ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ಪೆರೇರಾ

Srinivasa Murthy VN
Updated On : 30 May 2014, 10:43 am

ಹೊಳೆನರಸೀಪುರ: ಕಲಿಕೆ ನಿರಂತರವಾಗಿ ಸಾಗಬೇಕು. ತ್ಯಾಗ-ಪ್ರಾಮಾಣಿಕತೆ ಮತ್ತು ಸತತ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹಳ್ಳಿಮೈಸೂರು ಅನುಗ್ರಹ ಪ್ರೌಢಶಾಲೆ ಅಧೀಕ್ಷಕ ಹಾಗೂ ಅಂಕಣಕಾರ ಡ್ಯಾನಿ ಪೆರೇರಾ ಹೇಳಿದರು. ತಾಲೂಕಿನ ದೊಡ್ಡಕಾಡನೂರಿನ ಜೆಎಸ್‌ಎಸ್ ಡಿ.ಇಡಿ ಕಾಲೇಜಿನಲ್ಲಿ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಲಿತ ಎಲ್ಲ ವಿದ್ಯೆಗಳು ತಕ್ಷಣಕ್ಕೆ ಪ್ರಯೋಜನವಾಗದಿದ್ದರೂ, ಜೀವನದ ಮುಂದಿನ ದಿನಗಳಲ್ಲಿ ಪ್ರಯೋಜನಕ್ಕೆ ಬರುತ್ತದೆ. ಅಂತಹ ಸಂದರ್ಭ ಪ್ರತಿಯೊಬ್ಬರ ಜೀವನದಲ್ಲೂ ಇರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಕಲೇಶಪುರ ಜೆಎಸ್‌ಎಸ್ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಎನ್. ಪಿ. ಸತೀಶ್, ಶಿಕ್ಷಣ ಎನ್ನುವುದು ನಿಂತ ನೀರಲ್ಲ. ಅದು ಸದಾ ಬದಲಾವಣೆ ಹೊಂದುತ್ತಿರುತ್ತದೆ. ಬದಲಾದ ಶಿಕ್ಷಣ ವ್ಯವಸ್ಥೆಗೆ ತಕ್ಕಂತೆ ಶಿಕ್ಷಕ ಮತ್ತು ವಿದ್ಯಾರ್ಥಿ ಬದಲಾಗಬೇಕು. ನಿರಂತರ ಅಧ್ಯಯನಶೀಲರಾಗುವುದರೊಂದಿಗೆ ನಿಮ್ಮ ನಿಮ್ಮ ಜ್ಞಾನಪ್ರಭೆಯನ್ನು ವಿಸ್ತರಿಸಿಕೊಳ್ಳಬೇಕು ಎಂದರು.ಸಂಸ್ಥೆಯ ಪ್ರಾಂಶುಪಾಲ ಎಸ್.ಎನ್. ನಾಗೇಂದ್ರಪ್ರಸಾದ್ ಇದ್ದರು. ಪ್ರಶಿಕ್ಷಣಾರ್ಥಿ ಸ್ವಾತಿ ಪ್ರಾರ್ಥಿಸಿದರು. ಶೀಲಾ ಸ್ವಾಗತಿಸಿದರು, ಸುಚಿತ್ರ ವಂದಿಸಿ, ತೇಜಸ್ವಿನಿ ನಿರೂಪಿಸಿದರು.

ಪಿಜಿಸಿಇಟಿ: ಅರ್ಪಿತಾಗೆ 12ನೇ ರ್ಯಾಂಕ್
ಹೊಳೆನರಸೀಪುರ: ಪಟ್ಟಣದ ನಿವೃತ್ತ ಉಪ-ತಹಸೀಲ್ದಾರ್ ಜೆ.ಎನ್.ರಾಮಕೃಷ್ಣೇಗೌಡ ಅವರ ಪುತ್ರಿ ಆರ್.ಆರ್ಪಿತಾ ಇತ್ತೀಚೆಗೆ ನಡೆದ ಪಿಜಿಸಿಇಟಿಯಲ್ಲಿ ವೈದ್ಯಕೀಯ ವಿಭಾಗದಲ್ಲಿ 12ನೇ ರ್ಯಾಂಕ್ ಗಳಿಸಿ ಚಂಡೀಗಡದಲ್ಲಿನ ಸೆಂಟ್ರಲ್ ಕಾಲೇಜಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿರುವ ಆರ್ಪಿತ ಪಿಜಿಸಿಇಟಿಯಲ್ಲಿ ಸಾಮಾನ್ಯ ವರ್ಗದಲ್ಲಿ 57ನೇ ರ್ಯಾಂಕ್ ಗಳಿಸಿದ್ದು, ಒಬಿಸಿಯಲ್ಲಿ 12ನೇ ರ್ಯಾಂಕ್ ಗಳಿಸಿದ್ದಾರೆ. ಅರ್ಪಿತ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಪಟ್ಟಣದ ಶ್ರೀವಾಸವಿ ವಿದ್ಯಾಸಂಸ್ಥೆಯಲ್ಲಿ, ನಂತರ ಹೈಸ್ಕೂಲ್ ಹಾಗೂ ಪಿಯುಸಿಯನ್ನು  ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.

ಕೈಮಗ್ಗ, ಜವಳಿ ಇಲಾಖೆ ಯೋಜನೆಗಳಿಗೆ ಅರ್ಜಿ ಆಹ್ವಾನ
ಹಾಸನ: ಕೈಮಗ್ಗ ಮತ್ತು ಜವಳಿ ಇಲಾಖೆಯ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೂತನ ಜವಳಿ ನೀತಿಯಡಿ ಐ.ಎಸ್.ಎಂ.ಒ (ಕೈಗಾರಿಕಾ ಹೊಲಿಗೆ ಯಂತ್ರ) ತರಬೇತಿಯನ್ನು  45 ದಿನಗಳವರೆಗೆ ನೀಡಲಾಗುವುದು. ವಿದ್ಯುತ್ ಮಗ್ಗ 2 ತಿಂಗಳ ತರಬೇತಿ ಹಾಗೂ 2 ತಿಂಗಳ ಕೈಮಗ್ಗ ತರಬೇತಿ ನೀಡಲಾಗುವುದು. 5ನೇ ತರಗತಿ ಉತ್ತೀರ್ಣರಾಗಿದ್ದು, 18 ರಿಂದ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ. 08172-240627ಯನ್ನು ಸಂಪರ್ಕಿಸಬೇಕೆಂದು ಹಾಸನ ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.

ಕಲಾವಿದರಿಂದ ಅರ್ಜಿ ಆಹ್ವಾನ
ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಘ ಸಂಸ್ಥೆಗಳಿಗೆ ನಾನಾ ಕಲಾ ಪ್ರಕಾರಗಳ ಹಾಗೂ ಕಲಾ ತಂಡಗಳನ್ನು ಪ್ರಾಯೋಜಿಸುವ ಯೋಜನೆ ಇದ್ದು, ಈ ಯೋಜನೆಯನ್ನು ಪರಿಣಾಮಕಾರಿಯಾಗಿ ನ್ಯಾಯ ಒದಗಿಸಿಕೊಡಲು ಜಿಲ್ಲೆಯಲ್ಲಿರುವ ತಂಡಗಳನ್ನು ನೋಂದಣಿ ಮಾಡಿಕೊಂಡು ವಿವರಗಳ ಪಟ್ಟಿಯನ್ನು ನಿರ್ದೇಶನಾಯದಲ್ಲಿ ಗಣಕೀಕರಣ ಮಾಡುವ ಸಲುವಾಗಿ ಜಿಲ್ಲೆಯ ಕಲಾವಿದರಿಂದ ಅರ್ಜಿ ಕರೆದಿದ್ದು, ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಪಡೆದು ಸಲ್ಲಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.

ಕ್ಯಾನ್ಸರ್ ತಪಾಸಣೆ ಶಿಬಿರ
ಹಾಸನ: ತಾಲೂಕಿನ ಕಂದಲಿ ವಿದ್ಯಾಪೀಠದ ಬಿ.ಎಂ. ರಸ್ತೆಯಲ್ಲಿ ಇರುವ  ಹಾಸನ ಕ್ಯಾನ್ಸರ್ ಸೆಂಟರ್‌ನಲ್ಲಿ  ಜೂನ್ 3 ರಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿ ಅಥವಾ ಹೊಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಕ್ಯಾನ್ಸರ್ ಪತ್ತೆಯಾದ ರೋಗಿಗಳಿಗೆ  ಚಿಕಿತ್ಸೆಯನ್ನು  ರಿಯಾಯಿತಿ ದರದಲ್ಲಿ  ನೀಡಲಾಗುವುದು.  ಹೆಚ್ಚಿನ ವಿವರಗಳಿಗಾಗಿ  ಮೊ.ಸಂ. 7204059259 ಸಂಪರ್ಕಿಸಬಹುದು.

ಮಕ್ಕಳ ಸಾಂಸ್ಕೃತಿಕ ಸಂಜೆ
ಹಾಸನ: ಮಕ್ಕೆಳ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಮೇ 31ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸಂಜೆ 4ಕ್ಕೆ ನಡೆಯಲಿದೆ. ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಶ್ರೀಬಸವೇಶ್ವರ ಜಯಂತಿ ಆಚರಣೆ ಅಂಗವಾಗಿ ಮಕ್ಕಳ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅರಕಲಗೂಡು ತಾಲೂಕಿನ ಶ್ರೀ ಕ್ಷೇತ್ರ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಭಾಗವಹಿಸಲಿದ್ದಾರೆ. ಬಿರೂರಿನ ಅಕ್ಕಮಹಾದೇವಿ ಮಹಿಳಾ ಸಮಾಜದ ವತಿಯಿಂದ ವಚನ ಗಾಯನ ಕಾರ್ಯಕ್ರಮ ನಡೆಸಲಿದ್ದಾರೆ.

ಬೀದಿ ನಾಯಿಗಳ ಕಾಟ ಜೋರು...
ಆಲೂರು: ಜಿಲ್ಲೆಯಾದ್ಯಂತ ನಾಯಿ ಕಡಿತದ ಸುದ್ದಿಗಳು ಬರುತ್ತಿವೆ. ಆಲೂರು ಪಟ್ಟಣವೂ ಇದರಿಂದೇನು ಹೊರತಾಗಿಲ್ಲ. ಈಗ್ಗೆ ಕೆಲ ದಿನಗಳ ಹಿಂದೆ ತಾಲೂಕಿನ ಹಳೇ ಆಲೂರಿನಲ್ಲಿ ವೃಧ್ಧೆಯೊಬ್ಬರಿಗೆ ಐದಾರು ನಾಯಿಗಳು ಕಡಿದು ತೀವ್ರ ಗಾಯಗೊಳಿಸಿದ್ದವು. ಪತ್ರಿಕೆ ಇದನ್ನು ಸಚಿತ್ರವಾಗಿ ವರದಿ ಮಾಡಿತ್ತು. ಪಟ್ಟಣದ ಬೀದಿ ಬೀದಿಗಳಲ್ಲಿ ನಾಯಿಗಳ ಹಾವಳಿ ವಿಪರಿತವಾಗಿದ್ದು ಇದೇ ರೀತಿಯ ಘಟನೆಗಳು ಮರುಕಳಿಸುತ್ತಿದ್ದು, ಸಂಬಂಧಪಟ್ಟವರು ಇನ್ನಷ್ಟು ಜನರಿಗೆ ನಾಯಿ ಕಚ್ಚಿ ಅನಾಹುತಗಳಾದ ಮೇಲೆ ಕ್ರಮ ಕೈಗೊಳ್ಳುತ್ತಾರೋ ಅಥವಾ ಶೀಘ್ರ ಈ ಕುರಿತು ಗಮನ ಹರಿಸಿ ಬೀದಿ ನಾಯಿ ಕಾಟ ತಪ್ಪಿಸುತ್ತಾರೋ ಕಾದು ನೋಡಬೇಕಾಗಿದೆ.

ವಿಶ್ವ ತಂಬಾಕು ರಹಿತ ದಿನಾಚರಣೆ
ಹಾಸನ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎಂ. ಕೃಷ್ಣ ಮತ್ತು ಸರ್ಕಾರಿ ಕಾನೂನು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಮೇ 31 ರಂದು 9.30ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಒಂದು ದಿನದ ಜಿಲ್ಲಾ ಮಟ್ಟದ ಕಾನೂನು ಕಾರ್ಯಗಾರ ವನ್ನು ಹಮ್ಮಿಕೊಳ್ಳಲಾಗಿದೆ. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಕೆ.ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಅಧ್ಯಕ್ಷತೆ ವಹಿಸುವರು. ಪ್ರಧಾನ ನ್ಯಾಯಾಧೀಶ ಸಿ.ಹಾಲಪ್ಪ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಚ್.ಪಿ.ಪುಟ್ಟಸ್ವಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ಯಾಮಲಾದೇವಿ ಮುಖ್ಯ ಅಥಿಗಳಾಗಿ ಭಾಗವಹಿಸುವರು.

ಬಸವ ರತ್ನ, ಬಸವ ಜ್ಯೋತಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಹಾಸನ: ವಿಜಾಪುರ ತಾಲೂಕಿನ ಆಹೇರಿ ಗ್ರಾಮದ ಶ್ರೀ  ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ  ಸಂಸ್ಕೃತಿ ವೇದಿಕೆಯ ದಶಮಾನೋತ್ಸವ  ಹಾಗೂ ರಾಜ್ಯಮಟ್ಟದ ವಚನ ವಿಜಯೋತ್ಸವದ ಅಂಗವಾಗಿ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ನಾಡಿನ ಸಾಧಕರಿಗೆ ಬಸವರತ್ನ ರಾಷ್ಟ್ರಪ್ರಶಸ್ತಿ ಹಾಗೂ ಬಸವಜ್ಯೋತಿ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಮಾಜದ ನಾನಾ ಕ್ಷೇತ್ರಗಳಲ್ಲಿ  ಸಮಾಜ ಸೇವೆ,  ಸಾಹಿತ್ಯ,  ಸಂಗೀತ,  ಶೈಕ್ಷಣಿಕ,  ಶಿಲ್ಪಕಲೆ, ನಾಟಕ,  ರಂಗಭೂಮಿ,  ಜಾನಪದ  ಭರತನಾಟ್ಯ, ಯಕ್ಷಗಾನ, ನೃತ್ಯ, ಚಲನಚಿತ್ರ, ಚಿತ್ರಕಲೆ, ಪತ್ರಿಕೋದ್ಯಮ,  ಪರಿಸರ, ಕೃಷಿ,  ಕ್ರೀಡೆ, ಕಲೆ, ಸಂಶೋಧನೆ, ವಿಜ್ಞಾನ, ತಂತ್ರಜ್ಞಾನ, ಕನ್ನಡ ರಕ್ಷಣೆ, ಆಡಳಿತ, ಯೋಗ, ಇತರೆ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ನಾಡಿನ ಸಾಧಕರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ  ಗೌರವಿಸಲಾಗುವುದು.
ಸೇವಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಜೂ.10 ರೊಳಗಾಗಿ ಅಧ್ಯಕ್ಷರು, ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ, ಆಹೇರಿ ಗ್ರಾಮ -  586112, ತಾ.ಜಿ. ವಿಜಾಪುರ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಲು  ಕೋರಲಾಗಿದೆ.  ಮಾಹಿತಿಗೆ ಮೊ.9008845750 ಸಂಪರ್ಕಿಸಬಹುದು.

ರುದ್ರಪಟ್ಟಣ  ಸಂಗೀತೋತ್ಸವಕ್ಕೆ ಸುಮಾರು  15 ಲಕ್ಷ ವೆಚ್ಚ
ರಾಮನಾಥಪುರ: ಶಾಸ್ತ್ರೀಯ ಸಂಗೀತದ ತವರೂರು ಎನಿಸಿರುವ ರುದ್ರಪಟ್ಟಣದಲ್ಲಿ ಕಳೆದ 13 ವರ್ಷಗಳಿಂದಲೂ ನಿರಂತರವಾಗಿ ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ ವತಿಯಿಂದ ದೇಶ-ವಿದೇಶಗಳಲ್ಲಿ ನೆಲೆಸಿರುವ ಸಂಗೀತ ವಿದ್ವಾಂಸರನ್ನು ಕರೆಸಿ ಸಂಗೀತೋತ್ಸವ ಕಾರ್ಯಕ್ರಮ ನಡೆಯುತ್ತಿದೆ ಎಂದು ಸಮಾಜ ಸೇವಕಿ ಬೆಂಗಳೂರು ಆರ್.ಕೆ. ಗೀತಾಮಣಿ ತಿಳಿಸಿದರು. ಸಂಗೀತೋತ್ಸವದ ಸಮಾರೋಪದಲ್ಲಿ ನಡೆದ ನಗರ ಸಂಕೀರ್ತನೆ ಉತ್ಸವದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕರ್ನಾಟಕದ ಅನೇಕ ಕಲಾವಿದರ ಗಾಯನಕ್ಕೆ ಅದ್ಯತೆ ಕಲ್ಪಿಸಿ ಪ್ರತಿ ವರ್ಷದಂತೆ ಸುಮಾರು 100ಕ್ಕೂ ಹೆಚ್ಚು ಸಂಗೀತ ವಿದ್ವಾಂಸರು ಮತ್ತು ಸ್ಥಳೀಯ ಸಂಗೀತಗಾರರಿಗೂ ಅವಕಾಶ ಮಾಡಿಕೊಡಲಾಗಿತ್ತು. ರುದ್ರಪಟ್ಟಣದಲ್ಲಿ ಪ್ರತಿ ವರ್ಷ 3 ದಿನ ನಡೆಯುವ ಸಂಗೀತೋತ್ಸವಕ್ಕೆ ಸುಮಾರು 15 ರಿಂದ 16 ಲಕ್ಷ ವೆಚ್ಚ  ಬರುತ್ತದೆ. ಇದನ್ನು ರುದ್ರಪಟ್ಟಣದ ಸಂಗೀತ ವಿದ್ವಾನ್ ಅರ್.ಕೆ. ಪದ್ಮನಾಭ್ ಅವರ ನೇತೃತ್ವದಲ್ಲಿ ಅನೇಕ ಸೇವಾ ಪ್ರಾಯೋಜಕರಿಂದ ಸಹಾಯ ಪಡೆದು ಈ ಸಂಗೀತ ಕಾರ್ಯಕ್ರಮವನ್ನು  ನಡೆಸಿಕೊಂಡು ಬರುತ್ತಿದ್ದಾರೆ ಎಂದು  ಗೀತಾಮಣಿ ತಿಳಿಸಿದರು.

ಅರ್ಯ ವೈಶ್ಯ ಮಂಡಳಿ ಸಭೆ ಜೂ.10ಕ್ಕೆ
ಹೊಳೆನರಸೀಪುರ: ಪಟ್ಟಣದ ಅರ್ಯವೈಶ್ಯ ಮಂಡಳಿ ಮಂಡಳಿಯ ಸರ್ವ ಸದಸ್ಯರ ವಿಶೇಷ ಸಭೆ ಜೂನ್.1ರಂದು ನಡೆಯಲಿದ್ದು, ದೇವಾಲಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಕೆ.ಎನ್.ಅರುಣ್ ತಿಳಿಸಿದ್ದಾರೆ. ಸಂಜೆ 4ಗಂಟೆಗೆ ವಾಸವಿ ಮಹಲ್‌ನಲ್ಲಿ ನಡೆಯುವ ಸಭೆಯಲ್ಲಿ ದೇವಾಲಯದ ಗರ್ಭಗುಡಿ ಪುನಃ ನಿರ್ಮಾಣ, ವಾರ್ಷಿಕ ಶ್ರೀವಾಸವಿ ಜಯಂತಿಯನ್ನು ಹೆಚ್ಚು ಆರ್ಥಪೂರ್ಣವಾಗಿ ನಡೆಸುವುದು ಹಾಗೂ ಇನ್ನಿತರೆ ವಿಷಯಗಳನ್ನು ಚರ್ಚಿಸಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಶಾಲೆ ಬಳಿ ಅಪಘಾತ ತಡೆಗೆ ಕ್ರಮಕ್ಕೆ ಆಗ್ರಹ
ಅರಸೀಕೆರೆ : ಪಟ್ಟಣದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ ಸಂತಮೇರಿ ಶಾಲೆ ರಾಷ್ಟ್ರೀಯ ಹೆದ್ದಾರಿ 206ರ ಸಮೀಪದಲ್ಲಿರುವುದರಿಂದ ಶಾಲೆ ಬಿಟ್ಟಾಗ ಸಾವಿರಾರು ವಿದ್ಯಾರ್ಥಿಗಳು ಒಮ್ಮೆಲೆ ಹೊರಬರುವುದರಿಂದ ಅನೇಕ ಬಾರಿ ಅಪಘಾತಗಳು ಸಂಭವಿಸಿದ್ದು ಪುರಸಭಾ ಆಡಳಿತ ಪಕ್ಷಾತೀತವಾಗಿ ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.
ಈ ಶಾಲೆ ಪಟ್ಟಣದ ಹೊರಭಾಗದಲ್ಲಿರುವುದರಿಂದ ಬಹುತೇಕ ಮಕ್ಕಳು ಸೈಕಲ್, ದ್ವಿಚಕ್ರ ವಾಹನ ಹಾಗೂ ಆಟೊ ರಿಕ್ಷಾಗಳಲ್ಲೇ ಸಾಗಬೇಕಾಗಿದ್ದು ಬಡಮಕ್ಕಳಿಗೂ ಸರ್ಕಾರವೇ ಸೈಕಲ್ ನೀಡಿದ್ದು, ಹೆದ್ದಾರಿಯಲ್ಲಿ ಸಾಗಬೇಕಾದರೆ ಅಪಘಾತಗಳಿಗೆ ತುತ್ತಾಗಿ ಅನೇಕ ಮಕ್ಕಳು ಶಾಲೆಯ ಬದಲು ಆಸ್ಪತ್ರೆ ಸೇರಿರುವ ಅನೇಕ ಘಟನೆಗಳು ನಡೆದಿವೆ. ಪೋಷಕರಿಗೆ ತಮ್ಮ ಮಕ್ಕಳ ಪ್ರಾಣಭೀತಿಯಲ್ಲಿಯೇ ನಿತ್ಯದ ಚಿಂತೆಯಾಗಿದೆ. ಇಲ್ಲಿರುವ ಕಚ್ಚಾರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ ಅನುಕೂಲ ವಾಗುತ್ತದೆ ಎಂಬುದುಸಾರ್ವಜನಿಕರ ಅಭಿಪ್ರಾಯವಾಗಿದೆ. ಸಂತಮೇರಿ ಶಾಲೆ ಮತ್ತು ಶ್ರೀನಿವಾಸ ನಗರ ಬಡಾವಣೆ ನಡುವೆ ಕಚ್ಚಾರಸ್ತೆಯೊಂದು ಇದ್ದು ಇದು ಸ್ವಲ್ಪಮಟ್ಟಿನ ದೂರ ಡಾಂಬರ್ ಕಂಡಿದೆ. ಉಳಿಕೆ 1 ಕಿ.ಮೀ.ನಷ್ಟು ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಆದಲ್ಲಿ, ಹೆಂಜಗೊಂಡನಹಳ್ಳಿ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲೊನಿ ಮತ್ತು ಸಂತಮೇರಿ ಶಾಲೆ, ಬಿ ಇಡಿ ಕಾಲೇಜು, ತಾಲೂಕು ಕಚೇರಿ, ನ್ಯಾಯಾಲಯ ಮೊದಲಾದವುಗಳಿಗೆ ಹೋಗುವವರು ನಿರ್ಭೀತಿಯಿಂದ ಈ ರಸ್ತೆಯಲ್ಲಿ ಸಂಚರಿಸಬಹುದು. ಈ ರಸ್ತೆ ಅಭಿವೃದ್ಧಿಗಾಗಿ ಪೋಷಕ ವರ್ಗ ಹಾಗೂ ಶಾಲಾ ಕಾಲೇಜುಗಳ ಪ್ರಮುಖರು ಸಹ ಮನವಿ ಮಾಡಿದ್ದಾರೆ.

ಸಿನೆಮಾ ಉತ್ಸವ
ಮೈಸೂರು: ನೆಲೆ ಹಿನ್ನೆಲೆ ಮತ್ತು ಸಿನೆಮಾ ಪಯಣ ಸಂಸ್ಥೆಯು ಜೂ.2 ರಿಂದ 6 ರವರೆಗೆ ರಂಗ ಗೆಳೆಯರ ಸಿನೆಮಾ ಪಯಣ ಹೆಸರಿನಡಿ ಮೊದಲ ನಿರ್ದೇಶನದ ಚಲನಚಿತ್ರೋತ್ಸವ ಆಯೋಜಿಸಿದೆ. ರಂಗಾಯಣದ ಶ್ರೀರಂಗದಲ್ಲಿ ಜೂ.2ರ ಸಂಜೆ 6.30ಕ್ಕೆ ಚಿತ್ರ ಪ್ರದರ್ಶನ, ನಂತರ ಚಿತ್ರ ತಂಡದೊಡನೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಚಿತ್ರೋತ್ಸವ ಉದ್ಘಾಟಿಸುವರು. ರಂಗಾಯಣ ನಿರ್ದೇಶಕ ಎಚ್.ಜನಾರ್ದನ್ ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದು ಸಂಸ್ಥೆಯ ರವೀಂದ್ರನಾಥ ಸಿರಿವರ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಿನಾಂಕ ವಿಸ್ತರಣೆ
ಮೈಸೂರು: ವಿವಿ ಕ್ರಿಯೇಷನ್ಸ್ ಜೂ.29ರ ಬೆಳಗ್ಗೆ 9ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಭಕ್ತಿಗೀತೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಜೂ.20 ರೊಳಗೆ ದಿನಾಂಕ ವಿಸ್ತರಿಸಲಾಗಿದೆ. ಮೊ. 94482 82632 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement