ನೀರಾವರಿ ಯೋಜನೆಗಳ ತ್ವರಿತ ಜಾರಿಗೆ ತಾಕೀತು
ಕನ್ನಡಪ್ರಭ ವಾರ್ತೆ ಹಾಸನ ಮೇ 31
ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನವನ್ನು ವಿಳಂಬಗೊಳಿಸದೆ ರೈತರಿಗೆ ಸಹಕಾರಿಯಾಗುವಂತೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜಯಪ್ರಕಾಶ್ ಎಂಜಿನಿಯರ್ಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಕೆಲಸಗಳು ಜೊತೆ ಜೊತೆಯಾಗಿಯೇ ಆಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ಹೆಚ್ಚು ಹೆಚ್ಚು ಕೆಲಸಗಾರರನ್ನು ನಿಯೋಜಿಸಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಕೊಡಬೇಕು ಎಂದು ಅವರು ಗುತ್ತಿಗೆದಾರರಿಗೆ ಸೂಚಿಸಿದರು.
ಕೆರೆ, ಕಟ್ಟೆಗಳಿಗೆ ನೀರು ತುಂಬಿಸಿ
ಮುಂದಿನ 20 ದಿನಗಳಲ್ಲಿ ಪುನಃ ಜಿಲ್ಲೆಗೆ ಭೇಟಿ ನೀಡುವುದಾಗಿ ಹೇಳಿದ ಅವರು ಯಗಚಿ ನೀರಾವರಿ ಯೋಜನೆಯಲ್ಲಿ ಹತ್ತು ದಿನಗಳೊಳಗೆ ಬ್ರೇಕರ್ಗಳನ್ನು ಅಳವಡಿಸಬೇಕು ಮತ್ತು 18 ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಆದ್ಯತೆ ನೀಡಬೇಕು ಎಂದರು. ಸದರಿ ಕಾಮಗಾರಿಗೆ ಸಂಬಂದಪಟ್ಟಂತೆ ಭೂಸ್ವಾಧಿನ ಪಡಿಸಿಕೊಳ್ಳಲು ಕ್ರಮ ಜರುಗಿಸಿ, ಜೊತೆಗೆ ಜಿಲ್ಲಾಧಿಕಾರಿಯವರ ನೆರವು ಪಡೆಯುವಂತೆ ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ಪರಿಷ್ಕರಿತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮಾತನಾಡಿ, ಸಂಬಂದಪಟ್ಟ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳದೆ ವಿಳಂಬ ಮಾಡುವುದರಿಂದ ರೈತರು ತೊಂದರೆ ಎದುರಿಸುತ್ತಿದ್ದಾರೆ. ಸಂಬಂದಪಟ್ಟ ಅಧಿಕಾರಿಗಳು, ಕಾಮಗಾರಿ ಪೂರ್ಣಗೊಳಿಸಲು ಕಾರ್ಯಕ್ಷಮತೆ ಪ್ರದರ್ಶಿಸಬೇಕು ಎಂದರು.
ಯಗಚಿ ಕಾಮಗಾರಿ ವಿಳಂಬದಿಂದ ರೈತರು ಜಿಲ್ಲಾಧಿಕಾರಿ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಅಧಿಕಾರಿಗಳು ರೈತರ ಮುಂದೆ ಶೀರ್ಘವಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿ ತೆರಳಿದರು. ಆದರೆ, ಅದು ಅನುಸರಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಾಮಗಾರಿಯನ್ನು ಪೂರ್ಣಗೊಳಿಸಲು ಜಿಲ್ಲಾಡಳಿತ, ಅರಣ್ಯ ಇಲಾಖೆ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ.
ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್.ಗೋಪಾಲಕೃಷ್ಣ, ಉಪ ವಿಭಾಗಾಧಿಕಾರಿ ಶರತ್, ಉಪ ಅರಣ್ಯ ಸಂಕ್ಷಣಾಧಿಕಾರಿ ಗಣೇಶ್ಭಟ್, ಮುಖ್ಯ ಎಂಜಿನಿಯರ್ ಕೃಷ್ಣೇಗೌಡ, ಉಪಸ್ಥಿತರಿದ್ದರು. ಸೂಪರಿಟೆಂಡಿಂಗ್ ಎಂಜಿನಿಯರ ವೆಂಕಟೇಶ್, ಕಾರ್ಯಪಾಲಕ ಎಂಜಿನಿಯರ್ ರಾಜಶೇಖರ್ ಹಾಗೂ ನಾನಾ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಯೋಜನೆ ಪ್ರದೇಶಗಳಿಗೆ ನಿರ್ದೇಶಕರು ಭೇಟಿ
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಹಾಸನ ಜಿಲ್ಲೆಯ ಯೋಜನೆಗಳಾದ ಯಗಚಿ (ಹಳೇಬೀಡು -ಮಾದಿಹಳ್ಳಿ) ಹಾಗೂ ಕಾಚೇನಹಳ್ಳಿ ಏತ ನೀರಾವರಿ ಯೋಜನಾ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಅಗತ್ಯವಿರುವ ಹಲವು ಸಲಹೆ ಸೂಚನೆ ಮತ್ತು ಪ್ರಮುಖ ನಿರ್ದೇಶನಗಳನ್ನು ನೀಡಿದರು.
ಕಾಮಗಾರಿಗೆ ಹಣಕಾಸಿನ ಕೊರತೆ ಇಲ್ಲ. ಅಗತ್ಯವಿರುವಷ್ಟು ಹಣವನ್ನು ತಕ್ಷಣ ಒದಗಿಸಲು ಕಾವೇರಿ ನೀರಾವರಿ ನಿಗಮ ಸಿದ್ಧವಿದೆ. ನೇರವಾಗಿ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತನ್ನಿ. ಜಿಲ್ಲೆಯ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿ ಸಾಧ್ಯವಾದಷ್ಟು ಕೆರೆಗಳನ್ನು ತುಂಬಿಸಿ ಕೃಷಿಕರ ಬದುಕನ್ನು ನೆಮ್ಮದಿಯಾಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಎಂಜಿನಿಯರ್ಗಳು ಮಾಡಬೇಕು.
- ಕೆ.ಜಯಪ್ರಕಾಶ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ.