ಬಸ್ ಡಿಕ್ಕಿ- ಬೈಕ್ ಸವಾರ ಸಾವು
ಸಕಲೇಶಪುರ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ಅಶೋಕ ರಸ್ತೆಯ ವಾಸಿ ಯೂನಸ್ ಖಾನ್(40) ಮೃತರು. ಯೂನಸ್ ಖಾನ್ ಬೈಕಿನಲ್ಲಿ ಕೊಲ್ಲಹಳ್ಳಿಯಿಂದ ಸಕಲೇಶಪುರಕ್ಕೆ ಹೋಗಲು ಕೊಲ್ಲಹಳ್ಳಿ ಗ್ರಾಮದ ಹತ್ತಿರ ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ತೀವ್ರ ಗಾಯಗೊಂಡ ಯೂನಸ್ ಖಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.
ಮೂವರು ನಾಪತ್ತೆ
ಹಾಸನ: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವತಿಯರು ಹಾಗೂ ಒಬ್ಬ ಮಹಿಳೆ ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. ಹಾಸನ ತಾಲೂಕು ಕಸಬಾ ಹೋಬಳಿಯ ಬಿದರೆಕೆರೆ ಗ್ರಾಮದ ರಂಗಯ್ಯ ಎಂಬವರ ಪುತ್ರಿ ದೀಪಿಕಾ ಉರುಫ್ ಪಾಪು (18) ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ.5 ಅಡಿ ಎತ್ತರ, ಕನ್ನಡ ಬಾಷೆ ಮಾತನಾಡುತ್ತಾರೆ ಎಂದು ಆಕೆಯ ಅಣ್ಣ ಶೇಖರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಮಂಚಿಗೇನಹಳ್ಳಿ ಗ್ರಾಮದ ಚನ್ನೇಗೌಡ ಎಂಬವರ ಪುತ್ರಿ ಸಹನ(19) ಮನೆಯಿಂದ ಹೊರಗೆ ಹೋದವರು ವಾಪಸಾಗಿಲ್ಲ. 5.2 ಅಡಿ ಎತ್ತರವಿದ್ದು ಕನ್ನಡ ಮಾತನಾಡುತ್ತಾರೆ ಎಂದು ಆಕೆಯ ತಾಯಿ ಚಂದ್ರಕಲಾ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಆಲೂರು ತಾಲೂಕಿನ ಬಿಜ್ಜನಹಳ್ಳಿ ಗ್ರಾಮದ ಸರೋಜಮ್ಮ (36) ಎಂಬುವರು ನಾಪತ್ತೆಯಾಗಿದ್ದಾರೆ. ಸರೋಜಮ್ಮ 5.6 ಅಡಿ ಎತ್ತರವಿದ್ದು, ಬಿಳಿ ಕೆಂಪು ಮಿಶ್ರಿತ ಬಣ್ಣ ಹೊಂದಿದ್ದಾರೆ. ದುಂಡುಮುಖ, ತೆಳ್ಳನೆಯ ಶರೀರ ಹೊಂದಿದ್ದು, ಮನೆ ಬಿಟ್ಟಾಗ ಕೆಂಪು ಸೀರೆ, ಕೆಂಪು ರವಿಕೆ ಧರಿಸಿದ್ದು, ಕನ್ನಡ ಮಾತನಾಡುತ್ತಾರೆ ಎಂದು ಆಕೆಯ ಪತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ಮಾರಾಟ: ಬಂಧನ
ಅರಸೀಕೆರೆ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 1300 ರು. ಬೆಲೆಯ ಮದ್ಯ ವಶಪಡಿಸಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಜಾವಗಲ್ ಹೋಬಳಿಯ ಸಾವಂತನಹಳ್ಳಿ ಗ್ರಾಮದ ಲೋಕೇಶಪ್ಪ(65) ಬಂಧಿತ ಆರೋಪಿ.
ಅವರು ತಮ್ಮ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ನವೀನ್, ಸಿಬ್ಬಂದಿಯೊಂದಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಮದ್ಯ ಮಾರಾಟಕ್ಕಿಟ್ಟಿದ್ದ 1300 ರು. ಬೆಲೆಯ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.