ಮಳೆ, ಗಾಳಿಗೆ ವಿದ್ಯುತ್ಕಂಬಗಳು ಧರೆಗೆ, ಮನೆಗಳಿಗೆ ಜಖಂ
ಬೇಲೂರು: ತಾಲೂಕಿನ ಹೆಬ್ಬಾಳು ಸುತ್ತಮುತ್ತಲಿನಲ್ಲಿ ಇತ್ತೀಚೆಗೆ ಬಿದ್ದ ಮಳೆ ಮತ್ತು ಬಿರುಗಾಳಿಯಿಂದ ಅನೇಕ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು ಮನೆಗಳ ಹೆಂಚು ಮತ್ತು ಶೀಟುಗಳು ಹಾರಿವೆ. ತೆಂಗಿನ ಮರಗಳು ನೆಲಕ್ಕುರುಳಿವೆ.
ಮಳೆಯೊಂದಿಗೆ ಬೀಸಿದ ಬಿರುಗಾಳಿಯಿಂದ ಶಿವಾಲದಹಳ್ಳಿ ಗಡಿಯಲ್ಲಿರುವ ಶೇಷೇಗೌಡ ಅವರ ಮನೆಯ ಹತ್ತಿರದ ವಿದ್ಯುತ್ ಕಂಬ ಮನೆಯ ಮೇಲೆ ತುಂಡಾಗಿ ಬಿದ್ದಿದೆ. ಅದೃಷ್ಟವಶಾತ್ ಆ ವೇಳೆ ವಿದ್ಯುತ್ ಸರಬರಾಜು ಇಲ್ಲದ ಕಾರಣ ಯಾವುದೆ ಅವಘಡ ಸಂಭವಿಸಿಲ್ಲ.
ಮಲ್ಲಮ್ಮ ಎಂಬವರ ಮನೆಯ ಹೆಂಚು ಹಾರಿದೆ. ಗೋಪೇಗೌಡ ಎಂಬುವರ ರೇಷ್ಮೆ ಮನೆಯ ಚಾವಣಿ ಹಾರಿಹೋದ ಪರಿಣಾಮ ರೇಷ್ಮೆಗೂಡಿಗೆ ತೊಂದರೆ ಆಗಿದೆ. ಶಿವಾಲದ ಹಳ್ಳಿಯಲ್ಲಿ ಮೂರ್ತಿ, ಕೃಷ್ಣೇಗೌಡ, ಸೋಮೇಗೌಡ, ನಿಂಗೇಗೌಡ, ರಾಜೇಗೌಡ, ರಂಗೇಗೌಡ, ಚಂದ್ರೇಗೌಡ, ತಮೇಗೌಡ ಇವರಿಗೆ ಸೇರಿದ ಮನೆಗಳ ಚಾವಣಿ ಹಾನಿಗೊಳಗಾಗಿವೆ.
ಇದೆ ಗ್ರಾಮದವರಾದ ಕುಮಾರಸ್ವಾಮಿ, ಹೊನ್ನೇಗೌಡ, ಬಸವೇಗೌಡ, ಶೇಷೇಗೌಡ ಸೇರಿದಂತೆ ಅನೇಕರಿಗೆ ಸೇರಿದ ಸುಮಾರು 22 ತೆಂಗಿನ ಮರಗಳು ಮುರಿದು ಬಿದ್ದಿವೆ. ಬಿರುಗಾಳಿಯಿಂದ ಮಾವಿನ ಫಸಲು ಉದುರಿವೆ. ಒಟ್ಟು 5 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಮೆಣಸಿನ ಬೆಳೆ ಹಾನಿಗೊಳಗಾಗಿವೆ. ರೇಷ್ಮೆ ಹುಳು ಸಾಕಣೆ ಮಾಡುತ್ತಿರುವ ಹೇಮಾವತಿ, ರೇಷ್ಮೆಹುಳು ನಾಶವಾಗಿದ್ದಕ್ಕೆ ಕಣ್ಣೀರಿಟ್ಟು ಪರಿಹಾರ ನೀಡಬೇಕೆಂದು ಮನವಿ ಮಾಡಿದರು.