ಅಕ್ರಮ ಮರಳು ದಂಧೆ: 17 ದೋಣಿ ವಶಕ್ಕೆ
ಹೊಳೆನರಸೀಪುರ: ಯಾವುದೇ ಪರವಾನಗಿ ಇಲ್ಲದೇ ತಾಲೂಕಿನ ನಾನಾ ಕಡೆಗಳಲ್ಲಿ ಹೇಮಾವತಿ ನದಿಯಿಂದ ಅಕ್ರಮವಾಗಿ ಮರಳು ತಗೆಯುತ್ತಿದ್ದವರ ಮೇಲೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 17 ಕಬ್ಬಿಣದ ದೋಣಿಗಳನ್ನು ತಾಲೂಕು ಆಡಳಿತ ವಶಕ್ಕೆ ತೆಗೆದುಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ.
ತಾಲೂಕಿನ ಕಟ್ಟೆಬೆಳಗುಲಿ, ಮಾರಗೌಡನಹಳ್ಳಿ ಹಾಗೂ ಕಟ್ಟಹಳ್ಳಿ ಸಮೀಪದಲ್ಲಿನ ಹೇಮಾವತಿ ನದಿಯಿಂದ ಆಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಗಳಿಗೆ ಉಪ-ವಿಭಾಗಾಧಿಕಾರಿ ಶರತ್, ತಹಸೀಲ್ದಾರ್ ಎಸ್.ರಾಘವೇಂದ್ರ, ಎಎಸ್ಪಿ ವಿನಾಯಕಪಾಟೀಲ್, ಲೋಕೋಪಯೋಗಿ ಇಲಾಖೆಯ ಎಇಇ ಕೋದಂಡರಾಮಯ್ಯ ಅವರ ನೇತೃತ್ವದ ಎರಡು ತಂಡಗಳು ಏಕಕಾಲದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಬ್ಬಿಣದ ಬೋಟುಗಳನ್ನು ವಶಪಡಿಸಿಕೊಳ್ಳಲಾಯಿತೆಂದು ತಹಸೀಲ್ದಾರ್ ರಾಘವೇಂದ್ರ ತಿಳಿಸಿದ್ದಾರೆ. ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಆಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟುವ ಸಲುವಾಗಿ ತಹಸೀಲ್ದಾರ್ ನೇತೃತ್ವದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಸಭೆ ನಡೆಸಿ ಆಕ್ರಮ ಮರಳು ಮಾಫಿಯಾವನ್ನು ಶತಾಯಗತಾಯ ತಡೆಗಟ್ಟಲೇಬೇಕೆಂದು ತೀರ್ಮಾನಿಸಲಾಗಿತ್ತು. ಇದರ ಬೆನ್ನ ಹಿಂದೆಯೇ ತಾಲೂಕಿನ ವಿವಿಧೆಡೆಗಳಲ್ಲಿ ಹೇಮಾವತಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಶಾಶ್ವತವಾಗಿ ತಡೆಯೊಡ್ಡಲು ಜಿಲ್ಲಾಧಿಕಾರಿಗಳು ಕಠಿಣ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಅಧಿಕಾರಿಗಳು ಎರಡು ತಂಡಗಳಾಗಿ ವಿಂಗಡಿಸಿ ಏಕಕಾಲಕ್ಕೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ನದಿಯಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕರನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅವರ ಸಹಾಯದಿಂದಲೇ ನದಿಯಲ್ಲಿ ಮುಳುಗಿಸಲಾಗಿದ್ದ ಕಬ್ಬಿಣದ ಬೋಟುಗಳನ್ನು ಮೇಲೆತ್ತಿಸಿ ಸುಮಾರು ನಾಲ್ಕು ಟ್ರಾಕ್ಟರ್ಗಳನ್ನು ವಶಕ್ಕೆ ತಗೆದುಕೊಳ್ಳಲಾಯಿತು ಎಂದು ತಿಳಿಸಿದ ತಹಸೀಲ್ದಾರ್ ರಾಘವೇಂದ್ರ, ಕಳೆದೊಂದು ವಾರದಿಂದ ತಾವು ಮತ್ತು ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆಯೊಂದಿಗೆ ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದರು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಲೋಕೊಪಯೋಗಿ ಇಲಾಖೆಯ ಎಇ ನರೇಂದ್ರ, ಆರಕ್ಷಕ ವೃತ್ತ ನಿರೀಕ್ಷಕರಾದ ಕಷ್ಣಪ್ಪ, ನಗರಠಾಣೆ ಪಿಎಸ್ಐ ಶಿವಕುಮಾರ್, ಗ್ರಾಮಾಂತರ ಠಾಣೆ ಪಿಎಸ್ಐ ಲೋಕೇಶ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಈವರೆಗೆ ಯಾರೊಬ್ಬರು ಬಂಧಿತರಾಗಿಲ್ಲ.
ಅಕ್ರಮ ಮರಳು ದಂಧೆಕೋರರಿಗೆ ರಾಜಕಾಣಿಗಳ ಬೆಂಬಲವಿದೆ ಎಂಬ ಹುಂಬತನದಿಂದ ಮರಳು ಮಾಫಿಯಾ ತಂಡ ಯಾವುದೇ ಭಯವಿಲ್ಲದೆ ಹೇಮಾವತಿ ನದಿಯಲ್ಲಿ ಅಕ್ರಮ ಮರಳು ಶೇಖರಣೆ ಮುಂದಾಗಿವೆ. ಆದರೆ ಇನ್ನು ಮುಂದೆ ರಾಜಕಾಣಿಗಳ ಬೆಂಬಲಕ್ಕೆ ಶಾಶ್ವತವಾಗಿ ಕಡಿವಾಣ ಹಾಕಲು ಜಿಲ್ಲಾಡಳಿತ ನಿರ್ಧರಿಸಿದೆ.
-ರಾಘವೇಂದ್ರ, ತಹಸೀಲ್ದಾರ್.