ಅಯ್ಯಪ್ಪ ಸ್ವಾಮಿ ದೇಗುಲ ಕಾಮಗಾರಿ ಆರಂಭ
ಹೊಳೆನರಸೀಪುರ: ಪಟ್ಟಣದ ಶ್ರೀ ಧರ್ಮಶಾಸ್ಥಾ ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ಶ್ರೀ ಲಕ್ಷ್ಮಣೇಶ್ವರ ದೇವಾಲಯದ ಹಿಂಬಾಗದಲ್ಲಿನ ಹೇಮಾವತಿ ನದಿ ದಂಡೆಯಲ್ಲಿ ನಿರ್ಮಿಸಲಾಗುತ್ತಿರುವ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಭಕ್ತರ ಸಹಕಾರದಿಂದ ಶುಕ್ರವಾರ ಕಾಂಕ್ರಿಟ್ ಕಾಮಗಾರಿ ನಡೆಯಿತು.
ಬಹಳಷ್ಟು ಐತಿಹ್ಯಗಳನ್ನು ಹೊಂದಿರುವ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯದ ನಿರ್ಮಾಣ ಹಂತದಲ್ಲಿ ನಡೆಸಲಾದ ಅಷ್ಟಮಂಗಲ ಪೂಜಾ ಕಾರ್ಯದಲ್ಲಿ ಹೊರಬಂದ ಮಾಹಿತಿಗಳನ್ವಯ ದಕ್ಷಿಣ ಭಾರತದಲ್ಲಿಯೇ ಅತ್ಯುತ್ತಮ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿ ಇಲ್ಲಿ ಅಯ್ಯಪ್ಪಸ್ವಾಮಿ ನೆಲೆಸುವನೆಂಬ ಕೇರಳದ ಅಯ್ಯಪ್ಪಸ್ವಾಮಿ ದೇವಾಲಯದ ಪೂಜಾ ಕಾರ್ಯದ ಉಸ್ತುವಾರಿ ಹೊತ್ತಿರುವ ಗುರುಗಳು ತಿಳಿಸಿದ ನಂತರದಲ್ಲಿ ಟ್ರಸ್ಟಿನ ವತಿಯಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಹೇಮಾವತಿ ನದಿ ತೀರದಲ್ಲಿ ಪ್ರಶಾಂತ ವಾತಾವರಣದಲ್ಲಿ, ಸುಮಾರು 2 ಕೋಟಿ ರೂಗಳ ಉದ್ಧೇಶಿತ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಯ್ಯಪ್ಪ ದೇವಾಲಯಕ್ಕೆ ಪಟ್ಟಣ ಹಾಗೂ ಹೊರಗಿನ ಸಾಕಷ್ಟು ಭಕ್ತಾಧಿಗಳು ಧನಸಹಾಯದೊಂದಿಗೆ ದೇವಾಲಯದ ನಿರ್ಮಾಣಕ್ಕೆ ಸಹಕಾರ ನೀಡುತ್ತಿದ್ದು, ಭಕ್ತಾಧಿಗಳ ಆಶಯದಂತೆ ಭವ್ಯವಾದ ಅಯ್ಯಪ್ಪ ದೇಗುಲ ನಿರ್ಮಾಣಗೊಳ್ಳಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಟಿ.ಶಿವಕುಮಾರ್ ತಿಳಿಸಿದ್ದಾರೆ.
ಈಗಾಗಲೇ ದೇವಾಲಯದ ಕಾಂಕ್ರಿಟ್ ಕಾಮಗಾರಿಗಾಗಿ ದಾನಿಗಳು ಹಣವಲ್ಲದೇ ಮರಳು, ಕಬ್ಬಿಣ, ಸಿಮೆಂಟ್ ಹಾಗೂ ಜಲ್ಲಿಯನ್ನು ನೀಡುವ ಮೂಲಕ ದೇವಾಲಯದ ಕಾಮಗಾರಿಗೆ ಸಾಕಷ್ಟು ಸಹಕಾರ ನೀಡುತ್ತಿದ್ದು, ದೇವಾಲಯವು ಸಂಪೂರ್ಣಗೊಳ್ಳಲು ಬಹಳಷ್ಟು ಹಣದ ಅವಶ್ಯಕತೆ ಇದ್ದು, ಭಕ್ತಾಧಿಗಳ ಸಹಕಾರವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಖಜಾಂಚಿ ಹಾಗೂ ಎಪಿಎಂಸಿ ಅಧ್ಯಕ್ಷರೂ ಆದ ಎಚ್.ಎಸ್.ಸುದರ್ಶನ್, ಕಾರ್ಯದರ್ಶಿ ಎಚ್.ವಿ. ಸುರೇಶ್ ಕುಮಾರ್, ಟ್ರಸ್ಟಿಗಳಾದ ಮಹದೇವ್, ರಾಘು, ಎಚ್.ಡಿ.ಗುರುಪ್ರಸಾದ್, ಲಕ್ಕೂರು ಶಂಕರಪ್ಪ, ಕೆ.ಆರ್.ಸುದರ್ಶನ್, ರವಿಕುಮಾರ್, ಜಿ.ಎಸ್.ಸುರೇಶ್, ಕುಮಾರ್, ರಾಘವೇಂದ್ರ, ಜಿ.ಪಂ ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್, ಎಲೆಕ್ಟ್ರಿಕಲ್ ಚಂದ್ರಶೇಖರ್, ರೈತ ಸಂಘದ ಪುಟ್ಟಸ್ವಾಮಿ, ಗುರುಗಳಾದ ಹಾಲಪ್ಪ, ನಿಂಗಣ್ಣ, ಭಾಸ್ಕರ್, ಶಿವಶಂಕರ್ ಮೊದಲಾದವರು ಉಸ್ತುವಾರಿ ವಹಿಸಿದ್ದಾರೆ.