ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆಯಲ್ಲಿ ಬಾಳೆಗಿಡಗಳನ್ನು ನೆಟ್ಟು ಗ್ರಾಮಸ್ಥರ ಪ್ರತಿಭಟನೆ

Srinivasa Murthy VN
Updated On : 30 May 2014, 10:41 am

ಅರಸೀಕೆರೆ: ಪಟ್ಟಣದಿಂದ ಹಾಸನಕ್ಕೆ ಹೋಗುವ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು ಶೀಘ್ರ ಕಾಮಗಾರಿ ಪ್ರಾರಂಭಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಬೋರನಕೊಪ್ಪಲು ಸಮೀಪ ರಸ್ತೆ ತಡೆದು ರಸ್ತೆಯಲ್ಲಿ ಬಾಳೆಗಿಡಗಳನ್ನು ನೆಟ್ಟು ಧರಣಿ ನಡೆಸಿದರು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘಧ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದರಿಂದ ಬೋರನಕೊಪ್ಪಲಿನಿಂದ ಯಳವಾರೆಯವರೆಗೆ ಮತ್ತು ಹಾರನಹಳ್ಳಿಯಿಂದ ಕೋಡಿಮಠದವರೆಗೆ 3 ಕಿ.ಮೀ. ಉದ್ದದ ರಸ್ತೆ ಮಳೆಗಾಲದಲ್ಲಿ ಕೆಸರುಗದ್ದೆಯಾಗಿ ಮಾರ್ಪಿಟ್ಟಿರುವ ಈ ರಸ್ತೆ, ಬೇಸಿಗೆ ಕಾಲದಲ್ಲಿ ಧೂಳಿನಿಂದಾಗಿ ರಸ್ತೆಯ ಅಕ್ಕಪಕ್ಕದ ಗ್ರಾಮಸ್ಥರು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ.
ರಸ್ತೆಯಲ್ಲಿ ಗುಂಡಿ ಗೊಟರುಗಳಿಂದ ಅಪಘಾತಗಳು ಸಂಭವಿಸಿ ಅನೇಕ ಮಂದಿ ಗಾಯಗೊಂಡು ಅನೇಕರು ಮರಣ ಹೊಂದಿದರೂ ಕಾಮಗಾರಿ ಆರಂಭಿಸುವತ್ತ ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎಂದು ಆರೋಪಿಸಿದರು.
ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯಲ್ಲಿ ದಿನವೂ ಸಾವಿರಾರು ವಾಹನಗಳು ಓಡಾಡುತ್ತಿದ್ದು ಈ ಸಂದರ್ಭದಲ್ಲಿ ಏಳುವ ಭಾರಿ ಧೂಳಿನಿಂದ ಅಕ್ಕಪಕ್ಕದ ತೆಂಗಿನ ತೋಟ ಹಾಗೂ ಬೆಳೆಗಳಿಗೂ ಹಾನಿಯುಂಟಾಗಿದ್ದು ಕೂಡಲೇ ರಸ್ತೆ ಕಾಮಗಾರಿ ಆರಂಭಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟ ಕಾಲ ನಿರಶನ ಆರಂಭಿಸಲಾಗುವುದೆಂದು ಎಚ್ಚರಿಸಿದರು.
ಧರಣಿಯ ಸುದ್ದಿ ತಿಳಿದು ದೂರವಾಣಿ ಮೂಲಕ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶೇಖರಪ್ಪ ಹಾಗೂ ಗುತ್ತಿಗೆದಾರ ಶಮೀವುಲ್ಲಾ ಪ್ರತಿಭಟನಾಕಾರರಿಗೆ ಮನವಿ ಮಾಡಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ಸ್ಥಗಿತಗೊಂಡಿದ್ದು ಇಂದಿನಿಂದಲೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದ ನಂತರ ಧರಣಿಯನ್ನು ಹಿಂಪಡೆಯಲಾಯಿತು.
ಧರಣಿಯಲ್ಲಿ ತಾಲೂಕು ರೈತ ಸಂಘದ ಗೌರವಾಧ್ಯಕ್ಷ ಜವನಹಳ್ಳಿ ನಿಂಗಪ್ಪ, ತಾಲೂಕು ಮಹಿಳಾ ಅಧ್ಯಕ್ಷೆ ಹಾರನಹಳ್ಳಿ ಲಕ್ಕಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಕರೀಂ ಸಾಬ್, ಮಾಜಿ ಉಪಾಧ್ಯಕ್ಷ ಓಂಕಾರಮೂರ್ತಿ, ಬೋರನಕೊಪ್ಪಲು ಚಂದ್ರು, ಶಿವಣ್ಣ, ಯಳವಾರೆ ನಾಗರಾಜು, ಇನ್ನಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement