ಶುಚಿತ್ವದಿಂದ ಆರೋಗ್ಯ: ಗ್ರಾ.ಪಂ. ಅಧ್ಯಕ್ಷೆ ಶೋಭಾ
ಅರಸೀಕೆರೆ: ಶುದ್ಧ ಕುಡಿಯುವ ನೀರಿನ ಸೇವನೆ ಮತ್ತು ಉತ್ತಮ ಪರಿಸರ ಕಾಪಾಡಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಜನರು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅರೆಕೆರೆ ಗ್ರಾಪಂ ಅಧ್ಯಕ್ಷೆ ಎ. ಹೆಚ್. ಶೋಭಾ ಹೇಳಿದರು.
ತಾಲೂಕಿನ ಜಾವಗಲ್ ಹೋಬಳಿ ಅರಕೆರೆ ಗ್ರಾಮದಲ್ಲಿ ಪಂಚಾಯಿತ್ ರಾಜ್ ಇಂಜಿನಿಯರಿಂಗ್ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯಿತಿ ಹಾಸನ ಮತ್ತು ಭಾರತೀಯ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯದ ಸಾಮರ್ಥ್ಯಾಭಿವೃಧ್ಧಿ ಚಟುವಟಿಕೆಗಳ ತರಬೇತಿ ಮತ್ತು ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇರುವ ಈ ದಿನಗಳಲ್ಲಿ ನೀರಿನ ಮಿತ ಹಾಗೂ ಸಮರ್ಪಕ ಬಳಕೆ ಮತ್ತು ನೈರ್ಮಲ್ಯದ ಜಾಗೃತಿ ಅವಶ್ಯ. ಇದರಿಂದ ಮುಂದಿನ ದಿನಗಳಲ್ಲಿ ಆಗಬಹುದಾದ ಪರಿಣಾಮಗಳನ್ನು ಎದುರಿಸಬಹುದಾಗಿದೆ ಎಂದರು. ಪಂಚಾಯ್ತಿ ಅಭಿವೃಧ್ಧಿ ಅಧಿಕಾರಿ ಜಿ.ವಿ.ಬಸವರಾಜು, ಸಮುದಾಯದ ಎಲ್ಲಾ ಜನರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಜವಾಬ್ದಾರಿ ನಮ್ಮದು. ಅಂತೆಯೇ ಜನಸಾಮಾನ್ಯರು ಕುಡಿಯುವ ನೀರಿನ ಮಿತ ಬಳಕೆ, ತಮ್ಮ ಮನೆಯ ಅಕ್ಕಪಕ್ಕದ ಪರಿಸರ ನೈರ್ಮಲ್ಯ ಕಾಪಾಡಿಕೊಂಡು ಈ ನಿಟ್ಟಿನಲ್ಲಿ ಕೈಗೊಳ್ಳುವ ಕೆಲಸಗಳಿಗೆ ಸಹಕರಿಸಬೇಕು ಎಂದರು. ಭಾರತೀಯ ಸೇವಾ ಸಂಸ್ಥೆ ಕಾರ್ಯದರ್ಶಿ ಎಸ್. ಆರ್. ಕಾಳೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಕರುಣಾಕರ ಮತ್ತು ಲಿಂಗರಾಜು ವಿಚಾರ ಮಂಡಿಸಿದರು. ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇರುವ ಈ ದಿನಗಳಲ್ಲಿ ನೀರಿನ ಮಿತ ಹಾಗೂ ಸಮರ್ಪಕ ಬಳಕೆ ಮತ್ತು ನೈರ್ಮಲ್ಯದ ಜಾಗೃತಿ ಅವಶ್ಯ. ಇದರಿಂದ ಮುಂದಿನ ದಿನಗಳಲ್ಲಿ ಆಗಬಹುದಾದ ಪರಿಣಾಮಗಳನ್ನು ಎದುರಿಸಬಹುದಾಗಿದೆ.
-ಎ. ಎಚ್. ಶೋಭಾ