ಕ್ಷಯರೋಗ ಹರಡುವಿಕೆ ಆತಂಕಕಾರಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಏ. 1
ಭಾರತ ದೇಶದಲ್ಲಿ ಕ್ಷಯರೋಗದ ಸೋಂಕು ಪ್ರತಿದಿನ 40 ಸಾವಿರ ಜನರಿಗೆ ತಗಲುತ್ತಿದೆ. ಅಲ್ಲದೇ ಪ್ರತಿದಿನಕ್ಕೆ 1 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗುತ್ತಿದ್ದಾರೆ. ಇದು ಕಳವಳಕಾರಿ ವಿಷಯ ಎಂದು
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ವಿನಾಯಕ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಕ್ಯಾಥೋಲಿಕ್ ಹೆಲ್ತ್ ಅಸೋಸಿಯೇಷನ್, ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಮತ್ತು ಸ್ಫೂರ್ತಿ ಫೌಂಡೇಷನ್ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಮಾರಕವಾದ ಕ್ಷಯರೋಗ ಬಾಧೆಯು ಅತಿ ಭಯಾನಕವಾದುದು. ಇದಕ್ಕಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆ ನೀಡುವ ಅವಕಾಶವಿದೆ.
ರೋಗಿಗಳು ತಮಗೆ ಬಂದ ಕ್ಷಯರೋಗದ ಬಗ್ಗೆ ಉದಾಸೀನ ಮಾಡದೇ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗುವಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ ಮಾತನಾಡಿ, ಕ್ಷಯರೋಗ ಬಂದವರು ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಉಚಿತ ಚಿಕಿತ್ಸೆ ಪಡೆಯುವ ಮೂಲಕ ಇಲಾಖೆ ಕೈಗೊಳ್ಳುವ ಮುಂಜಾಗ್ರತೆ ಕ್ರಮಗಳತ್ತ ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಸಮುದಾಯದ ಪಾತ್ರ ಅಮೋಘವಾದುದು ಎಂದು ಅಭಿಪ್ರಾಯ ಪಟ್ಟರು. ರೋಗಿಗಳು ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.
ಸಂಜೀವಿನಿ ಸಾವಯವ ಕೃಷಿಕರ ಬಳಗದ ಅಧ್ಯಕ್ಷ ಶಿವಯೋಗಿ ಮಕರಿ, ಎಸ್.ಎಚ್. ಮಜೀದ್ ಉಪನ್ಯಾಸ ನೀಡಿದರು.
ಪ್ರಕಾಶ ಜಿ.ಪಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಇಮಾಮ ಸಾಬ್ ಮತ್ತು ಕೆ.ಆರ್. ಮಡಿವಾಳರ, ರುದ್ರೇಶ ಇತರರು ಪಾಲ್ಗೊಂಡಿದ್ದರು.