ಏಡ್ಸ್ ನಿಯಂತ್ರಣದ ಬಗ್ಗೆ ಜಾಗೃತಿ
ಹಾಸನ: ಏಡ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ವಿನೂತನ ಕಾರ್ಯಕ್ರಮ, ಸಂತೆಯಲ್ಲಿ ಜನಜಾಗೃತಿ ಆಂದೋಲನಾ ಕಾರ್ಯಕ್ರಮವನ್ನು ಸಾವಿರಾರು ನಾಗರಿಕರು ಸೇರುವ ಪ್ರಮುಖ ಸ್ಥಳವಾದ ನಗರದ ಸಂತೆಪೇಟೆ ಆರ್ಎಂಸಿ ಮಾರ್ಕೆಟ್ನಲ್ಲಿ ಇತ್ತೀಚೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರಸಭೆ ಹಾಸನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಸನ, ತಾಲೂಕು ಆರೋಗ್ಯ ಅಧಿಕಾರಿಗಳು ಹಾಸನ, ಪ್ರಕೃತಿ ಪೆಹಚಾನ್ ಸ್ವಯಂ ಸೇವಾ ಸಂಸ್ಥೆ, ಎಂ. ಕೃಷ್ಣನಗರ ಆರೋಗ್ಯ ಕೇಂದ್ರ, ಎಸ್ವಿವೈಎಂ ಐಸಿಟಿಸಿ ಕೇಂದ್ರ, ಜಿಲ್ಲಾ ಆಸ್ಪತ್ರೆ ಐಸಿಟಿಸಿ ಹಾಗೂ ಪಿಪಿಟಿಸಿಟಿ ಕೇಂದ್ರ, ಜೆ.ಸಿ.ಸೇವಾ ಸಂಘಟನೆ, ಸ್ವಾಮಿ ವಿವೇಕಾನಂದಾ ಯೂತ್ ಮೂವ್ಮೆಂಟ್ ಸ್ವಯಂ ಸೇವಾ ಸಂಸ್ಥೆ, ಪ್ರೇರಣಾ ಸ್ವಯಂ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ಯಾಮಲಾ ದೇವಿ ಮಾತನಾಡಿ, ಎಚ್ಐವಿಯ ಹರಡುವಿಕೆ ಹಾಗೂ ಮುಂದಿನ ಭವಿಷ್ಯದಲ್ಲಿ ಏಡ್ಸ್ ನಿಯಂತ್ರಿಸುವ ನಿಟ್ಟಿನಲ್ಲಿ ನಾಗರಿಕ ಸಮುದಾಯ ಜಾಗೃತರಾಗಬೇಕು ಎಂದು ಹೇಳಿದರು.
ಜನಜಾಗೃತಿ ಆಂದೋಲನಾ ಕಾರ್ಯಕ್ರಮವು ನಾಗರಿಕರಿಗೆ ಉಪಯುಕ್ತವಾದ್ದು ಹಾಗೂ ಸಂತೆಗೆ ಬಂದಂತಹ ಪ್ರತಿಯೊಬ್ಬ ನಾಗರಿಕನೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಉಚಿತವಾಗಿ ಎಚ್ಐವಿ ಸೋಂಕಿತ ಪರೀಕ್ಷೆ ಹಾಗೂ ಮಾಹಿತಿ, ಕರಪತ್ರಗಳನ್ನು ಮನೆಗೆ ಕೊಂಡೊಯ್ದು ಪ್ರತಿ ಕುಟುಂಬದ ಸದಸ್ಯನೂ ಎಚ್ಐವಿ ಬಗ್ಗೆ ಜಾಗೃತರಾಗಬೇಕು, ಸುಶಿಕ್ಷಿತರಾಗಬೇಕು ಎಂದರು. ಹಾಗೂ ಹಾಸನ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಅತ್ಯಂತ ಪರಿಣಾಮಕಾರಿಯಾಗಿ ಜಿಲ್ಲಾದ್ಯಂತ ಕಾರ್ಯಕ್ರಮವನ್ನು ಜನರಿಗೆ ತಲುಪಿಸುತ್ತಿದೆ ಎಂದು ಶ್ಲಾಘೀಸಿದರು.
ಏಡ್ಸ್ ನಿಯಂತ್ರಣಾಧಿಕಾರಿ ಡಾ.ಪಿ.ಎಲ್.ನಟರಾಜ್ ಮಾತನಾಡಿ. ಎಚ್ಐವಿ ಸೋಂಕಿನ ತಪಾಸಣೆ ಉಚಿತವಾಗಿ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಗುರುತಿಸಲಾದ ಸೇವಾ ಕೇಂದ್ರಗಳು, ಐಸಿಟಿಸಿ ಕೇಂದ್ರಗಳಲ್ಲಿ ಉಚಿತವಾಗಿ ಗೌಪ್ಯತೆ ಕಾಪಾಡುವ ಮೂಲಕ ಚಿಕಿತ್ಸೆ ಹಾಗೂ ಎಚ್ಐವಿ ಸೋಂಕಿತರಿಗೆ ಸೌಲಭ್ಯಗಳನ್ನು ಆಯ್ದ ಎಆರ್ಟಿ ಕೇಂದ್ರಗಳಲ್ಲಿ ಉಚಿತ ಸೌಲಭ್ಯ ದೊರೆಯುವ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸರಿಸುಮಾರು 2500 ಜನ ದೃಶ್ಯ ಮಾಧ್ಯಮ ಹಾಗೂ ಬಿತ್ತಿಚಿತ್ರಗಳನ್ನು ವೀಕ್ಷಿಸಿದರು ಸ್ವಯಂ ಪ್ರೇರಿತರಾಗಿ 106 ಜನರು ಎಚ್ಐವಿ ಪರೀಕ್ಷೆಗೆ ಒಳಗಾದರು. ಇವರಲ್ಲಿ ಒಬ್ಬರಿಗೆ ಎಚ್ಐವಿ ಸೋಂಕಿರುವುದು ಕಂಡು ಬಂತು.