ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯುಪಿಎ ದುರಾಡಳಿತ, ಭ್ರಷ್ಟಾಚಾರದಿಂದ ಚುನಾವಣೆಯಲ್ಲಿ ಬಿಜೆಪಿಗೆ ಗೆಲವು

Srinivasa Murthy VN
Updated On : 30 May 2014, 10:41 am

ಕ.ಪ್ರ. ವಾರ್ತೆ ಹಾಸನ ಮೇ 30
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾವನಾತ್ಮಕವಾಗಿ ಗೆಲ್ಲಲು ಮೊದಲ ಕಾರಣ ಯುಪಿಎಯ ಹಗರಣ ಹಾಗೂ ದುರಾಡಳಿತ, ಮನಮೋಹನ ಸಿಂಗರನ್ನು  ನಿರ್ಜೀವ ಗೊಂಬೆಯಂತೆ ಮಾಡಿಕೊಂಡಿದ್ದೇ ಮುಖ್ಯ ಕಾರಣವಾಯಿತು ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಹೇಳಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಅಧ್ಯಯನ ವೃತ್ತದ ಆಶ್ರಯದಲ್ಲಿ ನಡೆದ ಚುನಾವಣಾ ವಿಮರ್ಶೆ ಕುರಿತು ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಧರ್ಮದ ದೃವೀಕರಣ, ಈ ಹಿಂದಿನ ಗುಜರಾತ್ ಹತ್ಯಾಕಾಂಡದಿಂದ ಉದ್ಭವಿಸಿದ ಸರ್ವಾಧಿಕಾರಿ ನಾಯಕತ್ವದ ಮೇಲಿನ ಭರವಸೆ ಈ ಪ್ರಮಾಣದ ಗೆಲವು ತಂದು ಕೊಟ್ಟಿದೆ ಎಂದರು.
ಪತ್ರಕರ್ತ ಎಚ್.ಜಿ. ಸತೀಶ್ ಮಾತನಾಡಿ,  16ನೇ ಲೋಕಸಭೆಯ ಮಹಾಚುನಾವಣೆ ಭಾರತದ ಚುನಾವಣಾ ಇತಿಹಾಸದಲ್ಲೇ ನಡೆದ ಅತ್ಯಂತ ವಿಶಿಷ್ಟ್ ಹಾಗೂ ವ್ಯಕ್ತಿ ಕೇಂದ್ರಿತ ಅಧ್ಯಕ್ಷೀಯ ಮಾದರಿಯ ಅಪಾಯಕಾರಿ ಚುನಾವಣೆ. ಈ ಚುನಾವಣೆಯಲ್ಲಿ ಬಿಜೆಪಿಗಿಂತ ಮಾಧ್ಯಮಗಳು ಹೆಚ್ಚು ವಿಜಯ ಸಾಧಿಸಿವೆ ಹಾಗಾಗಿ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಡಾ.ಸಾಯಿನಾಥ್ ಹೇಳಿದಂತೆ ಈ ಚುನಾವಣೆಯಲ್ಲಿ ಮೀಡಿಯಾ ಸುನಾಮಿ ಸೃಷ್ಟಿಸಿತು ಎಂದು ವಿಶ್ಲೇಷಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಲಂಗುಲಗಾಮಿಲ್ಲದ ಮಹಾನ್ ಭ್ರಷ್ಟ ಆಡಳಿತ ಹಾಗೂ ಮೂರನೇ ರಂಗದ ನಿಷ್ಕ್ರಿಯತೆ ಹಾಗೂ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಹಿಂದೂ ಮತಗಳ ದೃವೀಕರಣ ಬಿಜೆಪಿಯನ್ನು ಅತ್ಯಧಿಕ ಸ್ಥಾನಗಳಿಂದ ಗೆಲ್ಲಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದವು ಜೊತೆಗೆ ಯುವಜನತೆ, ಮಾಧ್ಯಮ ಹಾಗೂ ಬಿಜೆಪಿ ಮಾತೃ ಸಂಸ್ಥೆ ನೇರವಾಗಿ ಚುನಾವಣಾ ರಂಗಕ್ಕೆ ಇಳಿದು ಸಹಕಾರಿಯಾದವು ಎಂದು ಹೇಳಿದರು.
ಈ ಚುನಾವಣೆಯಲ್ಲಿ ಮಾಧ್ಯಮಗಳು ಜನರನ್ನು ಏಕ ವ್ಯಕ್ತಿ ಕಡೆ ಸಮ್ಮೋಹಿತಗೊಳಿಸಿದವು ಈ ಸಮ್ಮೋಹನಗೊಳಿಸುವ ಕೆಲಸದಲ್ಲಿ ಮಾಧ್ಯಮಗಳು ನೀತಿಯನ್ನು ಮೀರಿ ಮೊದಲ ಭ್ರಷ್ಟಾಚಾರಿಗಳಾದವು ಎಂದು ತಿಳಿಸಿದರು.
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಮಾಧ್ಯಮಗಳು ಅಧಿಕಾರಕ್ಕೆ ತರುವಲ್ಲಿ ವಹಿಸಿದ ಪಾತ್ರವನ್ನು ಮನಗಂಡ ಬಿಜೆಪಿ ಮಾಧ್ಯಮಗಳನ್ನು ತನ್ನ ಪರವಾಗಿ ಬಳಸಿಕೊಳ್ಳುವಲ್ಲಿ ಯೋಜನಾಬದ್ಧ ತಂತ್ರಗಾರಿಕೆ ಸಾಧಿಸಿದವು. ಚುನಾವಣಾರಂಭದಲ್ಲಿ ಭಾರತದ ಭರವಸೆಯ ನಾಯಕನ ಸ್ಥಾನದಲ್ಲಿ ಕೇಜ್ರಿವಾಲ್ ರಾರಾಜಿಸುತ್ತಿದ್ದರೆ ನಂತರದ ದಿನಗಳಲ್ಲಿ ಮೋದಿ ರಾರಾಜಿಸಿದರು ಮಾತ್ರವಲ್ಲ ಭಾರತದ ಯುವಜನರ ಬಾಳಿನ ಭರವಸೆಯಾಗಿ ಹೀರೊ ಆಗಿದ್ದ ಕೇಜ್ರಿವಾಲ್ ತಮ್ಮ ಮೊಂಡುತನದಿಂದ ಬಾಲಿಷ ರಾಜಕೀಯ ನಡೆ ನಡೆಸಿದ್ದರಿಂದ ಭ್ರಮನಿರಸಗೊಂಡ ಯುವಜನ, ಮಧ್ಯಮ ವರ್ಗ ಸಹಜವಾಗಿ ಮೋದಿ ಕಡೆ ವಾಲಿಸುವಲ್ಲಿ ಮಾಧ್ಯಮಗಳನ್ನು ನರೇಂದ್ರಮೋದಿ ಬಳಸಿಕೊಂಡರು ಎಂದು ಹೇಳಿದರು.
ವಿಜ್ಞಾನ ಲೇಖಕ ಕೆ.ಎಸ್.ರವಿಕುಮಾರ್ ಮಾತನಾಡಿ, ಉತ್ತರ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಗೋಸುಂಬೆತನ, ಜಾತ್ಯತೀತ ನಿಲವನ್ನು ಗಟ್ಟಿಗೊಳಿಸದ ಕಾರಣ ಬಿಜೆಪಿ ಕಡೆ ದೃವೀಕರಿಸುವಲ್ಲಿ ಮೋದಿ ಅಲೆ ಸೃಷ್ಟಿಸಿತು ಆದರೆ ಪ.ಬಂಗಾಳ, ತಮಿಳುನಾಡು, ಒರಿಸ್ಸಾ ಹಾಗೂ ಕೇರಳಗಳಲ್ಲಿ ಮೋದಿ ಅಲೆ ನಡೆಯಲಿಲ್ಲ ಎಂದು ವಿವರಿಸಿದ ಅವರು ಭಾರತದ ಚುನಾವಣೆ ಯಾವಾಗಲೂ ಬರೀ ಭಾವನಾತ್ಮಕ ಭಾಷಣದ ನೆಲೆಗಟ್ಟಿನಲ್ಲೇ ನಡೆಯುವುದು ಸರಿಯಲ್ಲ ಎಂದು ವಿಷಾದಿಸಿದರು.
ಬಿಜಿವಿಎಸ್‌ನ ಅಹಮದ್ ಪ್ರತಿಕ್ರಿಯಿಸಿ ಈ ಬಾರಿಯ ಚುನಾವಣೆಯಲ್ಲಿ ಅಂಕೆ-ಸಂಖ್ಯೆಗಳ ರೂಪದಲ್ಲಿ ಬಿಜೆಪಿಗೆ ಬೃಹತ್ ಮುನ್ನಡೆ ಲಭಿಸಿದೆ ತಾವು ನಿಲ್ಲಿಸಿದ 427 ಕ್ಷೇತ್ರಗಳಲ್ಲಿ 282 ಕ್ಷೇತ್ರಗಳಲ್ಲಿ ಅಂದರೆ ಶೇ.66 ಕ್ಷೇತ್ರಗಳಲ್ಲಿ ಜಯಗಳಿಸಿದೆ ಆದರೆ, ಪಡೆದ ಒಟ್ಟು ಮತ ಶೇ. 31ಮಾತ್ರ . ಇದು ವಾಜಪೇಯಿಯವರು ಗಳಿಸಿದ ಶೇಖಡಾವಾರು ಮತಗಳಿಗಿಂತ ಕಡಿಮೆ. ಇದೊಂದು ವಿಪರ್ಯಾಸ ಎರಡನೆಯದಾಗಿ ಮತಗಳಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ನಂತರದ ಸ್ಥಾನ ಬಿಎಸ್‌ಪಿಯದು ಅದು ಶೇ. 4.1 ಮತಗಳಿಸಿ ಮೂರನೆ ಸ್ಥಾನದಲ್ಲಿದೆ.
ಡಾ.ಜಯಚಂದ್ರಗುಪ್ತ ಮಾತನಾಡಿ ಪ್ರಾದೇಶಿಕ ಪಕ್ಷಗಳ ಆಷಾಡಭೂತಿತನ, ವಂಶಪಾರಂಪರ್ಯ ಆಡಳಿತ, ಭ್ರಷ್ಟಾಚಾರ, ಸ್ವಜನಪಕ್ಷಪಾತಗಳಿಂದ ಬೇಸತ್ತ ಜನ ಗುಜರಾತನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯುತ್ತಿದ್ದಾರೆ ಎಂದು ತಿಳಿದೊ ಅಥವಾ ಭ್ರಮೆಗೊಳಪಟ್ಟೋ ಅಥವಾ ಅಂದುಕೊಂಡೂ ಯುವಜನತೆ ಮತ್ತು ಜನ ನರೇಂದ್ರಮೋದಿಯನ್ನು ಪ್ರಧಾನಿ ಸ್ಥಾನದಲ್ಲಿ ನೋಡಲು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಎಲ್ಲ ಪಕ್ಷಗಳನ್ನು  ತಿರಸ್ಕರಿಸಿದ್ದಾರೆ ಎಂದರು.  ಲೇಖಕಿ ರೂಪ ಹಾಸನ ಮಾತನಾಡಿ, ಗುಜರಾತಿನ ಕಾರ್ಪೊರೇಟ್ ಮಾದರಿಯ ಅಭಿವೃದ್ಧಿ ಹೊಸ ಮತದಾರರಾದ 15 ಕೋಟಿ ಯುವಜನರನ್ನು ಮೋದಿಯವರ ಕಡೆ ಸೆಳೆಯಿತು ಹಾಗಾಗಿ ಇಡೀ ಚುನಾವಣೆ ಮೋದಿ ಮತ್ತು ರಾಹುಲ್ ಗಾಂಧಿ ನಡುವಣಾ ಚುನಾವಣೆ ಎಂದು ಪರೋಕ್ಷವಾಗಿ ಅಧ್ಯಕ್ಷ ಮಾದರಿಯ ಚುನಾವಣಾ ರೀತಿ ಮಾಧ್ಯಮಗಳು ಬಿಂಬಿಸಿದವು. ಸಹಜವಾಗಿ ವ್ಯಕ್ತಿತ್ವದಲ್ಲಿ ಪ್ರಭಾವಶಾಲಿಯಾಗಿದ್ದ ಮೋದಿಯ ಯುವಜನರು ಮತಚಲಾಯಿಸಿದರು ಮಾತ್ರವಲ್ಲ ಸಾಮೂಹಿಕ ಮಾಧ್ಯಮಗಳ ಮೂಲಕವೂ ಪ್ರಚಾರ ಮಾಡಿದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಜನಾರ್ದನ ಮಾತನಾಡಿ,  ಚುನಾವಣೆಗೆ ಮೊದಲು ಗುಜರಾತಿನ ಅಭಿವೃದ್ಧಿ, ಕಾಂಗ್ರೆಸಿನ ದುರಾಡಳಿತ, ಬೆಲೆ ಏರಿಕೆಯಿಂದ ಬೇಸತ್ತ ಜನ ಹಿಂದೆಂದೂ ಯಾರ ಮೇಲೂ ಇಡದ ನಂಬಿಕೆಯನ್ನು ನರೇಂದ್ರ ಮೋದಿ ಮೇಲೆ ಕುರುಡಾಗಿ ನಂಬಿ ಗೆಲ್ಲಿಸಿದ್ದಾರೆ ಮುಂದಿನ ನಡಾವಳಿ ಬಗ್ಗೆ ಕಾದು ನೋಡಬೇಕು ಎಂದರು.
ಸಾಹಿತಿ ಜ.ಹೊ.ನಾ, ಉಪನ್ಯಾಸಕ ಡಾ.ಯತೀಶ್ವರ್, ವಕೀಲ ಯೋಗೇಶ್, ಪ್ರಕಾಶ್, ಶಿವಣ್ಣ, ಕೃಷ್ಣೇಗೌಡ, ಜಯದೇವಪ್ಪ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement