ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

20 ನಿಮಿಷ 20 ಸುದ್ದಿ

Srinivasa Murthy VN
Updated On : 31 May 2014, 11:58 am

ಹಾಸನ: ನಗರದ ಎ.ವಿ.ಕೆ. ಕಾಲೇಜ್ ರಸ್ತೆ, ಚರ್ಚ್ ಬಳಿ ಮೊದಲನೆ ಮಹಡಿಯಲ್ಲಿ ನಿರ್ಮಿಸಲಾಗಿರುವ ನೂತನ ಗೃಹ ಪೈನಾನ್ಸ್ ಕಚೇರಿ ಉದ್ಘಾಟನೆಯನ್ನು ಎನ್‌ಡಿಆರ್‌ಕೆ  ಇನ್ಸ್‌ಟಿಟ್ಯೂಟ್ ಟೆಕ್ನಾಲಜಿ ಪ್ರಾಂಶುಪಾಲ ಡಿ.ವಿ. ಗಿರೀಶ್ ಟೇಪ್ ಕತ್ತರಿಸಿ, ಜ್ಯೋತಿ ಬೆಳಗುವುದರ ಮೂಲಕ ನೆರವೇರಿಸಿದರು.
ಈ  ವೇಳೆ ಪೈನಾನ್ಸ್ ವಿಭಾಗದ ಮುಖ್ಯಸ್ಥ ರವಿಕುಮಾರ್, ಮೈಸೂರು ವಿಭಾಗದ ಮ್ಯಾನೇಜರ್ ಕೆ.ಆರ್. ಪಾರ್ಥ, ರಾಜ್ಯದ ರೀಜನಲ್ ಮ್ಯಾನೇಜರ್ ಎಸ್. ನರೇಂದ್ರ ಹಾಗೂ ಹಿರಿಯ ಪತ್ರಕರ್ತ ಕೆ.ಶೇಷಾದ್ರಿ  ಮತ್ತಿತರರು ಉಪಸ್ಥಿತರಿದ್ದರು.

'ಬೇಸಿಗೆ ಶಿಬಿರಗಳಿಂದ ಉತ್ತಮ ಬದುಕು ಸಾಧ್ಯ'
ಅರಸೀಕೆರೆ: ಶಾಲಾ ರಜಾ ದಿನಗಳನ್ನು ಶಿಕ್ಷಕರು ವ್ಯರ್ಥವಾಗಿ ಕಾಲ ಕಳೆಯುವ ಬದಲು  ಸೇವಾ ಮನೋಭಾವದಿಂದ ತಮ್ಮಲ್ಲಿರುವ ಕಲೆ, ಸಾಹಿತ್ಯ, ಯೋಗ, ನೃತ್ಯ, ಕರಕುಶಲ ವಸ್ತುಗಳ ತಯಾರಿಕೆಯನ್ನು ಮಕ್ಕಳಿಗೆ ಬೇಸಿಗೆ ಶಿಬಿರದ ಮೂಲಕ ಕಲಿಸುವ ಪ್ರಾಮಾಣಿಕ  ಪ್ರಯತ್ನ ಮಾಡುತ್ತಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ದೈಹಿಕ ಪರಿವೀಕ್ಷಕ ತಿಮ್ಮೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಸಾಯಿನಾಥ ದೇವಾಲಯದ ಹಿಂಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇತ್ತೀಚೆಗೆ  ಬಾಲ ಮಂದಿರ ಬೆಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ  ಏರ್ಪಡಿಸಿದ್ದ  ಬೇಸಿಗೆ ಶಿಬಿರದ  ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,  ಮಕ್ಕಳು ರಜಾದಿನಗಳಲ್ಲಿ ಕಾಲಹರಣ ಮಾಡದೆ ಕರಕುಶಲ ತರಬೇತಿ, ಕಲೆ, ಕ್ರೀಡೆ, ಸಾಹಿತ್ಯ, ಇನ್ನಿತರ ಕಲೆಗಳನ್ನು ಮೈಗೂಡಿಸಿಕೊಂಡು ಎಲ್ಲ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಕೈಗಾರಿಕಾ ತರಬೇತಿ ಸಂಸ್ಥೆಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭ
ಹಾಸನ:  ಚನ್ನರಾಯಪಟ್ಟಣ ತಾಲೂಕು ಬಾಗೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2014-15 ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು ಎಲೆಕ್ಕ್ರಿಷಿಯನ್-21 ಫಿಟ್ಟರ್-21(ಎನ್.ಸಿ.ವಿ.ಟಿ)ಮತ್ತುಎಲೆಕ್ಟ್ರಾನಿಕ್ ಮೆಕ್ಯಾನಿಕ್-21 ಎಂ.ಆರ್.ಎ.ಸಿ-21(ಎಸ್.ಸಿ.ವಿ.ಟಿ) ಸೀಟುಗಳಿದ್ದು 10ನೇ ತರಗತಿ ಪಾಸಾದ ಆಭ್ಯರ್ಥಿಗಳು ಜೂನ್ 5 ರೊಳಗೆ ಆನ್‌ಲೈನ್‌ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ಹೆಚ್ಚಿನ ವಿವರಗಳಿಗೆ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಬಾಗೂರು, ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ, ದೂರವಾಣಿ ಸಂಖ್ಯೆ 08176-251121 ಸಂಪರ್ಕಿಸಬಹುದು.

ಚಿಲ್ಲರೆ ನಾಣ್ಯ ವಿತರಣೆ
ಎಸ್‌ಬಿಎಂ ಬ್ಯಾಂಕಿನ ಹೊಳೆನರಸೀಪುರ ಶಾಖೆಯ ವತಿಯಿಂದ ಗ್ರಾಹಕ ವರ್ತಕರಿಗೆ  ಚಿಲ್ಲರೆ ನಾಣ್ಯದ ಬ್ಯಾಗುಗಳನ್ನು ವಿತರಿಸಲಾಯಿತು.

ಎಸ್‌ಬಿಐನಲ್ಲಿ ಕ್ಲರಿಕಲ್ ಹುದ್ದೆಗೆ ಅರ್ಜಿ ಆಹ್ವಾನ
ಹಾಸನ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ  ಕ್ಲರಿಕಲ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ: 2014ರ ಆಗಸ್ಟ್ 31ಕ್ಕೆ ಯಾವುದಾದರೂ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.  ಪ್ರಸಕ್ತ  ಸಾಲಿನಲ್ಲಿ ಅಂತಿಮ ವರ್ಷದ ಪದವಿ  ವ್ಯಾಸಂಗ ಮಾಡುತ್ತಿರುವವರೂ ಅರ್ಜಿ ಸಲ್ಲಿಸ ಬಹುದು. 2014ರ ಮೇ 1ಕ್ಕೆ ಕನಿಷ್ಠ 28 ವರ್ಷ ಮೀರಿರಬಾರದು ಪರಿಶಿಷ್ಟ ಜಾತಿ, ಪಂಗಡ, ಒಬಿಸಿ(ಕೇಂದ್ರ) ಅಭ್ಯರ್ಥಿಗಳಿಗೆ ವಯೋವುತಿಯಲ್ಲಿ  ನಿಯಮಾನುಸಾರ ಸಡಿಲಿಕೆ  ಇರುತ್ತದೆ. ಅರ್ಜಿ ಸಲ್ಲಿಸುವ  ವಿಧಾನ- ವೆಬ್‌ಸೈಟ್ ಢಿಢಿಢಿ. www. zhttpzzzwww.ugc.ac.inzzstatebankofindia.com  ಅಥವಾ  www.sbi.co.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು  ಜೂನ್ 14 ಹಾಗೂ ಬ್ಯಾಂಕಿನಲ್ಲಿ  ಶುಲ್ಕ ಪಾವತಿಸಲು ಜೂನ್ 16 ಕಡೇ ದಿನ.   ಮಾಹಿತಿಗೆ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು. ವಿಶ್ವವಿದ್ಯಾನಿಲಯ, ಮೈಸೂರು ಇವರನ್ನು ಸಂಪರ್ಕಿಸಬುಹುದು. ದೂ -0821- 2516844 , 9449686641.

ಪ್ರತಿಭಾ ಪುರಸ್ಕಾರ ಸಮಾರಂಭ ಇಂದು
ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಜನಮಿತ್ರ  ಪತ್ರಿಕೆ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜೂ.1 ರಂದು ಸಂಜೆ 5.30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಲಾಗಿದೆ. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಉದ್ಘಾಟಿಸುವರು. ಪತ್ರಿಕೆಯ ಸಂಪಾದಕ ಎಚ್.ಬಿ. ಮದನಗೌಡ  ಅಧ್ಯಕ್ಷತೆ ವಹಿಸುವರು.  ಚಿಕ್ಕಮಗಳೂರಿನ ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ ವಿದ್ಯಾರ್ಥಿಗಳನ್ನು ಅಭಿನಂದಿಸುವರು.
ಜಿಲ್ಲಾ ಕಸಾಪ ಅಧಕ್ಷ ಎಚ್.ಎಲ್. ಜನಾರ್ದನ್,  ಅಮೋಘ ವಾಹಿನಿಯ ಹಿರಿಯ ವ್ಯವಸ್ಥಾಪಕ ಕೆ.ಪಿ.ಸತ್ಯಪ್ರಮೋದ್, ಪತ್ರಕರ್ತೆ ಲೀಲಾವತಿ,  ಕೇಂದ್ರ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್. ಈರಣ್ಣ, ಮತ್ತಿತರರು ಭಾಗವಹಿಸುವರು.

ಎಡಿಜಿಪಿಗೆ ನ್ಯಾಯ ಒದಗಿಸುವಂತೆ ಆಗ್ರಹ
ಹಾಸನ:  ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಿ ಕೆಎಸ್‌ಆರ್‌ಪಿ ಎಡಿಜಿಪಿ ರವೀಂದ್ರನಾಥ್ ಅವರಿಗೆ ನ್ಯಾಯ ಒದಗಿಸಿಕೊಡುವಂತೆ ಮಾದಿಗ ದಂಡೋರ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.ರವೀಂದ್ರ ನಾಥ್ ಅವರು ಕಾಫಿ ಶಾಪ್ ನಲ್ಲಿ ಹುಡುಗಿಯರ ಫೋಟೊ ತೆಗೆದರು ಎಂಬ ಕುಂಟು ನೆಪವೊಡ್ಡಿ ಅವರ ತೇಜೋವಧೆಗೆ ಕಾರಣರಾಗಿರುವ ಹಾಗೂ ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣರಾಗಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹಾಗೂ ಡಿಸಿಪಿ ರವಿಕಾಂತೇಗೌಡ ಮತ್ತು ಹೈಗ್ರೌಂಡ್ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಡಿಜಿಪಿ ರವೀಂದ್ರನಾಥ್ ದಲಿತರಾಗಿದ್ದು, ಮುಂದೆ ಉನ್ನತ ಹುದ್ಧೆ ಲಭ್ಯವಾಗುತ್ತಿದೆ ಎಂಬ ಕಾರಣಕ್ಕೆ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಸೃಷ್ಟಿಸಿ ಅವಮಾನ ಮಾಡಿದ್ದಾರೆ. ಆದ್ದರಿಂದ ಈ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಿ ಒತ್ತಾಯಿಸಿದರು. ದಂಡೋರದ ಜಿಲ್ಲಾಧ್ಯಕ್ಷ ಟಿ.ಆರ್.ವಿಜಯಕುಮಾರ್ ಮತ್ತಿತರ ಸದಸ್ಯರು ಭಾಗವಹಿಸಿದ್ದರು.

ಸ್ಟೇಟ್ ಬ್ಯಾಂಕಿನಿಂದ ಚಿಲ್ಲರೆ ಮೇಳ: ನಾಣ್ಯಗಳ ವಿತರಣೆ
ಹೊಳೆನರಸೀಪುರ: ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದ ಮೇರೆಗೆ ಬ್ಯಾಂಕಿನ ಗ್ರಾಹಕರಾಗಿರುವ ವರ್ತಕರಿಗೆ ತಮ್ಮ ವ್ಯಾಪಾರದಲ್ಲಿ ಚಿಲ್ಲರೆ ಅಭಾವ ಅಲ್ಪಮಟ್ಟಿಗೆ ನೀಗಲು ಬ್ಯಾಂಕ್ ವತಿಯಿಂದ ಚಿಲ್ಲರೆ ಮೇಳ ಹಮ್ಮಿಕೊಂಡು ನಾಣ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಳೀಯ ಶಾಖಾ ವ್ಯವಸ್ಥಾಪಕ  ಸಾಜಿ ಹೇಳಿದರು. ಪಟ್ಟಣದ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ರು. 1, 2 ಮತ್ತು5 ಮುಖ ಬೆಲೆಯುಳ್ಳ ನಾಣ್ಯಗಳ ಬ್ಯಾಗ್ ವಿತರಿಸಿ ಅವರು ಮಾತನಾಡಿದರು. ಚಿಲ್ಲರೆ ಮೇಳವನ್ನು ಈಗಾಗಲೇ ಆರಂಭಿಸಲಾಗಿದ್ದು ಅಧಿಕೃತವಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದ ಮೇರೆಗೆ ಪ್ರತೀ ತಿಂಗಳ 23ರಂದು ನಾಣ್ಯಗಳನ್ನು ವಿತರಿಸಲಾಗುವುದು ಎಂದರು.  ಬ್ಯಾಂಕ್ ಲೆಕ್ಖಾಧಿಕಾರಿಗಳಾದ ಅಲೋಕ್ ಪಾಂಡೆ, ದೇವಯ್ಯ, ಪ್ರಕಾಶ್, ರಾಜು ಗ್ರಾಹಕರಾದ  ಕೆ. ಎಂ. ಶಿವಕುಮಾರ್, ಅನಂತ್ ಮೊದಲಾದವರು ಇದ್ದರು.

ಕರವೇ ಕಾರ್ಯಕರ್ತರ ಸಭೆ
ಹಾಸನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಕಾರ್ಯಕರ್ತರ ಸಭೆ ಯನ್ನು ಕರವೇ ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್ ಶನಿವಾರ ಉದ್ಘಾಟಿಸಿದರು.

ಅಲ್ಪಸಂಖ್ಯಾತ ವರ್ಗದ ಜನರಿಗೆ ಮಾಹಿತಿ ಶಿಬಿರ 6 ರಂದು
ಹಾಸನ:  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಜೂ. 6 ರಂದು ಬೆಳಗ್ಗೆ 10.30ಕ್ಕೆ   ನಗರದ ಅಂಬೇಡ್ಕರ್ ಭವನದಲ್ಲಿ  ನಿಗಮದ ಆಧಿಕಾರಿ  ಮಹಮ್ಮದ್ ಸಲೀಂ, ಜಿಲ್ಲಾ ವ್ಯವಸ್ಥಾಪಕ  ಬಿ.ಎನಾಗೇಂದ್ರ  ಅಲ್ಪಸಂಖ್ಯಾತ ವರ್ಗಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ದ, ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ ಜನರಿಗೆ ಮಾಹಿತಿ ಶಿಬಿರ ಕೈಗೊಳ್ಳಲ್ಲಿದ್ದಾರೆ.
ಮುಖ್ಯವಾಗಿ ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ನಾನಾ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ, ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ವಿದ್ಯಾರ್ಥಿಗಳ ಪರವಾಗಿ ನಿಗಮದ ವತಿಯಿಂದ ಕೆಲವೇ ದಾಖಲೆಗಳನ್ನು ಪಡೆದು ನಿಗಮದಿಂದ ನೇರವಾಗಿ ಕರ್ನಾಟಕ ಪರೀಕ್ಷೆ ಪ್ರಾಧಿಕಾರಕ್ಕೆ(ಎಇಂ) ಸಾಲದ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶವನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು ಕಲ್ಪಿಸುತ್ತದೆ ಹಾಗೂ ಈ ಸಂಬಂಧ ನಿಗಮದ ಇನ್ನೂ ಹಲವು ಯೋಜನೆಗಳ ಮಾಹಿತಿ ನೀಡಲು ಮೇಲ್ಕಂಡ ವಿಳಾಸದಲ್ಲಿ ಒಂದು ದಿನದ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಮಾದಿಗ ದಂಡೋರ ಪ್ರತಿಭಟನೆ
ಕೆಎಸ್‌ಆರ್‌ಪಿ ಎಡಿಜಿಪಿ ರವೀಂದ್ರನಾಥ್ ಅವರಿಗೆ ನ್ಯಾಯ ಒದಗಿಸಿಕೊಡುವಂತೆ ಮಾದಿಗ ದಂಡೋರ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಬೀದಿ ನಾಯಿಗಳ ದಾಳಿ: ಇಬ್ಬರು ಮಕ್ಕಳಿಗೆ ಗಾಯ
ಬೇಲೂರು: ಪಟ್ಟಣದ ರೇಣುಕ ಚಿತ್ರಮಂದಿರದ ಸಮೀಪದ ಅಮಾನುಲ್ಲಾ ರಸ್ತೆಯಲ್ಲಿ ಬೀದಿ ನಾಯಿ ಕಡಿದು ಇಬ್ಬರು ಮಕ್ಕಳು ಹಾಗೂ ಕುರಿಗೆ ಗಾಯವಾಗಿರುವ ಘಟನೆ  ಶುಕ್ರವಾರ ನಡೆದಿದೆ. ಮಹ್ಮದ್‌ಸಮೀರ್(4) ಹಾಗೂ ಪಲ್ಲವಿ(18 ತಿಂಗಳು) ಗಾಯಗೊಂಡಿರುವ ಮಕ್ಕಳು. ಪಲ್ಲವಿ ಸ್ಥಿತಿ ಚಿಂತಾಜನಕವಾಗಿದ್ದು ಇಬ್ಬರನ್ನೂ ಹಾಸನದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಮಗು ಪಲ್ಲವಿ ಆರೋಗ್ಯ ಸ್ಥಿತಿ ಸುಧಾರಣೆಗೆ ವೈದ್ಯರು 24 ಗಂಟೆ ಸಮಯ ಕೋರಿದ್ದಾರೆ. ಬೆಳಗ್ಗೆ ಮುಸ್ತಾಫ ಬೀದಿಯಲ್ಲಿ ಮಹ್ಮದ್‌ಸಮೀರ್ ಎಂಬ ಮಗುವಿನ ಕಿವಿ ಕಡಿದು ತುಂಡರಿಸಿದ ನಾಯಿ ನಂತರ ಅಮಾನುಲ್ಲಾ ರಸ್ತೆಯಲ್ಲಿ ಪಲ್ಲವಿಯ ಕೆನ್ನೆಗೆ ಕಡಿದಿದೆ. ನಂತರ 2 ಕುರಿಯ ಕುತ್ತಿಗೆ ಕಡಿದು ಪರಾರಿಯಾಗಿದೆ.
ಪುರಸಭೆ ವಿರುದ್ಧ ಆಕ್ರೋಶ: ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು ನಾಯಿಗಳ ಕಡಿವಾಣಕ್ಕೆ ಪುರಸಭೆ ಗಮನ ಹರಿಸಬೇಕಿದೆ. ಈ ಪ್ರದೇಶದಲ್ಲಿ ಮಾಂಸ ಮಾರಾಟದ ವ್ಯವಸ್ಥೆ ಇರುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

'ಭ್ರಷ್ಟರ ವಿರುದ್ಧ ಹೋರಾಡಲು ಕರವೇ ಸದಾ ಸಿದ್ದ'
ಹಾಸನ: ನಾಡು, ನುಡಿ ಉಳಿವಿಗಾಗಿ ಹಾಗೂ ಭ್ರಷ್ಟರ ವಿರುದ್ಧ ಹೋರಾಟ ಮಾಡಲು ನಾವು ಸದಾ ಸಿದ್ಧರಾಗಿರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಾಡು ನುಡಿ ವಿಚಾರ ಬಂದಾಗ ನಾವು ಎಂದೂ ಹಿಂದೆ ಸರಿಯುವುದಿಲ್ಲ. ಜಿಲ್ಲಾಡಳಿತ ಮತ್ತು ರಾಜಕಾರಣಿಗಳು ಭ್ರಷ್ಟರಾಗಿ ಸಾರ್ವಜನಿಕರಿಗೆ ಸ್ಪಂದಿಸದಿದ್ದರೆ ಕರವೇ ಕಾರ್ತಕರ್ತರು ಹೋರಾಟ ಮಾಡುವುದು ಶತಸಿದ್ಧ ಎಂದರು. ಕಳೆದ 12 ವರ್ಷಗಳಿಂದ ನಮ್ಮ ಸಂಘಟನೆ ನ್ಯಾಯಯುತವಾಗಿ ಹೋರಾಟ ಮಾಡಿಕೊಂಡು ಬಂದಿದೆ. ರೈತರ ಸಮಸ್ಯೆ ಸೇರಿದಂತೆ ನಾಡಿನ ಜನರಿಗೆ ಅನ್ಯಾಯವಾದಾಗ ನಮ್ಮ ಸಂಘಟನೆ ದಿಟ್ಟ ಹೋರಾಟ ಮಾಡಿ ನ್ಯಾಯ ಕೊಡಿಸಲು ಮುಂದಾಗಿದೆ ಎಂದು ಹೇಳಿದರು. ಸಂಘಟನೆಯನ್ನು ಹೋಬಳಿ ಮಟ್ಟದಲ್ಲೂ ಸಂಘಟಿಸಿ ಒಂದು ಗ್ರಾಮ ಶಾಖೆ ಮಾಡುವ ಮೂಲಕ ಕರವೇ ಸದಸ್ಯರನ್ನಾಗಿ ಮಾಡಬೇಕು. ಎಲ್ಲರ ಸಹಕಾರದಿಂದ ಕರವೇ ಸಂಘಟನೆಯನ್ನು ಬಲ ಪಡಿಸಬೇಕಾಗಿದೆ ಎಂದು ಹೇಳಿದರು.

ಭೂ ಚೇತನ ಯೋಜನೆಯಡಿ ಗುಚ್ಚ ಗ್ರಾಮ ತರಬೇತಿ
ಹಾಸನ:  ತಾಲೂಕಿನ ಸಾಲಗಾಮೆ ಹೋಬಳಿಯ ಬಲ್ಲೇನಹಳ್ಳಿ  ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಭೂಚೇತನ ಯೋಜನೆಯಡಿ  ಗುಚ್ಚ ಗ್ರಾಮ ತರಬೇತಿಯನ್ನು ಗ್ರಾಮದ ಹಿರಿಯ ಮುಖಂಡರಾದ ರಾಜಶೇಖರ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.  ಕಾರ್ಯಕ್ರಮದಲ್ಲಿ ಹಾಸನ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎ.ಎಸ್.ಕೋಕಿಲ ಭೂಚೇತನ ಯೋಜನೆಯ ಉದ್ದೇಶ ಹಾಗೂ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಎಚ್.ರಮೇಶ್‌ಕುಮಾರ್, ಮಣ್ಣು ಪರೀಕ್ಷೆಯ ಆಧಾರದಲ್ಲಿ ಶಿಫಾರಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಬಳಕೆ ಮಾಡಬೇಕು ಹಾಗೂ ಲಘು ಪೋಷಕಾಂಶಗಳಾದ ಸತು, ಗಂಧಕ ಮತ್ತು ಬೋರಾನ್ ಉಪಯುಕ್ತತೆ ಬಗ್ಗೆ ಸಾವಯವ ಗೊಬ್ಬರ ಹಾಗೂ ಜೈವಿಕ ಗೊಬ್ಬರದ ಬಗ್ಗೆ ಮಾಹಿತಿ ನೀಡಿದರು.

ವಿದ್ಯುತ್ ಸ್ಪರ್ಶ: ದಂಪತಿ ಸಾವು
ಹಳೇಬೀಡು:  ಜಮೀನಿನಲ್ಲಿ ಬಿತ್ತನೆ ಮಾಡುವಾಗ ದಂಪತಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ಹಳೇಬೀಡು ಹೋಬಳಿಯ ದ್ಯಾವಪ್ಪನಹಳ್ಳಿಯಲ್ಲಿ ಶನಿವಾರ ನಡೆದಿದೆ.
ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ದ್ಯಾವಪ್ಪನಹಳ್ಳಿಯ ಮೋಹನ್(33) ಮತ್ತು ಪತ್ನಿ ಗೀತಾ(28) ಮೃತಪಟ್ಟವರು.  ಇವರು ತಮ್ಮ ಜಮೀನಿಲ್ಲಿ ಬೆಳಗ್ಗೆ ಬಿತ್ತನೆ ಮಾಡುವಾಗ ಮೋಹನ್ ಮತ್ತು ಗೀತಾ ಹಾಗೂ ಅವರ ಬಾವಮೈದುನ ಹರೀಶ್ ಬಿತ್ತನೆ ಮಾಡುತ್ತಿದ್ದರು. ಜಮೀನಿನಲ್ಲಿ ಇದ್ದ ಬೋರ್‌ವೆಲ್‌ನ ವೈಯರ್ ಕಟ್ಟಾಗಿ ನೆಲಕ್ಕೆ ತಾಕಿತ್ತು. ಶುಕ್ರವಾರ ಮಳೆ ಬಂದಿದ್ದರಿಂದ ವಿದ್ಯುತ್ ಗ್ರೌಂಡ್ ಆಗಿತ್ತು.  ಮೊದಲು ಹರೀಶ್‌ಗೆ ವಿದ್ಯುತ್ ಶಾಕ್ ಹೊಡೆದ ಅನುಭವವಾಗಿದೆ. ಹಿಂದೆ ಬರುತ್ತಿದ್ದ ಮೋಹನ್ ಮತ್ತು ಗೀತಾ ಅವರಿಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಟ್ಟಿನಕೆರೆ ಮಾರುಕಟ್ಟೆ ಬಾಳೆಹಣ್ಣು ಮಾರಾಟಗಾರರ ಸಭೆ
ಹಾಸನ: ನಗರ ಕಟ್ಟಿನಕೆರೆ ಮಾರುಕಟ್ಟೆ ಬಾಳೆಹಣ್ಣು ಮಾರಾಟಗಾರರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಇತ್ತೀಚೆಗೆ ಹೊಸಲೈನ್ ರಸ್ತೆಯ ದೊಡ್ಡ ಗರಡಿಯಲ್ಲಿ ನಡೆಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಮೀರ್ ಅಹಮ್ಮದ್ ಮಾತನಾಡಿ,  ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಾದ ಆಹಾರ ಭದ್ರತೆ ಕಾಯಿದೆಯಡಿ ವರ್ತಕರನ್ನು ನೋಂದಾಯಿಸಿ ಅಧಿಕೃತ ಸರ್ಟಿಫಿಕೆಟ್ ಮಾಡಿಸಲು  ನಿರ್ಣಯ ಮಾಡಲಾಯಿತು. ಹಾಗೂ ರಸ್ತೆ ಬದಿ ವ್ಯಾಪಾರಸ್ಥರಿಗೆ ಪರವಾನಗಿ ನೀಡುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಹಾಸ್ಟೆಲ್‌ಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬೇಲೂರು: ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯಿಂದ ತಾಲೂಕಿನಲ್ಲಿ ನಡೆಯುತ್ತಿರುವ 5ನೇ ತರಗತಿಯಿಂದ 10ನೇ ತರಗತಿಯವರಗಿನ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಹಿಂದುಳಿದ ವರ್ಗಗಳ ಹಾಸ್ಟೆಲ್ ಇರುವ ಹಳೇಬೀಡು, ಬಂಟೇನಹಳ್ಳಿ, ಬೇಲೂರು ಇಲ್ಲಿಗೆ 5 ರಿಂದ 10ನೇ ತರಗತಿಯವರಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೆಟ್ರಿಕ್ ನಂತರದ ಬಾಲಕರು ಹಾಗೂ ಬಾಲಕೀಯರ ವಿದ್ಯಾರ್ಥಿ ನಿಲಯ ಮತ್ತು ಬಂಟೇನಹಳ್ಳಿಯ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ ಇಲ್ಲಿಗೆ ಸೇರಬಯಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನ ವಿದ್ಯಾರ್ಥಿ ನಿಲಯದಲ್ಲಿ ಪಡೆದು ಜೂನ್ 10ರೊಳಗೆ ಸಂಬಂಧಪಟ್ಟ ವಿದ್ಯಾರ್ಥಿ ನಿಲಯದ ಮೇಲ್ವೀಚಾರಕರಿಗೆ ಭರ್ತಿ ಮಾಡಿದ ಅರ್ಜಿ ಸಲ್ಲಿಸಬಹುದಾಗಿದೆ.

ಸ್ವಾಮೀಜಿ ಆಶೀರ್ವಚನ
ಹಾಸನದ ಬಿಜಿಎಸ್ ಸ್ಟಡಿ ಸೆಂಟರ್‌ನಲ್ಲಿ ಗುರುವಾರ ಟಿಇಟಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ  ಶ್ರೀ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಎನ್‌ಡಿಆರ್‌ಕೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮೋಹನ್ ಕುಮಾರ್, ಸ್ಟಡಿ ಸೆಂಟರ್ ಸಂಯೋಜಕ ಡಾ. ಎಚ್.ಕೆ. ಕುಶಾಲಪ್ಪ ಇದ್ದಾರೆ.

ಜಾವಗಲ್ ಹೋಬಳಿಯಲ್ಲಿ ಮಳೆ ಕೃಷಿಯಲ್ಲಿ ತೊಡಗಿದ ರೈತರು
ಜಾವಗಲ್: ಜಾವಗಲ್ ಹೋಬಳಿಯಾದ್ಯಂತ ಬಿತ್ತನೆಗೆ ಪೂರಕವಾದ ಹದಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಹೋಬಳಿಯ ರೈತರಿಗೆ ಅನುಕೂಲವಾಗುವಂತೆ ಜಾವಗಲ್ ರೈತ ಕೇಂದ್ರದ ವ್ಯಾಪ್ತಿಯಲ್ಲಿ ಜಾವಗಲ್, ಕೋಳಗುಂದ, ಗೇರುಮರ ಗೇಟ್ ಮತ್ತು ನೇರ್ಲಿಗೆಗ್ರಾಮಗಳಲ್ಲಿ ತೆರೆದಿರುವ ಬಿತ್ತನೆ ವಿತರಣಾ ಕೇಂದ್ರಗಳಲ್ಲಿ ಮುಂಗಾರು ಬಿತ್ತನೆ ಬೀಜಗಳಾದ ಹೆಸರು, ಉದ್ದು, ಅಲಸಂದೆ, ತೊಗರಿ, ಹೈಬ್ರಿಡ್‌ಜೋಳ, ನಾನಾ ತಳಿಯ ಮುಸುಕಿನ ಜೋಳ ಮತ್ತು ಸೂರ್ಯಕಾಂತಿ ಬೀಜಗಳನ್ನು ಭೂ ಚೇತನ ಪರಿಕರದೊಂದಿಗೆ ರಿಯಾಯಿತಿದರದಲ್ಲಿ ವಿತರಿಸಲಾಗುತ್ತಿದೆ. ಸಣ್ಣ ಮತ್ತು ಅತಿಸಣ್ಣರೈತರು ಇದರ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ತತ್ಕಾಲದಲ್ಲಿ ಕೃಷಿ ಮಾಹಿತಿ ತಂತ್ರಜ್ಞಾನಗಳಾದ ಸೂಕ್ತ ಸಕಾಲಿಕ ತಳಿಗಳ ಬಳಕೆ, ಬೀಜೋಪಚಾರ ಮಾಡಿದ ಬಿತ್ತನೆ ಬೀಜ ಬಳಸುವುದು, ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸು ಪ್ರಮಾಣದ ರಸಗೊಬ್ಬರ ಬಳಸಬೇಕು ಎಂದು ಕೃಷಿ ಅಧಿಕಾರಿ ಡಿ.ಎಸ್. ಕುಮಾರಸ್ವಾಮಿ ರೈತರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement