ಶಾಲೆ ಪರಿಸರ ಮಕ್ಕಳನ್ನು ಆಕರ್ಷಿಸುವಂತಿರಬೇಕು: ಬಿಇಒ ನಟರಾಜ್
ಜಾವಗಲ್: ಶಾಲೆಯ ಭೌತಿಕ ಪರಿಸರವು ಮಕ್ಕಳನ್ನು ಆಕರ್ಷಿಸುವಂತಿರಬೇಕೆಂದು ಅರಸೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಟರಾಜು ಅಭಿಪ್ರಾಯಪಟ್ಟರು.
ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಹೋಬಳಿಯ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿ, ಶಾಲೆಯು ಹೆಚ್ಚು ಆಕರ್ಷಣೀಯ ವಾಗಿರುವಂತೆ ಪರಿಸರಸ್ನೇಹಿ(ಇಕೊ) ಬಣ್ಣವನ್ನು ಶಾಲಾಕಟ್ಟಡಕ್ಕೆ ಬಳಸುವಂತೆ ಹಾಗೂ ನಾಮಫಲಕಗಳನ್ನು ಕಡ್ಡಾಯವಾಗಿ ಹಾಕುವಂತೆ ಕರೆ ನೀಡಿದರು. ಶಾಲೆಯ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ಆಚರಿಸಿ ಎಸ್‌ಡಿಎಂಸಿ, ಜನಪ್ರತಿನಿಧಿಗಳು ಹಾಗೂ ಪೋಷಕರನ್ನು ಆಹ್ವಾನಿಸಬೇಕೆಂದರು.
ಶಾಲೆಯ ಭೌತಿಕ ಸೌಲಭ್ಯಗಳಾದ ಕಟ್ಟಡ, ಕೊಠಡಿಗಳು, ಆಟದ ಮೈದಾನ, ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಸಾಮಾಗ್ರಿಗಳು, ಪೀಠೋಪಕರಣ, ಕಲೆ, ಸಾಹಿತ್ಯ ವಿಜ್ಞಾನ, ಕಥೆ, ಕವನ ಹಾಗೂ ಪಠ್ಯ ಪುಸ್ತಕಗಳ ಸಂಗ್ರಹಣೆ ಮತ್ತು ನಿರ್ವಹಣೆ, ಶೈಕ್ಷಣಿಕ ಸೌಲಭ್ಯಗಳಾದ ದಾಖಲಾತಿಗೆ ಸಿದ್ಧತೆ, ಶಾಲೆಯ ವಾರ್ಷಿಕ ಕಾರ್ಯಸೂಚಿ, ವೇಳಾಪಟ್ಟಿ, ಪಠ್ಯಪುಸ್ತಕ, ಸಮವಸ್ತ್ರಗಳ ವಿತರಣೆ, ಆಡಳಿತಾತ್ಮಕ ವಹಿವಾಟುಗಳ ನಿರ್ವಹಣೆ, ಗುಣಮಟ್ಟದ ಬೋಧನೆ, ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು, ಇಂಗ್ಲೀಷ್ ಬೋಧನೆ, ಹಾಜರಾತಿ ಹೆಚ್ಚಳ ಹಾಗೂ ಎಲ್ಲಾ ಶಿಕ್ಷಕರು ವಾರ್ಷಿಕ ಕ್ರಿಯಾಯೋಜನೆ ತಯಾರಿಸಿ ಅನುಷ್ಠಾನಗೊಳಿಸುವುದು ಹಾಗೂ ಎಲ್ಲ ಸರ್ಕಾರಿ ಶಾಲೆಗಳಲ್ಲೂ ವಾರ್ಷಿಕೋತ್ಸವವನ್ನು ಕಡ್ಡಾಯವಾಗಿ ಆಚರಿಸುವುದು ಮುಂತಾದ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಜಾವಗಲ್ ಸರ್ಕಾರಿ ಪದವಿ ಪೂರ್ವಕಾಲೇಜಿನ ಉಪ ಪ್ರಾಂಶುಪಾಲ ಯೋಗೀಶ್ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಿಕೊಡುವಲ್ಲಿ ಮುಖ್ಯ ಶಿಕ್ಷಕರೊಂದಿಗೆ ಸಹ ಶಿಕ್ಷಕರ ಸಹಕಾರವು ಅಗತ್ಯವೆಂದರು.
ಶಿಕ್ಷಣ ಸಂಯೋಜಕ ಬಿ ಯೋಗೀಶ್ ಮಾತನಾಡಿ, ಶೈಕ್ಷಣಿಕ ಪೂರ್ವಸಿದ್ಧತೆ, ಶಾಲಾ ಪ್ರವೇಶಾತಿ, ಸೇತುಬಂದ ಕಾರ್ಯಕ್ರಮ, ದಾಖಲಾತಿ ಆಂದೋಲನ, ವಿಶ್ವ ಪರಿಸರ ದಿನ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ಸಿಆರ್‌ಪಿಗಳಾದ ವಿಷ್ಣುವರ್ಧನ, ಚಂದ್ರಪ್ಪ, ರಮೇಶ್‌ನಾಯಕ್, ಮಾತನಾಡಿದರು. ಶಿಕ್ಷಣ ಸಂಯೋಜಕರಾದ ರಾಮೇಗೌಡ, ರವಿಕುಮಾರ್, ಸಿಆರ್‌ಪಿ ಶಿವಪ್ರಕಾಶ್ ಇದ್ದರು.