ಚೌಡೇನಹಳ್ಳಿ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ರಾಜಗೋಪುರ ಉದ್ಘಾಟನೆ
ಚನ್ನರಾಯಪಟ್ಟಣ : ತಾಲೂಕಿನ ಚೌಡೇನಹಳ್ಳಿ ಗ್ರಾಮದ ಬಳಿಯಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ರಾಜಗೋಪುರ ಹಾಗೂ ಸೌಮ್ಯ ನಾಯಕಿ ಅಮ್ಮನವರ ನೂತನ ಆಲಯದ ಉದ್ಘಾಟನಾ ಸಮಾರಂಭ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿ ಹಾಗೂ ವಿಧಿ ವಿಧಾನ ಸಂಪ್ರದಾಯದಲ್ಲಿ ಶುಕ್ರವಾರ ನೆರವೇರಿತು.
24ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಾಜಗೋಪುರದ ಹಾಗೂ ಅಮ್ಮನವರ ಆಲಯದ ಉದ್ಘಾಟನೆ ಅಂಗವಾಗಿ ಕಳೆದ ಎರಡು ದಿನಗಳಿಂದ ದೇವಾಲಯದ ಆವರಣದಲ್ಲಿ ಹಲವು ಪೂಜಾ ವಿಧಿ ವಿಧಾನಗಳು ಜರುಗಿದ್ದು, ಗುರುವಾರ ರಾತ್ರಿ ಪೂರ್ಣ ಹೋಮ ಹಾಗೂ ಹಲವು ಪೂಜೆಗಳು ಜರುಗಿದವು.
ಶುಕ್ರವಾರ ಮುಂಜಾನೆಯಿಂದಲೇ ಚನ್ನಕೇಶವ ಸ್ವಾಮಿಗೆ ಹಲವು ಪೂಜೆಗಳು ಜರುಗಿದ ನಂತರ ದೇವಾಲಯದ ಆವರಣದಲ್ಲಿ ಹೋಮ, ಪೂರ್ಣಾವತಿ ಹಾಗೂ ಕುಂಭಾಭಿಷೇಕ, ರಾಜಗೋಪುರಕ್ಕೆ ಕಳಸ ಪ್ರತಿಷ್ಠಾಪನೆ ನಡೆಯಿತು.
ಶಾಸಕ ಸಿ.ಎನ್ ಬಾಲಕೃಷ್ಣ, ರಾಜ್ಯ ಮಾರುಕಟ್ಟೆ ಮಹಾಮಂಡಲ ನಿರ್ದೇಶಕ ಮಂಜುನಾಥ್, ಕರಡೆ ಶಿವಲಿಂಗಪ್ಪ, ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ವಿಜಯಕುಮಾರ್, ಮೈಸೂರು ಮಹಾರಾಜ ಸಂಸ್ಕೃತ ಶಾಲೆಯ ಪ್ರಾಧ್ಯಾಪಕ ವೆಂಕಟೇಶ್‌ಮೂರ್ತಿ, ಆಗಮಿಕರಾದ ಮೋಹನ್‌ಕುಮಾರ್, ಲಕ್ಷ್ಮಿಕಾಂತ್, ಬಾಲಕುಮಾರ್ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.