ರುದ್ರಪಟ್ಟಣದ ವಿದ್ವಾಂಸರ ಸಾಧನೆ ಶ್ರೇಷ್ಠ: ಸ್ವಾಮೀಜಿ
ರಾಮನಾಥಪುರ:ಸಂಗೀತದ ಕಂಪನ್ನು ನಾಡಿನೆಲ್ಲೆಡೆ ಪಸರಿಸುವಂತೆ ಮಾಡುವಲ್ಲಿ ರುದ್ರಪಟ್ಟಣದ ಸಂಗೀತ ವಿದ್ವಾಂಸರ ಪರಿಶ್ರಮ ಸಾಧನೆಗಳು ಶ್ರೇಷ್ಠವೆನಿಸಿದೆ. ಕಾವೇರಿ ನದಿಗೆ ತಲಕಾವೇರಿ ಉಗಮ ಸ್ಥಾನವೆಂಬಂತೆ ರುದ್ರಪಟ್ಟಣದ ಉಗಮಕ್ಕೆ ಪ್ರೇರಣೆಯಂತಿದೆ ಎಂದು ಹಾಸನ ಆದಿಚುಂಚನಗಿರಿ ಶ್ರೀ ಶಂಭುನಾಥಸ್ವಾಮೀಜಿ ಹೇಳಿದರು.
ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ಸಪ್ತಸ್ವರ ದೇವತಾ ಮಂದಿರದಲ್ಲಿ ಇತ್ತೀಚೆಗೆ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದರು.
ತಂಬೂರಿ ಅಕಾರದ ವಿಶಿಷ್ಟ ರೀತಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿರುವ ಸಪ್ತಸ್ವರ ದೇವತಾ ಧ್ಯಾನ ಮಂದಿರವು ವಿಶಿಷ್ಠವಾಗಿದೆ. ಈ ಮಂದಿರದಲ್ಲಿ ಸಪ್ತಸ್ವರಗಳ ಅಧಿನಾಯಕರಾದ ಕನಕದಾಸರು, ವಾದಿರಾಜರು, ಪುರದರದಾಸರು, ತ್ಯ್ಯಾಗರಾಜರು, ಮತ್ತು ಸ್ವಾಮಿ ದೀಕ್ಷಿತರು, ಶಾಮಶಾಸ್ತ್ರಿಗಳು ಮತ್ತು ಮಾತೆ ಸರಸ್ವತಿ ವಿಗ್ರಹಗಳನ್ನು ಪ್ರತಿಸ್ಥಾಪಿಸಿ ಸಂಗೀತದಲ್ಲಿಯೇ ಪೂಜಾ ಕೈಂಕರ್ಯಗಳು ಜರುಗುತ್ತಿರುವುದು ವಿಶೇಷವಾಗಿದೆ ಎಂದ ಅವರು ಇಂತಹ ಗ್ರಾಮೀಣ ಪ್ರದೇಶದಲ್ಲಿ ಸಂಗೀತ ಕಲೆ ಇಷ್ಟೊಂದು ವೈವಿಧ್ಯಮಯವಾಗಿ ಬೆಳೆದಿರುವುದು ವಿಶಿಷ್ಟವೆನಿಸಿದೆ. ಇಲ್ಲಿಯ ಸಪ್ತಸ್ವರ ದೇವತಾ ಮಂದಿರದಲ್ಲಿ ನಿತ್ಯ ಪೂಜೆಯೊಂದಿಗೆ ದಿನಪೂರ್ತಿ ಕೇಳಿ ಬರುವ ಸಂಗೀತ ಕಲರವ ಎಂಥವರನ್ನೂ ನಾದಲೋಕಕ್ಕೆ ಸೆಳೆದೊಯ್ಯುತ್ತದೆ. ಈ ನಿನಾದ ಎಂಥವರಿಗೂ ಅತ್ಮಾನಂದದ ಅನುಭೂತಿ ನೀಡುತ್ತಿರುವುದಂತೂ ಸುಳ್ಳಲ್ಲ. ಸಂಗೀತದಲ್ಲಿ ದೇವರನ್ನು ಕಾಣು ಎಂಬಂತೆ ದೇವಾಲಯದಲ್ಲಿ ಸಂಗೀತ ಜತೆಯಾದಾಗ ಎಂತಹ ಮನಸ್ಸಿಗೂ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಪ್ರತಿ ವರ್ಷ ರುದ್ರಪಟ್ಟಣಕ್ಕೆ ಸಾವಿರಾರು ವಿದ್ವಾಸರು ಕಲಾವಿದರನ್ನು ಕರೆ ತಂದು ಗ್ರಾಮೀಣ ಪ್ರದೇಶದಲ್ಲಿ ಸಂಗೀತ ಗಾನಸುಧೆ ಹರಿಸುತ್ತಿರುವುದು ಎಲ್ಲರ ಸೌಭಾಗ್ಯ. ಜಾತಿ, ಮತ ಎನ್ನದೆ ಸಾಮರಸ್ಯದಿಂದ ನಡೆಸಿಕೊಂಡು ಬರುತ್ತಿರುವ ಸಂಗೀತ ವಿದ್ವಾನ್ ಅರ್.ಕೆ. ಪದ್ಮನಾಭ್ ಅವರಿಗೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.