ಕುಂಟುತ್ತ ಸಾಗಿದೆ ಕಲಾಭವನದ ಕಾಮಗಾರಿ
ಅರಸೀಕೆರೆ: ಪಟ್ಟಣದ ಹೃದಯ ಭಾಗದಲ್ಲಿದ್ದ ಶ್ರೀ ವೆಂಕಟೇಶ್ವರ ಚಲನ ಚಿತ್ರಮಂದಿರ ಹೆಚ್ಚು ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಉತ್ತಮ ಆದಾಯ ತಂದುಕೊಡುತ್ತಿದ್ದ ಈ ಚಿತ್ರಮಂದಿರವನ್ನು ಕಲಾಭವನವನ್ನಾಗಿ ಅಭಿವೃಧ್ಧಿ ಪಡಿಸುವ ಕಾಮಗಾರಿ ಆರಂಭಗೊಂಡು 2 ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಅತ್ತ ಚಿತ್ರಮಂದಿರವೂ ಇಲ್ಲದೆ ಇತ್ತ ಕಲಾವಿದರ ಪ್ರತಿಭೆ ಪ್ರದರ್ಶಿಸಲು ಸಾಧ್ಯವಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಾಲ್ಕೈದು ವರ್ಷಗಳ ಹಿಂದೆ ತಾಲೂಕು ಆಡಳಿತ ಮುಜರಾಯಿ ಇಲಾಖೆಯ ವಶಕ್ಕೆ ಕೋಟ್ಯಂತರ ರು. ಮೌಲ್ಯದ ಈ ಕಟ್ಟಡವನ್ನು ತೆಗೆದುಕೊಂಡಿದ್ದು, ಯಾವುದೇ ರೀತಿಯಲ್ಲಿ ಭದ್ರತೆಯ ನಿರ್ವಹಣೆ ಇಲ್ಲದೆ ಕಟ್ಟಡ ಹಾಳು ಬಿದ್ದು, ಅನೈತಿಕ ಚಟುವಟಿಕೆಗಳು ತಾಣವಾಗಿ ಬೆಳೆದಿತ್ತು.
ಈ ಬಗ್ಗೆ ಸ್ಥಳೀಯ ಸಂಘಟನೆಗಳು ಮತ್ತು ಸಾರ್ವಜನಿಕರ ದೂರು ಹಾಗೂ ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಕಾರ್ಯಪ್ರವೃತರಾದ ಅಂದಿನ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರಾವಗಿ ಪರಿಗಣಿಸಿ ಸರ್ಕಾರದ ಜೊತೆ ಪತ್ರ ವ್ಯವಹಾರ ನಡೆಸಿದ ಪರಿಣಾಮ ಈ ಚಲನ ಚಿತ್ರಮಂದಿರವನ್ನು ಕಲ್ಯಾಣ ಮಂದಿರ ಅಥವಾ ಸಾಂಸ್ಕೃತಿಕ ಕಲಾಭವನವನ್ನಾಗಿ ಅಭಿವೃದ್ದಿ ಮಾಡಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಅಂದಿನ ಪ್ರಬಾರಿ ತಹಸೀಲ್ದಾರ್ ವರಪ್ರಸಾದ್ ಹಾಗೂ ಮುಜರಾಯಿ ಇಲಾಖೆ ಅಧಿಕಾರಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಲಾಭವನ ನಿರ್ಮಾಣಕ್ಕೆ ಅಂತಿಮವಾಗಿ ಒಪ್ಪಿಗೆ ಸೂಚಿಸುವ ಮೂಲಕ ಈ ಕಟ್ಟಡದ ನವೀಕರಣಕ್ಕೆ ಲಕ್ಷಾಂತರ ರು.ಗಳ ಯೋಜನೆ ರೂಪಿಸುವ ಮೂಲಕ ನಿರ್ಮಿತಿ ಕೇಂದ್ರಕ್ಕೆ ಅಭಿವೃದ್ದಿ ಕಾಮಾಗಾರಿಯ ಗುತ್ತಿಗೆಯನ್ನು ನೀಡಿದೆ.
ಆದರೆ ಕಳೆದ ಎರಡೂವರೆ ವರ್ಷಗಳ ಹಿಂದೆ ಪ್ರಾರಂಭವಾದ ನವೀಕರಣ ಕಾಮಾಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಹಿಂದಿನ ವರ್ಷವೇ ನವಂಬರ್ ತಿಂಗಳ ಕನ್ನಡ ರಾಜ್ಯೋತ್ಸವ ಆಚರಣೆಗೆ ಬಳಕೆಯಾಗಬೇಕಿತ್ತು. ಶಾಸಕ ಕೆ.ಎಂ.ಶಿವಲಿಂಗೇಗೌಡರು ಮನಸ್ಸು ಮಾಡಿದರೆ ಮುಂದಿನ ಕನ್ನಡ ರಾಜ್ಯೋತ್ಸವ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಈ ಕಲಾಮಂದಿರದಲ್ಲಿ ನಡೆಸಬಹುದಾಗಿದೆ.
ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಆಮೇ ವೇಗದಲ್ಲಿ ಸಾಗುತ್ತಿರುವ ಅಭಿವೃದ್ದಿ ಕಾಮಾಗಾರಿಗಳನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ನಿರ್ಮಿತಿ ಕೇಂದ್ರದ ಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಆದೇಶ ನೀಡುವ ಮೂಲಕ ಸುಂದರ ಕಲಾಭವನವನ್ನು ಸಾರ್ವಜನಿಕರ ಸದುಪಯೋಗಕ್ಕೆ ಸಿದ್ದಗೊಳಿಸಲು ಸಹಕರಿಸಬೇಕೆಂದು ಆಗ್ರಹಿಸಿದ್ದಾರೆ. ತಪ್ಪಿದಲ್ಲಿ ಸಾರ್ವಜನಿಕರ ಪರವಾಗಿ ಕನ್ನಡ ಪರಸಂಘಟನೆಗಳು ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಬರುವ ನವೆಂಬರ್ನಲ್ಲಿ ಕಲಾಭವನ ಉದ್ಘಾಟನೆ
ಕಳೆದ ನವಂಬರ್ ತಿಂಗಳಲ್ಲಿಯೇ ಕಲಾಭವನದ ಉದ್ಘಾಟನೆ ನೆರವೇರಬೇಕಿತ್ತು. ಕಾರಣಾಂತರ ನವೀಕರಣದ ಕಾಮಾಗಾರಿಗಳು ಕುಂಠಿತವಾಗಿ ನಿಧಾನವಾಗಿದೆ ಎಂಬುವುದನ್ನು ಒಪ್ಪಿಕೂಂಡ ಅವರು ಯಾವುದೇ ಕಾರಣಕ್ಕೂ ಈ ವರ್ಷದ ನವೆಂಬರ್ ತಿಂಗಳ ಒಳಗೆ ಕಲಾಭವನ ಉದ್ಘಾಟನೆ ಕಾರ್ಯ ನೆರವೇರಲಿದ್ದು, ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಆಚರಣೆಗಾಗಿ ಸುಂದರ ಕಲಾಭವನ ಸಿದ್ದಗೊಳ್ಳಿಸುವ ವಿಶ್ವಾಸವನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ವ್ಯಕ್ತಪಡಿಸಿದರು.