ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದೇಸಿ ಕ್ರೀಡೆ, ಸಂಸ್ಕೃತಿ ಉಳಿಸಿ, ಬೆಳೆಸಿ

Vishwanath S
Updated On : 3 Apr 2013, 10:45 am

ಹಾವೇರಿ: ದೇಸಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು, ಬೆಳೆಸುವಲ್ಲಿ ಇಂದಿನ ವಿದ್ಯಾರ್ಥಿಗಳ ಪಾತ್ರ ಹಿರಿದಾಗಿದ್ದು, ಅದಕ್ಕೆ ಪೂರಕ ಪರಿಸರವನ್ನು ದ. ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಗೋಟಗೋಡಿಯಲ್ಲಿರುವ ಜನಪದ ವಿಶ್ವವಿದ್ಯಾನಿಲಯದಲ್ಲಿ ಮೂಲ ಪರಂಪರೆ, ಸಾಂಸ್ಕೃತಿಕ ಮತ್ತು ದೇಸಿಯ ಮೂಲ ಕ್ರೀಡೆಗಳ ಬಗ್ಗೆ ವಿವಿಧ ಪ್ರಾಯೋಗಿಕ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಆರಂಭಿಸಲಾಗಿದ್ದು, ಇವುಗಳ ಪ್ರಯೋಜನವನ್ನು ಪದವಿ ಪೂರೈಸಿದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಜಾನಪದ ವಿವಿ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಕರೆ ನೀಡಿದರು.
ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಜರುಗಿದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕ್ರೀಡೆ, ಸಂಸ್ಕೃತಿ ಬೆಳೆಸಿ: ಇದರಿಂದ ಆರ್ಥಿಕವಾಗಿ ಸಬಲಾಗುವುದರ ಮೂಲಕ ದೇಶದ ಸಾಂಸ್ಕೃತಿಕ ಪರಂಪರೆ ಕಾಪಾಡುವುದರ ಜೊತೆಗೆ ಮುಂದಿನ ಯುವ ಪೀಳಿಗೆಗೆ ನಮ್ಮ ದೇಸಿ ಕ್ರೀಡೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.
ಸಂಸ್ಕೃತಿ ಜೀವಾಳ ಜನಪದ: ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಜನತೆ ಇಂದು ನಮ್ಮ ದೇಶದಲ್ಲಿರುವ ಅಪಾರ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಅರಿತು ಸರ್ವರಿಗೂ ಹಿತಕರವಾದ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಬೇಕಿದೆ. ಎಲ್ಲ ಸಂಸ್ಕೃತಿಗಳ ಜೀವಾಳ ಜನಪದ ಸಾಹಿತ್ಯ.
ಕಣ್ಮರೆ: ವಿಷಾದ: ಕರ್ನಾಟಕದಲ್ಲಿ ಸುಮಾರು 50ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರಿದ್ದು, ಅವರ ಸಂಸ್ಕೃತಿ ಮತ್ತು ಕಲಾ ವೈಭವ ಹಾಗೂ ಜೀವನ ಶೈಲಿ ವಿದೇಶಿ ವ್ಯಾಮೋಹದಿಂದ ಕಣ್ಮರೆಯಾಗುತ್ತಿದ್ದುದು ಆತಂಕಕಾರಿ ವಿಷಯವಾಗಿದೆ ಎಂದು ನೋವಿನಿಂದ ಹೇಳಿದರು.
ಇಂತಹ ಅಪ್ರಸ್ತುತ ಬೆಳವಣಿಗೆಯಿಂದ ದೂರವಿರಲು ವಿಶೇಷವಾಗಿ ಜನಪದ ವಿಶ್ವವಿದ್ಯಾಲಯದಲ್ಲಿ 6 ಭಾಷೆಗಳಲ್ಲಿ ವಿವಿಧ ಸಂಸ್ಕೃತಿ ಮತ್ತು ದೇಸಿ ಪರಂಪರೆಗಳ ಕುರಿತು ಮತ್ತು ದಕ್ಷಿಣ ಭಾರತದ ಕೃಷಿ ಜ್ಞಾನವನ್ನು ಕರ್ನಾಟಕ ಜ್ಞಾನ ಆಯೋಗದಿಂದ ಕನ್ನಡ ಜನಪದ ಗ್ರಂಥ ಸೂಚಿ ಎಂಬ ಸಮಗ್ರ ಸಾಹಿತ್ಯ ಕೃತಿಯನ್ನು ಬಿಡುಗಡೆಗೊಳಿಸಲಾಗಿದೆ ಎನ್ನುತ್ತ, ಈ ಎಲ್ಲ ಬೆಳವಣಿಗೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿ ಮುನ್ನಡೆಸುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ಪದವಿ ಕಾಲೇಜು ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರ ವಹಿಸಿದ್ದರು. ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶ್ರೀದೇವಿ ಮಹಾಂತ ಹಾಗೂ ನಂದಿನಿ ಮಠದ ನಾಡಗೀತೆ ಹಾಡಿದರು. ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಎನ್. ಕೆಂಚವೀರಪ್ಪ ಸ್ವಾಗತಿಸಿದರು. ಡಾ. ಸಿ. ಮಲ್ಲಣ್ಣ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಎನ್.ವಿ. ಕಂಬಾಳಿಮಠ ವಾರ್ಷಿಕ ವರದಿ ವಾಚಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಹಾವಿದ್ಯಾಲಯದ ವಿವಿಧ ಕ್ರೀಡಾ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅತಿಥಿಗಳು, ಅಧ್ಯಕ್ಷರು ಬಹುಮಾನ ವಿತರಿಸಿದರು. ಪ್ರೊ. ಗುರುಪಾದಯ್ಯ ವೀ. ಸಾಲಿಮಠ ನಿರೂಪಿಸಿದರು. ಸಬರೀನ್ ತಾಜ್ ದಾಲಾಯತ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement