ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜ್ಯದ ರೇಲ್ವೆ ಯೋಜನೆಗಳು ಕಾರ್ಯಗತವಾಗಲಿ

Srinivasa Murthy VN
Updated On : 29 May 2014, 11:46 am

ಹೊಳೆನರಸೀಪುರ: ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಂದ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಹಾಗೂ ನಿಧಾನಗತಿಯಲ್ಲಿ ಸಾಗಿರುವ ರೇಲ್ವೆ ಯೋಜನೆಗಳನ್ನು ಕಾರ್ಯಗತ ಮಾಡಬೇಕು ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಪಟ್ಟಣದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎ.ರಘು (ಸೂರನಹಳ್ಳಿ ರಘು) ಹೇಳಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೂ ಉತ್ತಮ ಆಡಳಿತಗಾರರೆನಿಸಿದ್ದ ಸದಾನಂದ ಗೌಡರು ಪ್ರಸ್ತುತ ಕೇಂದ್ರ ರೈಲ್ವೆ ಮಂತ್ರಿಯಾಗಿ ಆಯ್ಕೆಯಾಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಮತ್ತು ಆಶಾದಾಯಕ ಸುದ್ದಿ ಎಂದರು. ರಾಜ್ಯದವರೇ ಕೇಂದ್ರದಲ್ಲಿ ರೈಲ್ವೆಯಂತಹ ಪ್ರಭಾವಿ ಖಾತೆ ಗಿಟ್ಟಿಸಿರುವ ಕಾರಣದಿಂದಾಗಿ ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಕೊಡುಗೆಗಳು ದೊರಕಬಹುದು ಎಂಬ ಆಶಾಭಾವನೆಯನ್ನು  ವ್ಯಕ್ತಪಡಿಸಿದ್ದಾರೆ.
ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದ ಕಾಲದಲ್ಲಿ ಬಹು ಮಹತ್ವಾಕಾಂಕ್ಷೆಯೊಂದಿಗೆ ಜಾರಿಗೊಳಿಸಿದ ಹಾಸನ-ಬೆಂಗಳೂರು ನಡುವಿನ ನೂತನ ರೈಲು ಮಾರ್ಗದ ಕಾಮಗಾರಿಗೆ ನಂತರದಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅವಶ್ಯವಿರುವಷ್ಟು ಅನುದಾನ ನೀಡುವಲ್ಲಿ ವಿಫಲವಾದವು ಎಂದು ವಿಷಾದಿಸಿದರು.
ಹಲವು ವರ್ಷಗಳಿಂದಲೂ ಕುಂಟುತ್ತಲೇ ಸಾಗಿರುವ ಈ ನೂತನ ರೈಲು ಮಾರ್ಗದ ಕಾಮಗಾರಿ ಪೂರೈಕೆಗಾಗಿ ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಮಾಜಿ ಪ್ರಧಾನಿ ದೇವೇಗೌಡರು ಹಲವು ಬಾರಿ ಒತ್ತಡ ತಂದು ಅರ್ಧದಷ್ಟು ಕಾಮಗಾರಿ ಅಂತಿಮ ಹಂತಕ್ಕೆ ಬರಲು ಕಾರಣಗಾಗಿದ್ದಾರೆ.
ಅಲ್ಲದೇ ದೇವೇಗೌಡರು ಪ್ರಧಾನಿಗಳಾಗಿದ್ದ ಕಾಲದಲ್ಲಿ ನಿರ್ಮಿಸಲಾದ ಪಟ್ಟಣದ ನೂತನ ರೈಲ್ವೆ ನಿಲ್ದಾಣಕ್ಕೆ ಇದುವರೆವಿಗೂ ಪ್ರಯಾಣಿಕರ ಅನುಕೂಲಕ್ಕಾಗಿ ಶೆಲ್ಟರ್ ಮತ್ತು ಪ್ಲಾಟ್‌ಫಾರಂ ನಿರ್ಮಾಣವಾಗದೇ ಪ್ರಯಾಣಿಕರಿಗೆ ನಿತ್ಯವೂ ಆಗುತ್ತಿರುವ ಅನಾನುಕೂಲತೆಯನ್ನು ತಪ್ಪಿಸಲು ಕೇಂದ್ರ ರೇಲ್ವೆ ಮಂತ್ರಿ ಡಿ.ವಿ.ಸದಾನಂದಗೌಡರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೂಲಕ ಪರಿಸ್ಥಿತಿಯನ್ನು ವಿವರಿಸಿ ಅವಶ್ಯಕ ಕಾಮಗಾರಿಯನ್ನು ಪೂರೈಸುವ ಕಾರ್ಯ ಶೀಘ್ರದಲ್ಲಿಯೇ ನಡೆಯಬೇಕು ಎಂದು ಹೇಳಿದ್ದಾರೆ.

ಡಿ.ವಿ.ಸದಾನಂದಗೌಡರಿಗೆ ರಾಜ್ಯದಲ್ಲಿ ಕೈಗೊಳ್ಳಬಹುದಾದ ಹೊಸ ರೇಲ್ವೆ ಯೋಜನೆಗಳ ಕುರಿತಂತೆಯೂ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಸಾಕಷ್ಟು ಅನುಭವವಿದ್ದು, ಈ ಬಾರಿಯಾದರೂ ಹಾಸನ-ಬೆಂಗಳೂರು ನಡುವಿನ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡಿ ರಾಜ್ಯಕ್ಕೆ ತಮ್ಮ ಕೊಡುಗೆ ನೀಡಬೇಕು.
- ಎಸ್.ಎ.ರಘು, ಡಿಸಿಸಿ ಬ್ಯಾಂಕ್ ನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement