾತ ತನ್ನ ಮನೆಯವರ ವಿರೋಧ ಕಟ್ಟಿಕೊಂಡು ರಮಾದೇವಿ ಎಂಬಾಕೆಯನ್ನು ವಿವಾಹವಾಗಿದ್ದಾನೆ. ರಮಾದೇವಿ ಹಾಸನ ನಗರದಲ್ಲಿ ಬ್ಯೂಟಿ ಪಾರ್ಲರ್ ನೆಡೆಸುತ್ತಿದ್ದಾಳೆ. ಗಿರೀಶ್ ಕೊಲೆ ಮಾಡಿರುವ ವಿಷಯ ಗೊತ್ತಿದ್ದರೂ ಮುಚ್ಚಿಡುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡಿದ ಆರೋಪ ಇದೆ. ಹಾಗಾಗಿ ಆಕೆಯನ್ನು ಸದ್ಯದಲ್ಲೆ ಬಂಧಿಸಲಾಗುವುದು.