ಕಾವಲುಗಾರ ನೇಣಿಗೆ ಶರಣು
ರಾಣಿಬೆನ್ನೂರು: ಇಲ್ಲಿನ ಕೃಷ್ಣ ಮೃಗ ಅಭಯಾರಣ್ಯದ ವಸತಿಗೃಹದಲ್ಲಿ ನೌಕರನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಅರಣ್ಯ ಕಾವಲುಗಾರ ಗಂಗಾಧರ ಶಿರಹಟ್ಟಿ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಬೇಸಿಗೆ ಶಿಬಿರಕ್ಕೆ ಆಹ್ವಾನ
ರಾಣಿಬೆನ್ನೂರು: ನಗರದ ಕೊಟ್ಟೀರೇಶ್ವರ ಮಠದಲ್ಲಿ 8ನೇ ತರಗತಿಗಿಂತ ಮೇಲ್ಪಟ್ಟ ಮಕ್ಕಳಿಗೆ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ. ಸಂಘಟಕ ವಿ.ವಿ. ಹರಪನಹಳ್ಳಿ ಅವರಲ್ಲಿ ಹೆಸರು ನೋಂದಾಯಿಸಬಹುದು. ಮಾಹಿತಿಗಾಗಿ ಮೊ. 9448165431, 9964030664ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
14ರಂದು ಮಧುರ ಮಧುರವೀ ಮಂಜುಳಗಾನ...
ಬ್ಯಾಡಗಿ: ಕನಕೋತ್ಸವದ ಅಂಗವಾಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಶ್ರೀ ಕಾಂತೇಶ ದೇವಸ್ಥಾನದ ಆವರಣದಲ್ಲಿ ಮಧುರ-ಮಧುರವೀ ಮಂಜುಳಗಾನ ಕಾರ್ಯಕ್ರಮ ಏ. 14ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಚಂದನವಾಹಿನಿ ಹೆಚ್ಚುವರಿ ಮಹಾ ನಿರ್ದೇಶಕ ನಾಡೋಜ ಮಹೇಶ ಜೋಶಿ ಅವರ ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕನಕದಾಸರ ಕುರಿತಾದ ಚಲನಚಿತ್ರ ಗೀತೆಗಳನ್ನು ವಿವಿಧ ಕಲಾವಿದರು ಹಾಡಲಿದ್ದಾರೆ. ಕನಕೋತ್ಸವ ಸಮಿತಿ, ಶ್ರೀ ಆಂಜನೇಯ ದೇವಸ್ಥಾನ ಸಮಿತಿ ಹಾಗೂ ಬೆಂಗಳೂರು ದೂರದರ್ಶನ ಕೇಂದ್ರದ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕನಕೋತ್ಸವ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.
ಇಂದಿನಿಂದ ಕಲ್ಮೇಶ್ವರ ಜಾತ್ರೆ
ಬ್ಯಾಡಗಿ: ತಾಲೂಕಿನ ಕಲ್ಲೇದೇವರ ಗ್ರಾಮದ ಶ್ರೀ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಏ. 3ರಿಂದ 5ರ ವರೆಗೆ ನಡೆಯಲಿವೆ. ಕೂಡಲದ ಗುರುನಂಜೇಶ್ವರ ಮಠದ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸುವರು. ಬುಧವಾರ ಬೆಳಗ್ಗೆ ರುದ್ರಾಭಿಷೇಕ, ಕಂಕಣ ಕಟ್ಟುವುದು, ರಾತ್ರಿ ಹೂವಿನ ತೇರು, ಏ. 4ರಂದು ಕಲ್ಮೇಶ್ವರ ದೇವರ ಮಹಾರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ನಡೆಯಲಿದೆ. ಏ. 5ರಂದು ಮಧ್ಯಾಹ್ನ ಓಕುಳಿ, ಅನಂತರ ಬೆಲ್ಲದ ಬಂಡಿ ಮಜಲು ನಡೆಯಲಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.
5ರಂದು ಪೂರ್ವಭಾವಿ ಸಭೆ
ಹಾವೇರಿ: ಹಾವೇರಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಭೆ ಏ. 5ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜರುಗಲಿದೆ. ಜಿಲ್ಲಾಧ್ಯಕ್ಷ ಎಚ್.ಎಫ್. ಮಣಕಟ್ಟಿ ಅಧ್ಯಕ್ಷತೆ ವಹಿಸುವರು. ಸಭೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡುವಂತೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಲಪ್ಪ ವಡ್ಡರ ಮತ್ತು ಕಾರ್ಯದರ್ಶಿ ಸುರೇಶ ಅಳ್ಳಳ್ಳಿ ತಿಳಿಸಿದ್ದಾರೆ.
ಈರಮ್ಮ ಮುಚ್ಚಂಡಿ ನಿಧನ
ಹಾನಗಲ್ಲ: ತಾಲೂಕಿನ ಅಕ್ಕಿಆಲೂರಿನ ಈರಮ್ಮ ಸಿದ್ದಪ್ಪ ಮುಚ್ಚಂಡಿ (76) ಮಂಗಳವಾರ ನಿಧನರಾದರು. ಮೃತರಿಗೆ ಪತಿ, ಆರು ಜನ ಪುತ್ರರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗ ಇದ್ದಾರೆ.