ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಷ್ಟ್ರೀಯ ಪ್ರಶಸ್ತಿಗೆ ಅರ್ಜಿ ಆಹ್ವಾನ

Srinivasa Murthy VN
Updated On : 29 May 2014, 11:49 am

ಹಾಸನ: ಭಾರತೀಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಾನಾ ರಂಗದಲ್ಲಿ ಸಾಧನೆಗೈದ ಸಾಧಕರಿಗಾಗಿ  ರಾಷ್ಟ್ರೀಯ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆರ್ಥಿಕ ಅಭಿವೃದ್ಧಿ, ವೈದ್ಯಕೀಯ, ಶೈಕ್ಷಣಿಕ, ವೈಜ್ಞಾನಿಕ, ಸಂಶೋಧನೆ, ವಾಸ್ತು ಧಾರ್ಮಿಕ, ಕಲೆ, ಶಿಲ್ಪಕಲೆ, ಸಂಗೀತ, ನೃತ್ಯ, ನಾಟಕ, ಪ್ರಕಾಶನ, ಕ್ರೀಡೆ, ಚಲನಚಿತ್ರ, ಕಿರುತೆರೆ, ಕೈಗಾರಿಕೆ, ಸಮಾಜ ಸೇವೆ, ಕುರಕುಶಲತೆ ಮತ್ತು ಆಡಳಿತ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕ್ರಿಯಾಶೀಲ ವ್ಯಕ್ತಿ, ಮಹಿಳೆ ಮತ್ತು ಸಂಸ್ಥೆಗಳಿಂದ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವರ್ಣರಂಜಿತವಾಗಿ ನಡೆಯಲಿದ್ದು, ಆಸಕ್ತರು ಮಾಹಿತಿಗಳೊಂದಿಗೆ ಮೇ 30 ರೊಳಗಾಗಿ ಕಳುಹಿಸಲು ಕೋರಲಾಗಿದೆ.  ಕಾರ್ಯದರ್ಶಿಗಳು, ಭಾರತೀಯ ಮಹಿಳಾ ಅಭಿವೃದ್ಧಿ ನಿಗಮ, ಶ್ರೀನಿವಾಸ, ಕೊಪ್ಪದಕೆರೆ,  ಧಾರವಾಡ - 580008, ಮೊ. 9611255569 ಸಂಪರ್ಕಿಸಬಹುದು.

ವಿದ್ಯುತ್ ಕಂಬಕ್ಕೆ ಟೆಂಪೊ ಡಿಕ್ಕಿ
ಹಾಸನ : ಚಾಲಕನ ನಿಯಂತ್ರಣ ತಪ್ಪಿ ಟೆಂಪೊವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ರಾತ್ರಿ ನಡೆದಿದೆ. ನಗರದ ಎಂ.ಜಿ.ರಸ್ತೆಯ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದ ಸಮೀಪ ರಾತ್ರಿ ಟೆಂಪೂ ಟ್ರಾವಲ್ಸ್ ಎದುರಿನಿಂದ ಬಂದಂತಹ ಕಾರಿಗೆ ದಾರಿ ನೀಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ವಿದ್ಯುತ್ಕ್‌ಂಬಕ್ಕೆ ಟೆಂಪೊ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಯಾವುದೇ ಪ್ರಾಣ ಹಾನಿ ಸಂಭಿವಿಸಿಲ್ಲ.

ಮನೆ ಮನೆ ಕವಿಗೋಷ್ಠಿ ಜೂನ್ 1ರಂದು
ಹಾಸನ:  207ನೇ  ಮನೆಮನೆ ಕವಿಗೋಷ್ಠಿ ಮಾಸಿಕ ಕಾರ್ಯಕ್ರಮವು ಹಾಸನದ ಅಗ್ರಹಾರ ಬೀದಿಯ ಅಂಬಾಭವಾನಿ ಮುಂಭಾಗವಿರುವ ಕವಯಿತ್ರಿ ಸುಕನ್ಯಾ ಮುಕುಂದ ಅವರ ಕಾಮಧೇನು ನಿಲಯದಲ್ಲಿ ಜೂನ್ 1 ರಂದು  ಸಂಜೆ 4ಕ್ಕೆ ನಡೆಯಲಿದೆ.ಸಾಹಿತಿ ಚಂದ್ರಕಾಂತ ಪಡೆಸೂರ ಅವರಿಂದ ಕನ್ನಡ ಕಾವ್ಯದಲ್ಲಿ ಪ್ರತಿಮಾ ವಿಧಾನ ಎಂಬ ವಿಷಯದಡಿ ಉಪನ್ಯಾಸ ನಡೆಯಲಿದೆ, ನಂತರ ನಡೆಯುವ ಕವಿಗೋಷ್ಠಿಯಲ್ಲಿ ಜಿಲ್ಲೆಯ ಹಿರಿ-ಕಿರಿಯ ಕವಿ-ಕವಯತ್ರಿಯರಿಂದ ಕವಿತೆ ವಾಚನ ಹಾಗೂ ವಿಮರ್ಶೆ ನಡೆಯಲಿದೆ.ಆದ್ದರಿಂದ ಜಿಲ್ಲೆಯ ಆಸಕ್ತ ಸಾಹಿತ್ಯಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಚಾಲಕ  ಕೊಟ್ರೇಶ್ ಎಸ್.ಉಪ್ಪಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಚಾಲಕರು-9739878197, ಪ್ರಾಯೋಜಕರು-8183938326.

ನೌಕರರ ಭವನ ಉದ್ಘಾಟನೆ ಇಂದು
ಹಾಸನ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ನೌಕರರ ಭವನ ನವೀಕೃತಗೊಂಡಿದ್ದು, ಇದರ ಉದ್ಘಾಟನೆಯು ಮೇ 30 ರಂದು ನೆರವೇರಲಿದೆ.ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಮಂಜೇಗೌಡ ನವೀಕೃತ ಭವನದ ಉದ್ಘಾಟನೆ ನೆರವೇರಿಸುವರು. ಅಂದು ರಾಜ್ಯ ಮಟ್ಟದ ಸಮ್ಮೇಳನ ಹಾಗೂ ಜಿಲ್ಲಾ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮಂಜೇಗೌಡರ ಅಧ್ಯಕ್ಷತೆಯಲ್ಲಿ  ಸಭೆ ಕರೆಯಲಾಗಿದೆ ಎಂದು  ಜಿಲ್ಲಾ  ಪ್ರಧಾನ ಕಾರ್ಯದರ್ಶಿಕೆ.ಎಂ.ಶ್ರೀನಿವಾಸ ತಿಳಿಸಿದ್ದಾರೆ.

ಪ್ರಾಥಮಿಕ ಸಹಕಾರ ಸಂಘಕ್ಕೆ ಆಯ್ಕೆ
ರಾಮನಾಥಪುರ: ರಾಮನಾಥಪುರ ಹೋಬಳಿ ಕಾಳೇನಹಳ್ಳಿ ಗ್ರಾಮದ ಕೆ.ಟಿ. ಯೋಗಣ್ಣ ಪ್ರಾಥಮಿಕ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ. 10 ಸದಸ್ಯರ ಸಂಖ್ಯಾ ಬಲದ ಅರಕಲಗೂಡು ತಾಲೂಕಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ನಡೆಯಿತು. ಕೆ.ಟಿ.ಯೋಗಣ್ಣ 7 ಮತ ಪಡೆಯುವ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ವೇಳೆ ಜೆಡಿಎಸ್  ರಾಜ್ಯ ಉಪಾಧ್ಯಕ್ಷ ಹೊನ್ನವಳ್ಳಿ ಸತೀಶ್, ಹೋಳೆನರಸೀಪುರ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಸ್. ಶಂಕರ್, ಗ್ರಾ.ಪಂ. ಸದಸ್ಯ ಗೋವಿಂದೇಗೌಡ ಇತರರು ಇದ್ದರು. ಚುನಾವಣಾಧಿಕಾರಿಯಾಗಿ ಮಾದೇಗೌಡ ಭಾಗವಹಿಸಿದ್ದರು.
ಅಭಿನಂದನೆ: ರಾಮನಾಥಪುರ ಜಿಲ್ಲಾ ಪಂಚಾಯತಿ ಸದಸ್ಯೆ ಸರೋಜಮ್ಮ ರಾಮೇಗೌಡ, ಮಾಜಿ ಸದಸ್ಯ ಎಚ್.ಎಸ್. ಶಂಕರ್, ರುದ್ರಪಟ್ಟಣ ಗ್ರಾ.ಪಂ. ಸದಸ್ಯ ಗೋವಿಂದೇಗೌಡ, ಶೇಖರ್, ಮಂಜುನಾಥ್, ಮಧುರನಹಳ್ಳಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಮುಂತಾದವರು ಅಭಿನಂದನೆ ಸಲ್ಲಿಸಿದರು.

ಎಸ್‌ಬಿಎಂ ಶಾಖೆಯ ಎಟಿಎಂ ಕೇಂದ್ರ ಪ್ರಾರಂಭ
ಹಾಸನ: ಬಹಳ ದಿವಸಗಳಿಂದ ಸಾರ್ವಜನಿಕರ ಒತ್ತಾಯದ ಮೇರೆಗೆ ಹಾಸನ ತಾಲೂಕು ಶಾಂತಿಗ್ರಾಮದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಎಟಿಎಂ ಕೇಂದ್ರವನ್ನು ಇತ್ತೀಚೆಗೆ  ಪ್ರಾರಂಭಿಸಲಾಗಿದೆ. ಈ ಬ್ಯಾಂಕಿನ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಎಟಿಎಂ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಶಾಂತಿಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ವ್ಯವಸ್ಥಾಪಕ ಎಸ್. ವಿನಯ್ ಕೋರಿದ್ದಾರೆ.

ಐ.ಟಿ.ಐ ಗೆ  ಪ್ರವೇಶ
ಹಾಸನ: ಎಸ್ಸೆಸ್ಸೆಲ್ಸಿ  ಅಥವಾ ಜೆಒಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಐ.ಟಿ.ಐ.ನ ಫಿಟ್ಟರ್, ಟರ್ನರ್, ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್(ಇ.ಎಂ), ಎಂ.ಎಂ.ವಿ., ಎಂ.ಆರ್.ಎ.ಸಿ. ವೃತ್ತಿಗಳಿಗೆ ಪ್ರವೇಶ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  ಸಿ.ಟಿ.ಎಸ್. ಯೋಜನೆಯಲ್ಲಿರುವ ತಾಂತ್ರಿಕ ಹಾಗೂ ತಾಂತ್ರಿಕೇತರ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಇಲಾಖಾ ವೆಬ್ ಸೈಟ್ ಮೂಲಕ ಅರ್ಜಿ ಪಡೆದು ಜೂನ್ 5 ರವರೆಗೆ ಸಲ್ಲಿಸಬಹುದು. ವಿದ್ಯಾರ್ಥಿಗಳ ಆಯ್ಕೆಯು ಮೆರಿಟ್ ಹಾಗೂ ರೋಸ್ಟರ್ ಪದ್ಧತಿಗೆ ಅನುಗುಣವಾಗಿದೆ. ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸಬೇಕೆಂದು ಬೇಲೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಕೋರಿದ್ದಾರೆ.

ಸಂಸದ ಪ್ರತಾಪ್ ವಿಜಯೋತ್ಸವ ನಾಳೆ
ಮಡಿಕೇರಿ: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದ ಪ್ರತಾಪ್ ಸಿಂಹ ಶನಿವಾರ ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ನಡೆಯುವ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. 31ರಂದು ಶನಿವಾರ ಬೆಳಗ್ಗೆ 7 ಗಂಟೆಗೆ ತಲಕಾವೇರಿಗೆ ತೆರಳಿ ಕಾವೇರಿಗೆ ಪೂಜೆ ಸಲ್ಲಿಸಲಿದ್ದು, ನಂತರ ಭಾಗಮಂಡಲ ಭಂಗಡೇಶ್ವರ ದೇವಸ್ಥಾನದಲ್ಲಿ ಪೂಜೆ, 9 ಗಂಟೆಗೆ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನಕ್ಕೆ ಭೇಟಿ ಮತ್ತು ಪೂಜೆ, ಮಧ್ಯಾಹ್ನ 10.30ಕ್ಕೆ ಮಡಿಕೇರಿ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಜೆಪಿಯಿಂದ ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ವಿಜಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಜರುಗುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವ ಪ್ರತಾಪ್ ಸಿಂಹ ತಮ್ಮ ವಿಜಯಕ್ಕೆ ಕಾರಣರಾದ ಕೊಡಗಿನ ಜನತೆಗೆ ಧನ್ಯವಾದ ಸಮರ್ಪಿಸಲಿದ್ದಾರೆ. ಸಂಜೆ 4 ಗಂಟೆಗೆ ವಿರಾಜಪೇಟೆಯಲ್ಲಿ ಬಿಜೆಪಿ ವತಿಯಿಂದ ನಡೆಯುವ ವಿಜಯೋತ್ಸವದಲ್ಲಿ ಕೂಡ ಪ್ರತಾಪ್ ಸಿಂಹ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ.

ತಾಯಿ, ಮಗಳು ನಾಪತ್ತೆ
ಮೈಸೂರು: ಕೆ.ಆರ್. ಠಾಣೆ ವ್ಯಾಪ್ತಿಯ ನಿವಾಸಿ ಮೋಹನ್ ಅ. ಲೋಕೇಶ್ ಎಂಬವರ ಪತ್ನಿ ಎಂ.ಕಾತ್ಯಾಯಿನಿ (30) ಹಾಗೂ ಮಗಳು ವಸುಂದರಾ (5) ಮಂಗಳವಾರ ನಾಪತ್ತೆಯಾಗಿದ್ದಾರೆ. ಪತ್ನಿ ಮತ್ತು ಮಗಳು ಮನೆಯಲ್ಲಿದ್ದ ಬೆಳ್ಳಿ ಮತ್ತು ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿದ್ದಾರೆ. ಕಾಣೆಯಾಗಿರುವ ಇಬ್ಬರನ್ನು ಪತ್ತೆ ಮಾಡಿಕೊಡುವಂತೆ ಮೋಹನ್ ಪೊಲೀಸರಿಗೆ ದೂರು ನೀಡಿದ್ದಾರೆ. ಕಾತ್ಯಾಯಿನಿ ಚಹರೆ- 5.4 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ದೃಢಕಾಯ ಶರೀರ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ವಸುಂದರಾ ಚಹರೆ- 3 ಅಡಿ ಎತ್ತರ, ಗೋದಿ ಮೈಬಣ್ಣ, ಗುಂಡು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418319, 519 ಸಂಪರ್ಕಿಸಿ.

ವಿಶೇಷ ಉಪನ್ಯಾಸ
ಮೈಸೂರು ಸೈನ್ಸ್ ಫೌಂಡೇಷನ್ ವತಿಯಿಂದ ಮೇ 31ರ ಸಂಜೆ 5.45ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಅದ್ಭುತ ಮಾಸಾಂಹಾರಿ ಸಸ್ಯಗಳು ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಮಾಹಿತಿಗೆ ಸಂತೋಷ್‌ಕುಮಾರ್, ಮೊ. 8105503863.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement