ಸ್ಟೈಫಂಡ್.ಗಾಗಿ ಕಾಲೇಜಿಗೆ ಬೀಗ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಏ. 1
ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ತರಬೇತಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಹಾಗೂ ಓಬಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ನೀಡುತ್ತಿಲ್ಲ. ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ನೀಡುತ್ತಿರುವ ರು. 50 ಸ್ಟೈಫಂಡ್ ನೀಡದೆ ಪ್ರಾಚಾರ್ಯರು, ಆಡಳಿತಾಧಿಕಾರಿಗಳು ಹಾಗೂ ಜೆಟಿಓಗಳು ಬಾರದೆ ಕೇವಲ ಅತಿಥಿ ಬೋಧಕರು ಮಾತ್ರ ಕಾಲೇಜಿಗೆ ಬಂದಿದ್ದಾರೆ. ಸರ್ಕಾರ ನಿಯೋಜಿಸಿದ ಅಧಿಕಾರಿಗಳು ಎಲ್ಲಿಗೆ ಹೋದರು ಎಂದು ಅತಿಥಿ ಬೋಧಕರನ್ನು ಕಾಲೇಜಿನಿಂದ ಹೊರ ಹಾಕಿ ಕಾಲೇಜಿಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾದ ಘಟನೆ ತಾಲೂಕಿನ ಗಂಜಿಗಟ್ಟಿಯ ಸರಕಾರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಸೋಮವಾರ ಜರುಗಿದೆ.
ತಾಲೂಕಿನ ಗಂಜಿಗಟ್ಟಿ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಸರ್ಕಾರವು ಆಡಳಿತಾಧಿಕಾರಿಗಳು ಹಾಗೂ ಓರ್ವ ಪ್ರಾಚಾರ್ಯ ಹಾಗೂ ಜೆಟಿಓ ಅವರನ್ನು ನಿಯೋಜನೆ ಮಾಡಿದ್ದು, ಆದರೆ, ಸರ್ಕಾರಿ ಅಧಿಕಾರಿಗಳು ಯಾರು ಇಲ್ಲದೆ ಕೇವಲ ಅತಿಥಿ ಬೋಧಕರು ಇಂದು ಬಂದಿದ್ದು ಅಧಿಕಾರಿಗಳು ಎಲ್ಲಿಗೆ ಹೋದರು ಎಂಬುವದು ವಿದ್ಯಾರ್ಥಿಗಳಿಗೆ ಕಾಡಿದ ಪ್ರಶ್ನೆ. ತಮಗೆ ತಿಳಿದಾಗ ಬಂದು ಹೋಗುತ್ತಿರುವ ಪ್ರಾಚಾರ್ಯರು, ಆಡಳಿತಾಧಿಕಾರಿಗಳು ಬಂದರೂ ಪ್ರಾಚಾರ್ಯರು ಬರಲಿ ಎಂದು ಸಬೂಬು ಹೇಳುತ್ತಾ ಸಬೂಬು ಹೇಳುತ್ತಾರೆ ಎಂದು ದೂರಿದರು.
ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ತರಬೇತಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ಪ. ಜಾತಿ ಪಂಗಡ, ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ರು. 4,350 ನೀಡಲಾಗುತ್ತದೆ ಹಾಗೂ ಓಬಿಸಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷಕ್ಕೆ ರು. 750 ನೀಡುತ್ತಿರುವ ವಿದ್ಯಾರ್ಥಿ ವೇತನ ನೀಡುತ್ತಿಲ್ಲ ಎಂದರು.
ಗಂಜಿಗಟ್ಟಿಯ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಸರ್ಕಾರ ಕುಡಿಯಲು ಹಾಗೂ ಶೌಚಾಲಯಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ನೀರಿನ ವ್ಯವಸ್ಥೆ ಇದೆ. ಆದರೆ, ಕಾಲೇಜಿಗೆ ನೀರು ಇಲ್ಲ. ಇದರ ಉಸ್ತುವಾರಿಗೆ ಯಾರನ್ನು ನಿಯೋಜನೆ ಮಾಡಿಲ್ಲ. ಆದ್ದರಿಂದ ಆಡಳಿತಾಧಿಕಾರಿಗಳಿಗೆ ಹಾಗೂ ಪ್ರಾಚಾರ್ಯರಿಗೆ ಗೊತ್ತಿದ್ದರೂ ಇಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಕ್ರೋಶ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರ ಸಂಭಾವನೆಯನ್ನು ಐಟಿಐ ಕಾಲೇಜಿನ ಪ್ರಾಚಾರ್ಯ ಆರ್.ಡಿ. ಮೊಕಾಶಿ ನೀಡುತ್ತಿಲ್ಲ ಎಂದು ಆರೋಪಿಸಿದ ಗೌರವ ಉಪನ್ಯಾಸಕರು ನಮಗೆ ನೀಡಬೇಕಾಗಿದ್ದ ಗೌರವ ಧನದಲ್ಲಿ ಶೇ. 14ರಷ್ಟು ಹಣವನ್ನು ನೀಡುವಂತೆ ಹೇಳುತ್ತಿದ್ದಾರೆ. ನಮಗೆ ಸಿಗುವ ಸ್ವಲ್ಪ ಬೋಧನಾ ಸಂಭಾವನೆ ಅದರಲ್ಲಿಯೆ ಶೇ. 14ರಂತೆ ಹಣ ನೀಡುವಂತೆ ಆಡಳಿತಾಧಿಕಾರಿಗಳು ಹಾಗೂ ತರಬೇತಿ ಅಧಿಕಾರಿಗಳಾದ ಟಿ.ಸಿ. ಚವ್ಹಾಣ ಅವರನ್ನು ಪ್ರಾಚಾರ್ಯರು ಕೇಳುತ್ತಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯ ಜಂಟಿ ನಿರ್ದೇಶಕ ರಮೇಶ ಸುದ್ದಿಗಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಈಗಾಗಲೇ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ತರಬೇತಿ ಸಂಸ್ಥೆ ಪ್ರಾಚಾರ್ಯರಿಗೆ ಮೂರು ನೋಟಿಸನ್ನು ನೀಡಲಾಗಿದೆ. ಆದರೆ, ನೋಟಿಸಿಗೆ ಉತ್ತರವನ್ನು ಕೂಡಾ ನೀಡಿರುವದಿಲ್ಲ. ಸಂಬಂಧಿಸಿದ ಸಂಬಂಧಿಸಿದ ವರದಿಯನ್ನು ಬೆಂಗಳೂರು ಕಮೀಷನರಿಗೆ ಕೂಡಾ ಸಮಗ್ರ ವರದಿ ಕಳಿಸಲಾಗಿದೆ ಎಂದರು.
ದೂರವಾಣಿ ಮೂಲಕ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟೈಫಂಡ್ ಹಾಗೂ ವಿದ್ಯಾರ್ಥಿಗಳ ಕುಂದುಟ ಕೊರತೆಗಳನ್ನು ತಕ್ಷಣ ಬಗೆಹರಿಸುವುದಾಗಿ ತಿಳಿಸಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ತರಬೇತಿ ವಿದ್ಯಾರ್ಥಿಗಳಾದ ಸುಭಾಸ ಮಾದರ, ಶಶಿಕುಮಾರ ಜಿ.ಕೆ, ಸೋಮಲಿಂಗಪ್ಪ ಕರಡಿ, ಅಸ್ಲಾ ನದಾಫ್, ಹಂಸರಾಜ ಕೆ.ಎಚ್, ಮಹೇಶ ಗಣಪ್ಪನವರ, ಪಕ್ಕಿರೇಶ, ನಿರಂಜನ ಕಲ್ಲನಗೌಡ್ರ, ಜಾಫರ್ ಕುರಟ್ಟಿ, ರವಿ ವೀರರಪ್ಪನವರ, ವಿ.ಎಸ್. ಹಿರೇಮಠ, ಎಂ.ಎನ್. ಇಂಗಳಗಿ ಇತರರು ಪ್ರತಿಭಟನೆಯಲ್ಲಿದ್ದರು.